
ಮಂಗಳೂರು (ಅ.26): ಧರ್ಮಸ್ಥಳ ಗ್ರಾಮದ ಬುರುಡೆ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿ ಅ.27ರಂದು ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ನಾಲ್ವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ಜಾರಿಗೊಳಿಸಿದೆ. ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ ಎಚ್ಚರಿಕೆ ನೀಡಿದೆ. ಇದರೊಂದಿಗೆ ಎಸ್‌ಐಟಿ ತನಿಖೆ ಮಹತ್ವದ ಅಂತಿಮ ಘಟ್ಟ ತಲುಪುವ ಸಾಧ್ಯತೆ ಕಂಡುಬಂದಿದೆ.
ಸೋಮವಾರ ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠ್ಠಲಗೌಡಗೆ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಬಿಎನ್‌ಎಸ್ಎಸ್ 35(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ್ದು, ಹಲವು ಅಂಶವನ್ನು ಉಲ್ಲೇಖಿಸಿದ್ದಾರೆ.
ಈವರೆಗಿನ ತನಿಖೆಯಲ್ಲಿ ಕಂಡುಕೊಂಡ ಪ್ರಕರಣದ ಕುರಿತಂತೆ ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳುವ ಬಗ್ಗೆ ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ. ಆದ್ದರಿಂದ ಈ ಕೆಳಕಂಡ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಒಂದು ವೇಳೆ ನೋಟಿಸ್‌ನಲ್ಲಿ ನೀಡಿರುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಪಾಲನೆ ಮಾಡದೇ ಹೋದಲ್ಲಿ ಅಥವಾ ಹಾಜರಾಗದೇ ಹೋದಲ್ಲಿ ನಿಮ್ಮನ್ನು ಬಿಎನ್ಎಸ್ಎಸ್ 35(6) ಅಡಿಯಲ್ಲಿ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
1. ನೀವು ಯಾವುದೇ ಅಪರಾಧವನ್ನು ಮುಂದಿನ ದಿನಗಳಲ್ಲಿ ಎಸಗುವಂತಿಲ್ಲ.
2. ಈ ಪ್ರಕರಣದ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು.
3. ನೀವು ಈ ಪ್ರಕರಣದ ಸಂಗತಿ ಮತ್ತು ಸಂದರ್ಭಗಳನ್ನು ಅರಿತ ಯಾವುದೇ ವ್ಯಕ್ತಿಗೆ ನ್ಯಾಯಾಲಯದ ಮುಂದೆ ಅಥವಾ ಪೊಲೀಸ್ ಅಧಿಕಾರಿಗಳ ಮುಂದೆ ಸತ್ಯ ಹೇಳದಂತೆ ಒತ್ತಾಯಿಸುವುದಾಗಲೀ, ಹೆದರಿಸುವುದಾಗಲೀ, ಪ್ರಲೋಭನೆ ನೀಡುವುದಾಗಲೀ ಮಾಡತಕ್ಕದ್ದಲ್ಲ.
4. ನೀವು ಅಗತ್ಯವಿದ್ದಾಗ ಮತ್ತು ನಿರ್ದೇಶನಕ್ಕೊಳಪಟ್ಟಾಗ ನ್ಯಾಯಾಲಯದ ಮುಂದೆ ಹಾಜರಾಗುವುದು.
5. ನೀವು ತನಿಖೆಗೆ ಸಹಕಾರ ನೀಡುವುದಲ್ಲದೆ ಅಗತ್ಯವಿದ್ದಾಗ ಈ ಪ್ರಕರಣದ ತನಿಖೆಯಲ್ಲಿ ಪಾಲ್ಗೊಳ್ಳುವುದು.
6. ಈ ಪ್ರಕರಣದ ತನಿಖೆಗೆ ಸೂಕ್ತ ರೀತಿ ಸಹಕಾರ ನೀಡುತ್ತಾ ಯಾವುದೇ ಸಂಗತಿಗಳನ್ನು ಮರೆಮಾಚದೆ ಎಲ್ಲ ನಿಜ ಸಂಗತಿಗಳನ್ನು ತನಿಖಾಧಿಕಾರಿ ಕೇಳಿದಾಗ ನೀಡುವುದು ಮತ್ತು ಹೇಳುವುದು.
7. ನೀವು ತನಿಖೆಗೆ ಅಗತ್ಯವಾಗಿರುವ ಎಲ್ಲ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸುವುದು.
8. ನೀವು ಸಹ ಆರೋಪಿತರ ಗುರುತಿಸುವಿಕೆ ಮತ್ತು ಬಂಧನದ ಕುರಿತಂತೆ ಸಹಾಯವನ್ನು ನೀಡಬೇಕು.
9. ನೀವು ಈ ಪ್ರಕರಣದ ತನಿಖೆ/ವಿಚಾರಣೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳನ್ನು ನಾಶಮಾಡತಕ್ಕದ್ದಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ