ಆ ಒಂದು ಭರವಸೆ... ತಣ್ಣಗಾದ ಅತೃಪ್ತ ಶಾಸಕರು!

By Web DeskFirst Published Dec 19, 2018, 12:38 PM IST
Highlights

ಕಾಂಗ್ರೆಸ್‌ ಶಾಸಕಾಂಗ ಸಭೆಯ ಆರಂಭದಲ್ಲಿ ಅತೃಪ್ತಿ ಸ್ಫೋಟ| ಡಿ.22ಕ್ಕೆ ಸಂಪುಟ ವಿಸ್ತರಣೆ ಖಚಿತ ಎನ್ನುತ್ತಿದ್ದಂತೆ ಶಮನ!

ಬೆಳಗಾವಿ[ಡಿ.19]: ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಶಾಸ​ಕರ ಒಳ ಬೇಗುದಿ ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಫೋಟಿಸಿದೆ. ಆದರೆ, ಸಚಿವ ಸಂಪುಟ ವಿಸ್ತ​ರಣೆ ಡಿ.22ಕ್ಕೆ ನಡೆ​ಯಲಿದೆ ಎಂದು ಸಭೆ​ಯಲ್ಲಿ ಖಚಿತ ಭರ​ವಸೆ ನೀಡಿರುವ ಕಾಂಗ್ರೆಸ್‌ ನಾಯ​ಕರು, ಶಾಸ​ಕರ ಆಕ್ರೋಶ ಮೇರೆ ಮೀರ​ದಂತೆ ತಡೆ​ಯು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾ​ರೆ.

ಆದಾಗ್ಯೂ, ಪಕ್ಷದ ಹಿರಿಯ ಶಾಸ​ಕರು ಸೇರಿ​ದಂತೆ ಸುಮಾರು 20ಕ್ಕೂ ಹೆಚ್ಚು ಶಾಸ​ಕರು ಸಭೆಗೆ ಗೈರು ಹಾಜ​ರಾ​ಗುವ ಮೂಲಕ ರಾಜ್ಯ ನಾಯ​ಕ​ತ್ವದ ಬಗ್ಗೆ ತಮ್ಮ ಅಸ​ಮಾ​ಧಾ​ನ​ವನ್ನು ಬಹಿ​ರಂಗ​ವಾ​ಗಿಯೇ ವ್ಯಕ್ತ​ಪ​ಡಿ​ಸಿ​ದ್ದಾರೆ.

ಇನ್ನು ಸಭೆಗೆ ಹಾಜ​ರಾ​ಗಿದ್ದ ಶಾಸ​ಕರು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ, ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಸಿಗದಿರುವುದು ಹಾಗೂ ಪಕ್ಷದ ಹಿರಿಯ ನಾಯಕರ ವರ್ತನೆ ಬಗ್ಗೆ ಸಭೆ​ಯಲ್ಲಿ ನೇರಾ​ನೇರ ಆರೋ​ಪ​ಗ​ಳನ್ನು ಮಾಡಿ​ದ್ದಾರೆ. ಅಲ್ಲದೆ, ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಕೇವಲ ಜೆಡಿ​ಎಸ್‌ ಶಾಸ​ಕರು ಹಾಗೂ ನಾಯ​ಕ​ರನ್ನು ಒಲೈ​ಸು​ತ್ತಿ​ದ್ದರೆ, ಜೀರೋ ಟ್ರಾಫಿಕ್‌ ಬಳ​ಸುವ ಕಾಂಗ್ರೆ​ಸ್‌ನ ಹಿರಿಯ ಸಚಿ​ವರು ಪಕ್ಷದ ಶಾಸ​ಕರ ಸಮ​ಸ್ಯೆ​ಗಳ ಬಗ್ಗೆ ಕ್ಯಾರೇ ಎನ್ನು​ತ್ತಿಲ್ಲ ಎಂದು ಪಕ್ಷದ ಸಚಿ​ವರ ಬಗ್ಗೆಯೂ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ.

ಸಂಪುಟ ವಿಸ್ತ​ರಣೆ ಎಂಬ ತುಪ್ಪ:

ಶಾಸ​ಕಾಂಗ ಪಕ್ಷದ ಸಭೆ ಆರಂಭಗೊಳ್ಳು​ತ್ತಿ​ದ್ದಂತೆಯೇ ಶಾಸ​ಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಿ.20ರಂದು ಸಂಜೆ 6 ಗಂಟೆಗೆ ರಾಹುಲ್‌ಗಾಂಧಿ ಭೇಟಿ ನಿಗ​ದಿ​ಯಾ​ಗಿದೆ. ಡಿ.22ರಂದು ನಿಗದಿಯಂತೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಜತೆಗೆ, ಸಂಪುಟ ದರ್ಜೆ ಸ್ಥಾನ ಮಾನ ಹೊಂದಿ​ರುವ 20 (ಜೆ​ಡಿ​ಎಸ್‌ ಪಾಲು ಸೇರಿ ಒಟ್ಟು 30) ನಿಗಮ ಮಂಡಳಿ, ಎರಡು ಮುಖ್ಯ​ಮಂತ್ರಿ​ಯ​ವರ ರಾಜ​ಕೀಯ ಕಾರ್ಯ​ದ​ರ್ಶಿ ಹುದ್ದೆ​ಗಳು ಮತ್ತು 10 ಸಂಸದೀಯ ಕಾರ್ಯದರ್ಶಿಗಳ ನೇಮಕ ನಡೆ​ಯ​ಲಿದೆ ಎಂದು ಖಚಿ​ತ​ವಾಗಿ ಹೇಳಿ​ದ​ರು.

ಸಿದ್ದ​ರಾ​ಮಯ್ಯ ಅವ​ರಿಂದಲೇ ನೇರ​ವಾಗಿ ಈ ಭರ​ವಸೆ ದೊರೆತ ಹಿನ್ನೆ​ಲೆ​ಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತ​ಪ​ಡಿ​ಸಲು ಸಜ್ಜಾ​ಗಿದ್ದ ಅತೃಪ್ತ ಶಾಸ​ಕರ ಗುಂಪು, ಅಕ​ಸ್ಮಾತ್‌ ಸಿದ್ದ​ರಾ​ಮಯ್ಯ ಅವರ ಮಾತು ನಿಜ​ವಾಗಿ ಸಂಪುಟ ವಿಸ್ತ​ರಣೆ ನಡೆ​ಯು​ವಂತಿ​ದ್ದರೆ ಅಸ​ಮಾ​ಧಾ​ನದ ಮಾತು​ಗ​ಳಿಂದಾಗಿ ತಮ್ಮ ಅವ​ಕಾಶ ತಪ್ಪಿ​ಸಿ​ಕೊ​ಳ್ಳ​ಬಾ​ರದು ಎಂದು ತೆಪ್ಪ​ಗಾಯಿತು ಎಂದು ಹೇಳ​ಲಾ​ಗಿ​ದೆ.

ಆದರೆ, ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದಿರುವುದು, ಸಚಿವ ಎಚ್‌.ಡಿ.ರೇವಣ್ಣ ಹಸ್ತಕ್ಷೇಪ ಹಾಗೂ ಕಾಂಗ್ರೆಸ್‌ ಶಾಸಕರಿಗೆ ದೊರೆಯದ ಆದ್ಯತೆ ಬಗ್ಗೆ ತೀವ್ರ ಚರ್ಚೆ ನಡೆಯಿತು. ಉತ್ತರ ಕರ್ನಾಟಕದ ಶಾಸಕರು ಸಚಿವ ಸಂಪುಟ ವಿಸ್ತರಣೆ ವೇಳೆ ಬಾಕಿ ಇರುವ ಆರೂ ಸ್ಥಾನವನ್ನೂ ಉತ್ತರ ಕರ್ನಾಟಕಕ್ಕೆ ನೀಡಬೇಕು ಎಂದೂ ಒತ್ತಾಯ ಮಾಡಿದರು. ಜತೆಗೆ ವಿಧಾನಪರಿಷತ್‌ ಸದಸ್ಯರಿಗೆ ಮನ್ನಣೆ ದೊರೆಯುತ್ತಿಲ್ಲ. ಹೀಗಾಗಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಪರಿಷತ್‌ ಸದಸ್ಯರಿಗೆ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಪರಿಷತ್‌ ಸದಸ್ಯರು ತಮ್ಮ ಪ್ರಸ್ತಾಪ ಮುಂದಿಟ್ಟರು.

ಕಾಂಗ್ರೆಸ್‌ ಶಾಸಕರೊಂದಿಗೆ ಸಿಎಂ ಸಭೆ:

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ ಶಾಸಕರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರ ಯಾವುದೇ ಕೆಲಸಗಳು ಆಗುತ್ತಿಲ್ಲ. ನಮ್ಮ ನಾಯಕರು ಜೀರೋ ಟ್ರಾಫಿಕ್‌ನಲ್ಲಿ ಓಡಾಡುತ್ತಾರೆ. ಹೀಗಾಗಿ ಶಾಸಕರ ಕೈಗೆ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಮಗಾರಿ ಅನುಷ್ಠಾನಕ್ಕೆ ಮೂರು ತಿಂಗಳ ಕಾಲಾವಕಾಶವೂ ಇಲ್ಲ. ಬಜೆಟ್‌ ಮಂಡನೆಯಾಗಿ ಎಂಟು ತಿಂಗಳು ಕಳೆದರೂ ಇಲಾಖಾವಾರು ಅನುದಾನ ಬಿಡುಗಡೆಯಾಗಿಲ್ಲ. ಫೆಬ್ರುವರಿ ವೇಳೆಗೆ ಮತ್ತೊಂದು ಬಜೆಟ್‌ ಮಂಡನೆಗೆ ಸಿದ್ಧವಾಗಲಿದೆ. ಹೀಗಿದ್ದರೂ ಅನುದಾನ ಬಿಡುಗಡೆ ಮಾಡಿಲ್ಲ.

ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುವಂತೆಯೂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಅವರನ್ನು ಒತ್ತಾಯಿಸಿದರು. ಈ ವೇಳೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗಳ ಪ್ರತ್ಯೇಕ ಸಭೆ ನಡೆಸುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕಕ್ಕೆ ಆದ್ಯತೆಗೆ ಆಗ್ರಹ:

ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡದ ಬಗ್ಗೆ ತೀವ್ರ ಅಸಮಧಾನ ವ್ಯಕ್ತವಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನಸಭೆ-ವಿಧಾನಪರಿಷತ್‌ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರು, ಸಭಾನಾಯಕರು ಸೇರಿದಂತೆ ಯಾವುದೇ ಹುದ್ದೆಗೆ ಉತ್ತರ ಕರ್ನಾಟಕ ಭಾಗವನ್ನು ಪರಿಗಣಿಸಿಲ್ಲ. ಸಚಿವ ಸಂಪುಟ ರಚನೆ ವೇಳೆಯೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ.

ಜೆಡಿಎಸ್‌ ಪಕ್ಷದವರಿಗೆ ಉ-ಕ ಭಾಗದವರು ಮತ ಹಾಕಿಲ್ಲ ಎಂಬ ಕಾರಣಕ್ಕೆ ಅವರು ಆದ್ಯತೆ ನೀಡಿಲ್ಲ. ಆದರೆ, ಕಾಂಗ್ರೆಸ್‌ಗೆ 41 ಶಾಸಕರನ್ನು ಉತ್ತರ ಕರ್ನಾಟಕದವರು ನೀಡಿದ್ದಾರೆ. ಆದರೆ, 5 ಮಂದಿ ಸಚಿವರನ್ನು ಮಾಡಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಇದಕ್ಕಿಂತ ಕಡಿಮೆ ಶಾಸಕರು ಆಯ್ಕೆಯಾಗಿದ್ದರೂ 11 ಮಂದಿ ಸಚಿವರಿದ್ದಾರೆ. ಇದನ್ನು ಸರಿಪಡಿಸಬೇಕಾದರೆ ಬಾಕಿ ಉಳಿದಿರುವ 6 ಸಚಿವ ಸ್ಥಾನವನ್ನೂ ಉತ್ತರ ಕರ್ನಾಟಕಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

ಆರು ಮಂದಿ ಗೆದ್ದ ಬಳ್ಳಾರಿಯಲ್ಲಿ ಒಬ್ಬರಿಗೂ ಸ್ಥಾನ ಕೊಟ್ಟಿಲ್ಲ. ಮೂವರು ಗೆದ್ದಿರುವ ತುಮಕೂರಿಗೆ ಎರಡು ಸಚಿವ ಸ್ಥಾನ ದೊರೆತಿದೆ. ಇದೇ ರೀತಿ ಪಕ್ಷಕ್ಕೆ ಯಾವುದೇ ಕೊಡುಗೆ ನೀಡದಿರುವ ಜಿಲ್ಲೆಗೆ ನೀಡಿರುವ ಆದ್ಯತೆ ಪಕ್ಷಕ್ಕೆ ಕೊಡುಗೆ ನೀಡಿದ ಜಿಲ್ಲೆಗೆ ನೀಡಿಲ್ಲ ಎಂದು ಜಿಲ್ಲಾವಾರು ಪಟ್ಟಿಪ್ರದರ್ಶಿಸಿ ಆಕ್ಷೇಪಿಸಿದರು. ಕಾಂಗ್ರೆಸ್‌ ಪಕ್ಷ ಈ ರೀತಿ ಮಾಡಿದರೆ ಉ-ಕ ಭಾಗದಲ್ಲಿ ಬಿಜೆಪಿಯನ್ನು ನಾವು ಹೇಗೆ ಎದುರಿಸಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಹುಲ್‌ಗೆ ಅಭಿನಂದನೆ:

ಶಾಸಕಾಂಗ ಪಕ್ಷದ ಸಭೆ ಆರಂಭದಲ್ಲೇ ಪಂಚರಾಜ್ಯ ಚುನಾವಣೆ ವೇಳೆ ಮೂರು ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿ ಠರಾವು ಮಂಡಿಸಲಾಯಿತು.

20ಕ್ಕೂ ಹೆಚ್ಚು ಶಾಸಕರು ಗೈರು

80 ಶಾಸಕರು, 39 ವಿಧಾನ ಪರಿಷತ್‌ ಸದಸ್ಯರು ಸೇರಿ ಒಟ್ಟು 119 ಶಾಸಕ ಬಲದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಪೀಕರ್‌ ಮತ್ತು ಸಭಾಪತಿ ಹೊರತು ಪಡಿಸಿ 117 ಮಂದಿ ಭಾಗವಹಿಸಬೇಕಿತ್ತು. ಇದರಲ್ಲಿ ಮೂರು ಮಂದಿ ಸಭೆಗೆ ಗೈರು ಹಾಜರಾಗಲು ಪೂರ್ವಾನುಮತಿ ಪಡೆದಿದ್ದರು. ಇವರನ್ನು ಹೊರತುಪಡಿಸಿ ಸುಮಾರು 20 ಮಂದಿ ಶಾಸಕರು ಗೈರು ಹಾಜರಾಗಿದ್ದಾರೆ. ಪ್ರಮುಖವಾಗಿ ಬೆಳಗಾವಿ ಉಸ್ತುವಾರಿ ರಮೇಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ್‌, ರೋಷನ್‌ ಬೇಗ್‌, ರಾಮಲಿಂಗಾರೆಡ್ಡಿ, ನಾಗೇಂದ್ರ, ಆರ್‌.ವಿ. ದೇಶಪಾಂಡೆ, ಪುಟ್ಟರಂಗಶೆಟ್ಟಿ, ಡಾ

ಸುಧಾಕರ್‌, ಎನ್‌.ಎ. ಹ್ಯಾರಿಸ್‌ ಗೈರಾಗಿದ್ದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಹಲವು ವಿಚಾರದಲ್ಲಿ ರಮೇಶ್‌ ಜಾರಕಿಹೊಳಿ ಅವರ ಗೈರು ಹಾಜರಿಯನ್ನು ಗಮನಿಸಿದ್ದು, ಗಂಭೀರವಾಗಿ ಪರಿಗಣಿಸಿ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸಿದ್ದು ಕಾಲದ ಯೋಜ​ನೆ​ಗಳ ಜಾರಿಗೆ ಒತ್ತ​ಡ

ಸಿದ್ದ​ರಾ​ಮಯ್ಯ ಅವರ ಅವ​ಧಿ​ಯಲ್ಲಿ ಜಾರಿ​ಗೊ​ಳಿ​ಸಿದ್ದ ಯೋಜ​ನೆ​ಗ​ಳನ್ನು ಮುಂದು​ವ​ರೆ​ಸು​ವು​ದಾಗಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಒಪ್ಪಿ​ಕೊಂಡಿ​ದ್ದರು. ಆದರೆ, ಇದು​ವ​ರೆಗೂ ಈ ಬಗ್ಗೆ ಸರ್ಕಾರಿ ಆದೇಶ ಹೊರ ಬಿದ್ದಿಲ್ಲ ಎಂಬ ವಿಚಾರ ಸಂಪುಟ ಸಭೆ​ಯಲ್ಲಿ ತೀವ್ರ ಚರ್ಚೆಗೆ ಒಳ​ಗಾ​ಯಿತು. ವಿಷಯ ಪ್ರಸ್ತಾ​ಪಿ​ಸಿದ ಎಂ.ಟಿ.ಬಿ. ನಾಗ​ರಾಜು ಅವರು, ವಿದ್ಯಾ​ರ್ಥಿ​ಗ​ಳಿಗೆ ಲ್ಯಾಪ್‌​ಟಾಪ್‌, ಶಾಲಾ ಸಮ​ವಸ್ತ್ರ ನೀಡಿಕೆ ಸೇರಿ​ದಂತೆ ಸಿದ್ದ​ರಾ​ಮಯ್ಯ ಅವರ ಕಾಲದ ಹಲವು ಯೋಜ​ನೆ​ಗಳಿಗೆ ಸಂಬಂಧಿ​ಸಿ​ದಂತೆ ಇನ್ನೂ ಸರ್ಕಾರಿ ಆದೇಶ ಹೊರ​ಬಿ​ದ್ದಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ವಹಿ​ಸ​ಬೇಕು ಎಂದು ಆಗ್ರ​ಹಿ​ಸಿ​ದ​ರು.

click me!