ಸುವರ್ಣನ್ಯೂಸ್ ಇಂಪ್ಯಾಕ್ಟ್ ವರದಿ ಹಿನ್ನೆಲೆ ಹೆತ್ತವರ ಮಡಿಲು ಸೇರಿದ ಮನೆಮಗ| ತಪ್ಪಿಸಿಕೊಂಡಿದ್ದ ಬಾಲಕನ ಕುರಿತು ಸುವರ್ಣನ್ಯೂಸ್ ವರದಿ ಹಿನ್ನಲೆ ಪಾಲಕರ ಗುರುತು| ಮನೆ ಸೇರಿದ ಬಾಲಕ, ಸುವರ್ಣನ್ಯೂಸ್ ಕಾರ್ಯ ಶ್ಲಾಘಿಸಿದ ಅಧಿಕಾರಿಗಳು & ಪಾಲಕರು| ಹುಬ್ಬಳ್ಳಿಯಿಂದ ಕಳೆದು ಹೋಗಿದ್ದ ಮಾನಸಿಕ ಅಸ್ವಸ್ಥ ರಸೂಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದ್ದ| ಬಡತನದಲ್ಲಿದ್ದ ತಂದೆ-ತಾಯಿಗಳು ಮಗನಿಗಾಗಿ ಕಂಡ ಕಂಡಲ್ಲೆಲ್ಲಾ ಅಲೆದಾಡಿದ್ದರು| ಕೊನೆಗೆ ಸುವರ್ಣನ್ಯೂಸ್ ವರದಿ ಕಂಡು ಮನೆ ಮಂದಿ ಸೇರಿದ ಅಸ್ವಸ್ಥ ಬಾಲಕ
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಡಿ.18): ಅದೊಂದು ಬಡತನದ ಕುಟುಂಬ, ನಿತ್ಯ ದುಡಿದು ಬಂದು ಜೀವನ ಸಾಗಿಸೋದೆ ದುಸ್ತರವಾಗಿತ್ತು. ಈ ಮಧ್ಯೆ ಮಾನಸಿಕ ಅಸ್ವಸ್ಥನಾಗಿದ್ದ ಮಗ ಏಕಾಏಕಿ ಮನೆಯಿಂದ ಕಣ್ಮರೆಯಾಗಿದ್ದ. ಮನೆಮಂದಿ ದೂರ ದೂರದ ಊರಿಗೆ ಅಲೆದಾಡಿ ಹುಡುಕಿದ್ರು ಪ್ರಯೋಜನವಾಗಿಲಿಲ್ಲ.
ಕೊನೆಗೆ ಸುವರ್ಣನ್ಯೂಸ್ ಬಾಲಕನ ಕುರಿತು ವರದಿ ಮಾಡಿದ್ದೇ ತಡ ಪಾಲಕರು ಗುರುತಿಸಿ ಓಡೋಡಿ ಬಂದಿದ್ದು, ವರದಿ ಫಲಶೃತಿಯಾಗಿ ಕಳೆದು ಹೋಗಿದ್ದ ಮನೆ ಮಗ ಇದೀಗ ಹೆತ್ತವರ ಮಡಿಲು ಸೇರಿದ್ದಾನೆ.
ಹೀಗೆ ತಂದೆಯೊಂದಿಗೆ ಕುಳಿತಿರೋ ಮಾನಸಿಕ ಅಸ್ವಸ್ಥ ಬಾಲಕ, ಮಗ ಸಿಕ್ಕ ಖುಷಿಯಲ್ಲಿರೋ ತಂದೆ, ಅನಾಥನಾಗಿ ಸಿಕ್ಕಿದ್ದ ಬಾಲಕ ಎಂದು ನಂಬಿದ್ದ ಅಧಿಕಾರಿಗಳೇ ಹೆತ್ತವರ ಮಡಿಲಿಗೆ ಸೇರಿಸಿದ ಕ್ಷಣ. ಹೌದು. ಇಂತಹವೊಂದು ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ.
ಕಳೆದ ಎರಡು ವಾರದ ಹಿಂದೆ ಏಕಾಏಕಿ ಬಾಗಲಕೋಟೆ ರೈಲ್ವೆ ಪೋಲಿಸ ಠಾಣೆಯಲ್ಲಿ ಬಾಲಕನೊಬ್ಬ ಪತ್ತೆಯಾಗಿದ್ದ, ಈ ಬಗ್ಗೆ ಮಾಹಿತಿ ಸಿಗುತ್ತಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲಮಂದಿರ ಸಿಬ್ಬಂದಿ ಆತನನ್ನ ಕರೆತಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಆತ ಮಾನಸಿಕ ಅಸ್ವಸ್ಥನಾಗಿದ್ದರಿಂದ ಹೆಸರು ಸಹ ಗೊತ್ತಾಗಲಿಲ್ಲ. ಆತನ ಸುಳಿವು ಸಿಗದೇ ಅಧಿಕಾರಿಗಳು ಕಂಗಾಲಾಗಿದ್ರು. ಬಳಿಕ ಆತನನ್ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಇರಿಸಿಕೊಂಡಿದ್ರು. ಇತ್ತ ಪಾಲಕರು ಪತ್ತೆ ಸಿಗದೇ ಹೋದಾಗ ಕೊನೆಗೆ ಈ ಬಗ್ಗೆ ಸುವರ್ಣನ್ಯೂಸ್ ಬಾಲಕನ ಕುರಿತು ವರದಿ ಬಿತ್ತರಿಸಿತ್ತು.
ವರದಿ ಪರಿಣಾಮ ಬಾಲಕ ರಸೂಲ್ ಇದೀಗ ಪಾಲಕರ ಮಡಿಲು ಸೇರುವಂತಾಗಿದ್ದು, ಸುವರ್ಣನ್ಯೂಸ್ ಗೆ ಅಭಿಮಾನದ ಧನ್ಯವಾದಗಳು ಅಂತಾರೆ ಅಧಿಕಾರಿ ವರ್ಗದವರು.
ಇನ್ನು ಬಾಲಕನ ತಂದೆ ಇಸಾಕ್ ಅಹ್ಮದ ಕಲಬುರ್ಗಿ ಎಂಬಾತ ಹಳೇ ಹುಬ್ಬಳ್ಳಿ ನಗರದ ನಿವಾಸಿಯಾಗಿದ್ದು, ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಮೊದಲ ಮಗ ರಸೂಲ್ ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು, ಆತ ಕಳೆದು ಹೋಗಿದ್ದರಿಂದ ಕುಟುಂಬದವರೆಲ್ಲಾ ಚಿಂತಾಕ್ರಾಂತವಾಗಿದ್ದರು.
ದೂರದ ಊರುಗಳೆಲ್ಲೆಲ್ಲಾ ಹುಡುಕಿ ಬಂದ್ರೂ ಮಗ ಸಿಕ್ಕಿರಲಿಲ್ಲ. ಇತ್ತ ದೈನಂದಿನ ದುಡಿತದ ಮಧ್ಯೆಯೂ ಮಗ ಕಳೆದುಕೊಂಡಿದ್ದ ಕೊರಗು ಹಾಗೆ ಉಳಿದಿತ್ತು. ಆದ್ರೆ ಯಾವಾಗ ಸುವರ್ಣನ್ಯೂಸ್‌ನಲ್ಲಿ ರಸೂಲ್‌ನ ಬಗ್ಗೆ ವರದಿ ಬಿತ್ತರವಾಯಿತು.
ಆಗ ಮಗನನ್ನು ಗುರುತಿಸಿ ಬಾಗಲಕೋಟೆಗೆ ಬಂದ ಇಸಾಕ್ ಅಹ್ಮದ ಬಾಲಮಂದಿರಕ್ಕೆ ಬಂದು ಅಧಿಕಾರಿಗಳ ಮುಂದೆ ತಮ್ಮ ಮಗನೇ ಎಂದು ಗುರುತಿಸಿ ಹೇಳಿದ್ದು, ಈ ಮಧ್ಯೆ ರಸೂಲ್ ಇಸಾಕ್ ಅವರ ಮಗನೇ ಎಂದು ಖಚಿತಪಡಿಸಿಕೊಂಡು ಬಳಿಕ ತಂದೆಯ ಸುಪರ್ದಿಗೆ ಮಗನನ್ನ ಕಳಿಸಿಕೊಟ್ಟರು.
ಆಗ ಮಗ ಸಿಕ್ಕ ಖುಷಿಗೆ ಇಸಾಕ್ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಇತ್ತ ಸುವರ್ಣನ್ಯೂಸ್ ವರದಿಯಿಂದ ನಮ್ಮ ಮಗ ನಮಗೆ ಸಿಕ್ಕಿದ್ದಾನೆ ಅಂದ್ರು ರಸೂಲ್ ತಂದೆ ಇಸಾಕ್.
ಒಟ್ಟಿನಲ್ಲಿ ದೈನಂದಿನ ಜೀವನದಲ್ಲಿ ಹೊಟ್ಟೆ ತುಂಬಿಸಿಕೊಳ್ಳೋದೆ ದುಸ್ತರವಾದ ಇಂದಿನ ದಿನದಲ್ಲಿ ಬಡಕುಟುಂಬದ ಮಗನನ್ನ ಪತ್ತೆ ಹಚ್ಚುವಲ್ಲಿ ಸುವರ್ಣನ್ಯೂಸ್ ವರದಿ ಸಹಾಯಕವಾಗುವುದರ ಜೊತೆಗೆ ಜನರ ಅಭಿಮಾನಕ್ಕೆ ಪಾತ್ರವಾಗಿದೆ.