ಮುನಿರತ್ನ ಬಂಧನದ ಹಿಂದೆ ಡಿಕೆಶಿ, ಡಿಕೆಸು ಕೈವಾಡ: ರಮೇಶ ಜಾರಕಿಹೊಳಿ

Published : Sep 17, 2024, 10:17 AM IST
ಮುನಿರತ್ನ ಬಂಧನದ ಹಿಂದೆ ಡಿಕೆಶಿ, ಡಿಕೆಸು ಕೈವಾಡ: ರಮೇಶ ಜಾರಕಿಹೊಳಿ

ಸಾರಾಂಶ

ಡಿ.ಕೆ.ಶಿವಕುಮಾರ್‌ ಪ್ರಥಮವಾಗಿ ನನ್ನ ಬಲಿ ತೆಗೆದುಕೊಂಡರು. ನಂತರ ದೇವೇಗೌಡರ ಕುಟುಂಬ ಬಲಿ ತೆಗೆದುಕೊಂಡರು. ಈಗ ಮುನಿರತ್ನ ಸರದಿ. ನಾನು ಬಹಳ ಗಟ್ಟಿ, ಸಮರ್ಥವಾಗಿ ಎದುರಿಸಿದೆ. ಹೀಗಾಗಿ ಹೊರಗಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದವರ ಸಿ.ಡಿ ಸರದಿ ಬರುವುದರಲ್ಲಿ ಅಚ್ಚರಿ ಇಲ್ಲ: ಶಾಸಕ ರಮೇಶ ಜಾರಕಿಹೊಳಿ 

ಅಥಣಿ(ಸೆ.17):  ಶಾಸಕ ಮುನಿರತ್ನ ಬಂಧನ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಹೋದರ ಡಿ.ಕೆ.ಸುರೇಶ ಮತ್ತು ಕುಸುಮಾ ಅವರ ಕೈವಾಡ ಇದೆ. ಆತ ಡಿ.ಕೆ.ಶಿವಕುಮಾರ್‌ ಅಲ್ಲ ಸೀಡಿ ಶಿವು. ತನ್ನ ವಿರುದ್ಧ ಯಾರಿದ್ದಾರೋ ಅವರೆಲ್ಲರ ಸಿ.ಡಿ. ಬಿಡುಗಡೆ ಮಾಡಿ ಜೈಲಿಗೆ ಕಳಿಸುತ್ತಾನೆ. ಮುನಿರತ್ನ ಪ್ರಕರಣದ ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕೆಂದು ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದರು.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಪ್ರಥಮವಾಗಿ ನನ್ನ ಬಲಿ ತೆಗೆದುಕೊಂಡರು. ನಂತರ ದೇವೇಗೌಡರ ಕುಟುಂಬ ಬಲಿ ತೆಗೆದುಕೊಂಡರು. ಈಗ ಮುನಿರತ್ನ ಸರದಿ. ನಾನು ಬಹಳ ಗಟ್ಟಿ, ಸಮರ್ಥವಾಗಿ ಎದುರಿಸಿದೆ. ಹೀಗಾಗಿ ಹೊರಗಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದವರ ಸಿ.ಡಿ ಸರದಿ ಬರುವುದರಲ್ಲಿ ಅಚ್ಚರಿ ಇಲ್ಲ. ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವಂತಹ ಸಿಡಿಗಳು ಅವರಿಂದ ಹೊರಬರಹುದು. ಇನ್ನೂ ಸಾಕಷ್ಟು ಸಿಡಿಗಳು ಅವರ ಬಳಿ ಇವೆ. ಇದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷಾತೀತ ತನಿಖೆ ನಡೆಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಲ್ಲಿ ಮನವಿ ಮಾಡಿಕೊಳ್ಳುವೆ ಎಂದು ತಿಳಿಸಿದರು.

ಸಿ.ಡಿ. ಶಿವು ಸಿಎಂ ಆದರೆ ಕರ್ನಾಟಕ ಅಧೋಗತಿ: ರಮೇಶ ಜಾರಕಿಹೊಳಿ

ನಮ್ಮ ಪಕ್ಷದವರಿಗೆ ನೋಟಿಸ್ ಕೊಡಿ:

ಆಡಿಯೋದಲ್ಲಿರುವ ಧ್ವನಿ ಶಾಸಕ ಮುನಿರತ್ನರದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ನಮ್ಮ ಪಕ್ಷದವರೇ ಅವರ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸಂಸದ ರಮೇಶ ಜಿಗಜಿಣಗಿ ಅವರು ವಯಸ್ಸಿನಲ್ಲಿ ಹಿರಿಯ ಅನುಭವಿಗಳು. ಅವರೂ ಮುನಿರತ್ನ ವಿರುದ್ಧ ಮಾತನಾಡುವುದು ಸರಿಯಲ್ಲ. ಬಿಜೆಪಿ ಹೈಕಮಾಂಡ್‌ ಮೊದಲು ಇಂತವರಿಗೆ ನೋಟಿಸ್‌ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯೇಂದ್ರ ನೇಮಕಕ್ಕೆ ವಿರೋಧ:

ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿರುವುದಕ್ಕೆ ನನ್ನ ವಿರೋಧವಿದೆ. ಪಕ್ಷಕ್ಕೆ ಭ್ರಷ್ಟತೆಯ ಲೇಪನ ಬಂದಿರುವುದೇ ವಿಜಯೇಂದ್ರನಿಂದ ಎಂದು ಗಂಭೀರ ಆರೋಪ ಮಾಡಿದ ಅವರು, ಅವನಿಗೆ ನಮ್ಮ ಪಕ್ಷದ ಸಿದ್ದಾಂತದ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಅವನ ನಾಯಕತ್ವ ನಾವು ಒಪ್ಪುವುದಿಲ್ಲ. ಅವರ ತಂದೆ ಯಡಿಯೂರಪ್ಪರನ್ನು ನಾವು ಗೌರವಿಸುತ್ತೇವೆ. ಪಕ್ಷಕ್ಕೆ ಸಾಮೂಹಿಕ ನಾಯಕತ್ವದ ಅವಶ್ಯಕತೆ ಇದೆ. ಏಕ ವ್ಯಕ್ತಿಗೆ ಪಕ್ಷದ ಜವಾಬ್ದಾರಿ ನೀಡಬಾರದು. ಸಾಮೂಹಿಕ ನಾಯಕತ್ವಕ್ಕೆ ನೀಡಿದರೆ 136ಕ್ಕೂ ಅಧಿಕ ಸ್ಥಾನ ಗೆದ್ದು ತೋರಿಸುತ್ತೇವೆ ಎಂದು ಹೇಳಿದರು.

ಮುಡಾ ಹಗರಣದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಯಡಿಯೂರಪ್ಪನವರ ವಿರುದ್ಧ ಆರೋಪ ಬಂದಾಗಿ ಏನು ಮಾತನಾಡಿದ್ದರು ಎಂಬುದನ್ನು ಅರಿತುಕೊಳ್ಳಲಿ. ವಿಚಾರ ಮಾಡಿ ತಿರ್ಮಾನ ಕೈಗೊಳ್ಳಬೇಕು ಎಂದರು.

ರಾಜ್ಯಪಾಲರ ಭೇಟಿ:

ಮುಡಾ ಹಗರಣಕ್ಕಿಂತ ದೊಡ್ಡ ಹಗರಣ ವಾಲ್ಮೀಕಿ ನಿಗಮ ಹಣ ದುರುಪಯೋಗ ಕುರಿತು ತ್ವರಿತವಾಗಿ ತನಿಖೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಈ ಹಗರಣ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಲು ಹೈಕಮಾಂಡ್‌ ಅನುಮತಿ ಕೇಳಿದ್ದೇವೆ. ಅವರ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಭಯೋತ್ಪಾದನೆ, ಕೋಮು ಗಲಭೆಗಳು ಹೆಚ್ಚಾಗಿವೆ. ಇಡೀ ದೇಶದಲ್ಲಿ ಬಿಜೆಪಿಗೆ ಕೇವಲ 40 ಸ್ಥಾನ ಕಡಿಮೆ ಬಂದಿದ್ದಕ್ಕೆ ಕಾಂಗ್ರೆಸ್ ಪಕ್ಷದವರು ಇಷ್ಟು ಹಾರಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕೈಬಲಪಡಿಸಿದರೆ ಮಾತ್ರ ಹಿಂದುಗಳ ರಕ್ಷಣೆ ಸಾಧ್ಯ ಎಂದು ವಿವರಿಸಿದರು.

ನಮ್ಮೊಳಗೆ ಭಿನ್ನಭಿಪ್ರಾಯ ಬೇಡ: ಯತ್ನಾಳ್‌, ರಮೇಶ್‌ಗೆ ರೇಣುಕಾಚಾರ್ಯ ಮನವಿ

ಸತೀಶ ಜಾರಕಿಹೋಳಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ರಮೇಶ ಜಾರಕಿಹೊಳಿ, ಮುಂದಿನ ದಿನಗಳಲ್ಲಿ ಅಥಣಿ, ಕಾಗವಾಡ ಮತ್ತು ಕುಡಚಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸುತ್ತೇವೆ. ಸ್ಥಳೀಯ ಚುನಾವಣೆ ಹಿಡಿದು ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ. ಅದಕ್ಕಾಗಿ ಬೇಕಾಗುವ ತಂತ್ರ, ಪ್ರತಿತಂತ್ರ ಹೆಣೆಯುತಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ. ಕಾಂಗ್ರೆಸ್ ಮುಖಂಡ ಧರೆಪ್ಪ ಠಕ್ಕನ್ನವರ ಇದ್ದರು.

ರಾಹುಲ್‌ ಗಾಂಧಿಯವರು ವಿದೇಶದಲ್ಲಿ ಕುಳಿತು ದೇಶದ ಮಾನ ಕಳೆಯುತ್ತಿದ್ದಾರೆ. ಅಲ್ಲಿ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳುತ್ತಾರೆ. ಇಲ್ಲಿ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಾರೆ. ಡಾ.ಬಾಬಾಸಾಹೇಬ ಅಂಬೇಡ್ಕರ್‌ ಕಂಡ ಸ್ವಾತಂತ್ರ್ಯ ಇನ್ನೂ ಈ ದೇಶಕ್ಕೆ ಸಿಕ್ಕಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್