
ಬೆಂಗಳೂರು, (ಅ.26): ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ನ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯುತ್ತಿರುವ ಪಥಸಂಚಲನ ನಡೆಸಿಯೇ ನಡೆಸುತ್ತೇವೆಂಬ ಆರೆಸ್ಸೆಸ್ ಮುಖಂಡರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನ.2 ರಂದು RSS ಪಥಸಂಚಲನ ನಡೆಸುವುದಾಗಿ ಘೋಷಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ಕಾನೂನಿಗಿಂತ ದೊಡ್ಡವರಾ ಅವರು? ಸಂವಿಧಾನಕ್ಕಿಂತ ದೊಡ್ಡವರಾದ್ರಾನ್ರಿ? ಎಂದು ಪ್ರಶ್ನಿಸಿದರು. ಇವರು ಕಾನೂನು ಮೀರಿ ಮಾಡೋಕ್ಕೆ ಹೋದ್ರೆ ಸರ್ಕಾರ ಏನು ಸುಮ್ಮನೆ ಕೂತಿರುತ್ತಾ? ಇವರು ಆರ್‌ಎಸ್‌ಎಸ್‌ನಲ್ಲಿ ಮಾತಾಡಿದಂತೆ ಸಾರ್ವಜನಿಕವಾಗಿ ಮಾತಾಡೋಕ್ಕೆ ಹೋದ್ರೆ ಆಗಲ್ಲ. ಕಲ್ಲಡ್ಕ ಅಲ್ಲ ಅವರಪ್ಪನಾದ್ರೂ ಅಷ್ಟೇ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಆರ್ ಎಸ್ ಎಸ್ ಹೊಗಳೋದು ಬಿಜೆಪಿಯಲ್ಲಿ ಇರುವವರಿಗೆ ಅನಿವಾರ್ಯ. ಬಸವರಾಜ ಬೊಮ್ಮಾಯಿ ಸಾಹೇಬ್ರು ಎಲ್ಲ ಜ್ಞಾನ ಇರುವ ಮನುಷ್ಯ. ಕಾನೂನಿನ ಅರಿವು ಅವರಿಗೆ ತುಂಬಾ ಚೆನ್ನಾಗಿಯೇ ಇದೆ. ಅವರ ತಂದೆ ಸುಪ್ರಿಂ ಕೋರ್ಟ್ ತನಕ ಹೋಗಿ ಹೋರಾಟ ಮಾಡಿದ್ರು. ಅದೆ ಜಡ್ಜ್ ಮೆಂಟ್ ನೋಡಿಬಿಟ್ಟರೆ ಬೊಮ್ಮಾಯಿಯವರು ಬಿಜೆಪಿ ಬಿಟ್ಟು ಹೊರಗೆ ಬರುತ್ತಾರೆ. ಎಲ್ಲ ಗೊತ್ತಿದ್ದೂ ಅವರು ಆರೆಸ್ಸೆಸ್ ಹೊಗಳ್ತಿದ್ದಾರೆ. ಅದು ಅವರಿಗೆ ಅನಿವಾರ್ಯವಾಗಿದೆ ಎಂದರು.
ಪರೋಕ್ಷವಾಗಿ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ:
ಇವರು ಭಾರತೀಯ ಸಂಸ್ಕೃತಿಯ ವಾರಸುದಾರರು, ಸಂಸ್ಕೃತಿ ಹೇಗಿದೆ ನೋಡಿ ಎಂದು ಶಾಸಕ ಪ್ರದೀಪ್ ಈಶ್ವರ ವಿರುದ್ಧ 'ಮಗನೇ..' ಪದ ಬಳಸಿ ಅವಾಚ್ಯವಾಗಿ ನಿಂದಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಾಗ್ದಾಳಿ ನಡೆಸಿದರು.
ಇವರೆಲ್ಲ ಚಲಾವಣೆ ಇಲ್ಲದ ನಾಣ್ಯಗಳು ಇಂಥವರನ್ನ ಮುಂದೆ ಬಿಟ್ಟು ನಮ್ಮನ್ನ ಟೀಕೆ ಮಾಡ್ತಾರೆ. ಇವರಿಗೆ ಹೇಳುವುದಕ್ಕೆ ಬೇರೆ ವಿಷಯಗಳೇ ಇಲ್ಲ. ಅದಕ್ಕೆ ನಮ್ಮ ಬಣ್ಣ, ಹೇರ್‌ಲಾಸ್.. ಇದರ ಬಗ್ಗೆಯೇ ಮಾತಾಡ್ತಾರೆ ಎಂದು ಟೀಕಿಸಿದರು.
RSS ದೇಣಿಗೆ ಮೂಲ ಯಾವುದು? ದೇವಸ್ಥಾನ ಹುಂಡಿಗಿಂತಲೂ ದೊಡ್ಡದ್ದೇ?
RSSನ ಹಣಕಾಸಿನ ಮೂಲಗಳ ಕುರಿತು ಗಂಭೀರ ಪ್ರಶ್ನೆಗಳು ಎತ್ತಿದ ಪ್ರಿಯಾಂಕ್ ಖರ್ಗೆ ಅವರು, ಆರ್‌ಎಸ್‌ಎಸ್ ದೇವರಿಗಿಂತ ದೊಡ್ಡವರಾಗಿ ಬಿಟ್ಟಿದೆಯಾ? ಆರ್‌ಎಸ್‌ಎಸ್‌ಗೆ ದೇಣಿಗೆ ಕೊಡುವವರು ಯಾರು ಎಂಬುದು ಮಾಹಿತಿ ಬೇಕು. ಇವರಿಗೆ ಎಲ್ಲಿಂದ ದೇಣಿಗೆ ಬರುತ್ತಿದೆ? ಹೊರರಾಜ್ಯ, ಹೊರದೇಶದಿಂದ ಬರುತ್ತಿದೆಯಾ? ಒಂದು ದೇವಸ್ಥಾನದ ಹುಂಡಿ ಹಣಕ್ಕೂ ಲೆಕ್ಕ ಇರುತ್ತದೆ. ಹುಂಡಿಗೆ ಎಷ್ಟು ಹಣ ಬಿದ್ದಿದೆ ಎಂಬುದನ್ನು ಎಣಿಸಿ ಲೆಕ್ಕ ಇಡುತ್ತಾರೆ. ಅದನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೇ ಬಳಸುತ್ತಾರೆ. ಹಾಗಾದರೆ ಆರ್‌ಎಸ್‌ಎಸ್ ದೇಣಿಗೆ ಲೆಕ್ಕ ಎಲ್ಲಿದೆ? ದೇವಸ್ಥಾನ-ದೇವರಿಗಿಂತ ಆರೆಸ್ಸೆಸ್ ದೊಡ್ಡವರಾಗಿಬಿಟ್ಟರಾ? ಹಣ ಮೂಲ ತಿಳಿಸಿ ಎಂದು ಸವಾಲು ಹಾಕಿದರು.
ನನ್ನ ಮಾತಲ್ಲಿ ಹಿಂದೆ ಒಂದು ಮುಂದೆ ಒಂದು ಇಲ್ಲ. ನಾನು ಸಾರ್ವಜನಿಕವಾಗಿ ಏನು ಮಾತಾಡುತ್ತೀನೋ ಖಾಸಗಿಯಾಗಿಯೂ ಅದನ್ನೇ ಮಾತಾಡ್ತೀನಿ. ಯಾರ ಮೇಲೂ ಪ್ರಭಾವ ಬೀರುತ್ತಿಲ್ಲ. 11 ಸಂಘಟನೆಗಳು ಚಿತ್ತಾಪುರದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೋರಿವೆ. ಅದಕ್ಕೆ ಅಧಿಕಾರಿಗಳು ಶಾಂತಿ ಸಭೆ ಮಾಡ್ತಾರೆ. ಅಧಿಕಾರಿಗಳೇ ತೀರ್ಮಾನ ಮಾಡಿ ಕೋರ್ಟ್‌ಗೆ ಸಲ್ಲಿಕೆ ಮಾಡ್ತಾರೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನೇ ನಾವೂ ಪಾಲನೆ ಮಾಡುತ್ತೇವೆ ಎಂದರು.
ಹೈಕಮಾಂಡ್ ತೀರ್ಮಾನ ಅಂತಿಮ:
ಇನ್ನು ಸಚಿವ ಸಂಪುಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಪಕ್ಷ ಏನು ಹೇಳುತ್ತದೋ ಅದನ್ನೇ ನಾವು ಮಾಡುತ್ತೇವೆ. ತ್ಯಾಗ ಅಲ್ಲ, ಫಾಲೋವಿಂಗ್ ದಿ ಆರ್ಡರ್ ಪಕ್ಷದಿಂದ ನಾನು ಹೊರತು, ನನ್ನಿಂದ ಪಕ್ಷ ಅಲ್ಲ ಅಲ್ವಾ? ಬಿ ಫಾರಂ ಬೇಕಾದಾಗ ಪಕ್ಷ ಬೇಕು, ಚುನಾವಣೆ ಗೆಲ್ಲಬೇಕು ಅಂದಾಗ ಪಕ್ಷ ಬೇಕು, ಪಕ್ಷ ಹೇಳಿದಾಗ ಎಲ್ಲ ಕೆಲಸಕ್ಕೂ ನಾವು ಸಿದ್ದರಿದ್ದೇವೆ. ನಾನೇ ಇರಬಹುದು, ಕೃಷ್ಣ ಬೈರೇಗೌಡ ಇರಬಹುದು ದಿನೇಶ್ ಇರಬಹುದು ಪಕ್ಷ ಸೂಚನೆ ಕೊಟ್ಟರೆ ಎಲ್ಲ ಕೆಲಸವನ್ನೂ ಮಾಡಬೇಕಾಗುತ್ತೆ. ನಾಳೆ ಚಿತ್ತಾಪುರ ಬೇಡ ಉತ್ತರ ಕನ್ನಡದಿಂದ ಸ್ಪರ್ಧೆ ಮಾಡು ಅಂದ್ರೆ ನಾನು ಅದಕ್ಕೂ ಸಿದ್ದವಾಗಿರಬೇಕಾಗುತ್ತದೆ ಎಂದರು.
ದನ ಕಾಯೋಕೆ ಮಂತ್ರಿ ಸ್ಥಾನ ಎಂದ ಪ್ರಿಯಾಂಕ್ ಖರ್ಗೆ:
ಕಲ್ಬುರ್ಗಿ ಅಧಃಪತನಕ್ಕೆ ಖರ್ಗೆ ಕೊಡುಗೆ ಹೆಚ್ಚಲ್ಲವೇ ಎಂಬ ಸುನೀಲ್‌ಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ ಅವರು, ಕಲ್ಬುರ್ಗಿ ಹಿಂದುಳಿದ ಜಿಲ್ಲೆ ಅಂತಲೇ 371j ತಂದಿರೋದು
ಕಾಮನ್ ಸೆನ್ಸ್ ಇಲ್ಲದೆ ಮಾತನಾಡ್ತಾರೆ. ಕಲ್ಬುರ್ಗಿ ತಂದಿರೋ ಸೆಂಟ್ರಲ್ ಯೂನಿವರ್ಸಿಟಿನ ಆರ್‌ಎಸ್‌ಎಸ್ ಶಾಖೆ ಮಾಡಿಟ್ಟಿದ್ದೀರಲ್ಲ. ನಿಮ್ಮ ಸರ್ಕಾರದಲ್ಲಿ ಕಲ್ಬುರ್ಗಿಗೆ ಇದುವರೆಗೂ ಒಂದು ಸಚಿವ ಸ್ಥಾನ ಕೊಟ್ಟಿಲ್ಲ. ಕಲ್ಬುರ್ಗಿ ಯಾದಗಿರಿ ಅಂತ ಬಂದಾಗ ಪಶು ಸಂಗೋಪನಾ ಇಲಾಖೆ ಫಿಕ್ಸ್ ಆಗಿತ್ತು. ದನ ಕಾಯೋ ಮಂತ್ರಿ ಸ್ಥಾನ ಕೊಟ್ಟಿದ್ದೀರ ಅಷ್ಟೇ. ತಿರುಗೇಟು ಕೊಡುವ ಭರದಲ್ಲಿ ಪಶುಸಂಗೋಪನಾ ಇಲಾಖೆ ದನ ಕಾಯೋಕೆ ಸೀಮಿತ ಎಂದ ಪ್ರಿಯಾಂಕ್ ಖರ್ಗೆ! ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ