
ಆನಂದ್ ಎಂ.ಸೌದಿ
ಯಾದಗಿರಿ (ನ.15): ಪಿಎಸೈ ಅಕ್ರಮದ ತನಿಖೆಯ ಆಳಕ್ಕಿಳಿದು, ನೂರಾರು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿನ ರೂವಾರಿ, ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಅವರ ವರ್ಗಾವಣೆಯಿಂದಾಗಿ ರಾಜಕೀಯ ಗಣ್ಯರು, ನೊಂದ ಅಭ್ಯರ್ಥಿಗಳು ಸೇರಿದಂತೆ ಇದೇ ಪಿಎಸೈ ಅಕ್ರಮದ ತನಿಖೆಯ ಭಾಗವಾಗಿರುವ ಬಹುತೇಕ ಖಾಕಿಪಡೆಯಲ್ಲಿ ಅಸಮಾಧಾನ ಮೂಡಿಸಿದೆ.
ಪಿಎಸೈ ಅಕ್ರಮದ ತನಿಖೆಯು ಮಹತ್ವದ ಹಂತದಲ್ಲಿರುವಾಗ ಅಧಿಕಾರಿಗಳ ವರ್ಗಾವಣೆ ಅದೆಷ್ಟುಸರಿ ಎಂದು ಪ್ರಶ್ನಿಸಿರುವ ನೊಂದ ಅಭ್ಯರ್ಥಿಗಳ ಹೋರಾಟದ ಮುಖಂಡ ರವಿಶಂಕರ್ ಮಾಲಿ ಪಾಟೀಲ್, ಎಡಿಜಿಪಿ ಉಮೇಶಕುಮಾರ ಅವರ ವರ್ಗಾವಣೆಯಿಂದ ಅಕ್ರಮದ ತನಿಖೆಯ ಆಳಕ್ಕಿಳಿದಿರುವ ತನಿಖಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಒಂದು ರೀತಿಯ ನಿರುತ್ಸಾಹ ಮೂಡಿಸಿದಂತೆ. ಸರ್ಕಾರ ಇದನ್ನು ಮರು ಪರಿಶೀಲಿಸಲು ಆಗ್ರಹಿಸಿದ್ದಾರೆ.
PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ
‘ಬಿ’ರಿಪೋರ್ಟ್ ಹಾಕುವ ಯತ್ನ: ಪಿಎಸೈ ಹಗರಣದಲ್ಲಿ ಐಪಿಎಸ್ ದರ್ಜೆಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಇ.ಡಿ. ಸಹ ಇದರ ತನಿಖೆ ನಡೆಸುತ್ತಿದೆ. ಇಂತಹ ಮಹತ್ವದ ಹಂತದಲ್ಲಿ ಸರ್ಕಾರ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಅದು ಬಿಟ್ಟು, ಅಧಿಕಾರಿಗಳ ವರ್ಗಾವಣೆ ಮಾಡಿರುವುದನ್ನು ನೋಡಿದರೆ, ಇದು ತನಿಖೆಯನ್ನು ಸಡಿಲಗೊಳಿಸಿ ಮುಂದಿನ ದಿನಗಳಲ್ಲಿ ‘ಬಿ’ ರಿಪೋರ್ಟ್ ಹಾಕುವ ಯತ್ನದಂತಿದೆ ಎಂದು ಚಿತ್ತಾಪುರ ಶಾಸಕ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಪಿಎಸ್‌ಐ ಅಕ್ರಮ: ಕಲ್ಯಾಣ ಕರ್ನಾಟಕದ ಮೊದಲ ರ‍್ಯಾಂಕ್ ವಿಜೇತೆ ಸೆರೆ
ಪಿಎಸೈ ಅಕ್ರಮದ ತನಿಖೆಯಲ್ಲಿ ಯಾವ ಪ್ರಭಾವಿಗಳ ಹಸ್ತಕ್ಷೇಪವೂ ಬಾರದಂತೆ ನೋಡಿಕೊಂಡ ಹಾಗೂ ಅಂದಿನ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳ ಬಂಧಿಸುವ ವಿಚಾರದಲ್ಲಿ ಮುಲಾಜಿಲ್ಲದ ಕ್ರಮ ಕೈಗೊಂಡ ಉಮೇಶ ಕುಮಾರ್, ‘ಫಿನಿಶ್ ಇಟ್’ ಎಂದೆನ್ನುತ್ತ ತನಿಖಾಧಿಕಾರಿಗಳ ಬೆಂಗಾವಲಿನಂತೆ ಇರುತ್ತಿದ್ದರು ಎಂದು ಹೆಸರೇಳಲಿಚ್ಛಿಸದ ಸಿಐಡಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು. ಪಿಎಸೈ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಮತ್ತಷ್ಟೂ ಪ್ರಭಾವಿಗಳ ಕೈವಾಡ ಬಯಲಿಗೆಳೆಯಲು ಸಿದ್ಧತೆ ನಡೆಸಿದಂತಿತ್ತು. ಈ ಹಂತದಲ್ಲಿ ಅವರ ವರ್ಗಾವಣೆಯ ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ