
ಬೆಂಗಳೂರು (ನ.15): ರಾಜ್ಯ ಪೊಲೀಸ್ ಆಡಳಿತಕ್ಕೆ ಮಹತ್ವದ ಬದಲಾವಣೆ ತಂದಿರುವ ರಾಜ್ಯ ಸರ್ಕಾರವು, ಬೆಂಗಳೂರು ಸಂಚಾರ ವಿಭಾಗದ ಮುಖ್ಯಸ್ಥ ಹುದ್ದೆ ಸೇರಿದಂತೆ ಹಲವು ಸ್ಥಾನಗಳನ್ನು ಮೇಲ್ದರ್ಜೆಗೇರಿಸಿ ಸೋಮವಾರ ಆದೇಶ ಹೊರಡಿಸಿದ್ದು, ಸರ್ಕಾರದ ಈ ನಡೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಇದೇ ವೇಳೆ, ಸರ್ಕಾರ ಒಟ್ಟು 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ.
ಬೆಂಗಳೂರಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಹೊಸದಾಗಿ ವಿಶೇಷ ಸಂಚಾರ ಆಯುಕ್ತ ಹುದ್ದೆಯನ್ನು ಸೃಜಿಸಿದೆ. ಈವರೆಗೆ ಹೆಚ್ಚುವರಿ ಹಾಗೂ ಜಂಟಿ ಆಯುಕ್ತ ಸ್ಥಾನಮಾನ ಹೊಂದಿದ್ದ ಸಂಚಾರ ವಿಭಾಗದ ಹುದ್ದೆಯನ್ನು ನಗರ ಪೊಲೀಸ್ ಆಯುಕ್ತರ ಸಮಾನವಾಗಿ ಎಡಿಜಿಪಿ ಹುದ್ದೆಗೆ ಉನ್ನತೀಕರಿಸಲಾಗಿದೆ. ಹೀಗಾಗಿ ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ಎತ್ತಂಗಡಿ ಮಾಡಿದ ಸರ್ಕಾರವು, ವಿಶೇಷ ಆಯುಕ್ತರಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಾ.ಎಂ.ಎ.ಸಲೀಂ ಅವರನ್ನು ನಿಯೋಜಿಸಿದೆ. ಅಲ್ಲದೆ ಜಂಟಿ ಆಯುಕ್ತ ಹುದ್ದೆಗೆ ಹಿರಿಯ ಎಸ್ಪಿ ಅನುಚೇತ್ ಅವರನ್ನು ಸರ್ಕಾರ ವರ್ಗಾಯಿಸಿದೆ.
National Herald PMLA case: 3 ತಾಸು ಇ.ಡಿ. ವಿಚಾರಣೆ ಎದುರಿಸಿದ ಡಿ.ಕೆ.ಶಿವಕುಮಾರ್
ಸಂಚಾರ ನಿರ್ವಹಣೆ ವಿಷಯದಲ್ಲಿ ಪರಿಣತ ಎಂದೇ ಹೆಸರು ಪಡೆದಿರುವ ಎಡಿಜಿಪಿ ಸಲೀಂ ಅವರಿಗೆ ಈ ಹಿಂದೆ ಎರಡು ಬಾರಿ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಚಾರ ನಿರ್ವಹಣೆ ವಿಷಯದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಅವರು ಪಿಎಚ್‌ಡಿ ಸಹ ಪಡೆದಿದ್ದಾರೆ. ಇನ್ನು ತಾಂತ್ರಿಕವಾಗಿ ನುರಿತ ಅಧಿಕಾರಿ ಎಂದೇ ಇಲಾಖೆಯಲ್ಲಿ ಹೆಸರು ಪಡೆದಿರುವ ಅನುಚೇತ್ ಅವರು, ಸಲೀಂ ಅವರಿಗೆ ಸಾಥ್ ಕೊಡಲಿದ್ದಾರೆ. ಇತ್ತೀಚೆಗೆ ಸಂಚಾರ ವ್ಯವಸ್ಥೆ ವಿಚಾರವಾಗಿ ಸರ್ಕಾರವು ಸಾರ್ವಜನಿಕ ವಲಯದಲ್ಲಿ ಹೆಚ್ಚು ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಚಾರ ವಿಭಾಗದ ಮುಖ್ಯಸ್ಥ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ನುರಿತ ಅಧಿಕಾರಿಗಳನ್ನು ನೇಮಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಅದೇ ರೀತಿ ಡಿಐಜಿ ಹುದ್ದೆಗೆ ಮುಂಬಡ್ತಿ ಪಡೆಯಲು ಒಂದೂವರೆ ತಿಂಗಳಿರುವಾಗಲೇ ಹಿರಿಯ ಎಸ್ಪಿಗಳಾದ ಸಿಸಿಬಿ ಡಿಸಿಪಿ ಡಾ.ಎಸ್.ಡಿ.ಶರಣಪ್ಪ, ಸಿಐಡಿ ಎಸ್ಪಿಗಳಾದ ಎಂ.ಎನ್.ಅನುಚೇತ್, ರವಿ.ಡಿ.ಚನ್ನಣ್ಣವರ್ ಹಾಗೂ ಬಿ.ರಮೇಶ್ ಅವರಿಗೆ ಹೊಸ ಹೊಣೆಗಾರಿಕೆ ನೀಡಿ ಸರ್ಕಾರ ಬಂಪರ್ ನೀಡಿದೆ. ಹಾಗೆಯೇ ಬಳ್ಳಾರಿ ಹಾಗೂ ಪಶ್ಚಿಮ ವಲಯ ಐಜಿಪಿ ವಲಯಗಳನ್ನು ಡಿಐಜಿ ಹುದ್ದೆಗಿಳಿಸಿದ ಸರ್ಕಾರವು, ಬೆಂಗಳೂರು ನಗರ ಜಂಟಿ ಆಯುಕ್ತ (ಅಪರಾಧ) ರಮಣ ಗುಪ್ತಾ ಅವರನ್ನು ಅಚ್ಚರಿ ಎನ್ನುವಂತೆ ಎತ್ತಂಗಡಿ ಮಾಡಿದೆ.
ವರ್ಗಾವಣೆಯಾದವರು ಯಾರು?: ಡಾ.ಎಂ.ಅಬ್ದುಲ್ ಸಲೀಂ - ಸಂಚಾರ ಮುಖ್ಯಸ್ಥರು ಬೆಂಗಳೂರು, ಉಮೇಶ್ ಕುಮಾರ್ - ಎಡಿಜಿಪಿ ಆಡಳಿತ, ಡಿಐಜಿಗಳಾದ ದಿವ್ಯಾಜ್ಯೋತಿ ರಾಯ್- ಕುಂದುಕೊರತೆ ಹಾಗೂ ಮಾನವ ಹಕ್ಕು ವಿಭಾಗ, ರಮಣ ಗುಪ್ತಾ- ಜಂಟಿ ಆಯುಕ್ತ ಗುಪ್ತದಳ ಬೆಂಗಳೂರು ನಗರ, ಡಾ.ಬಿ.ಆರ್.ರವಿಕಾಂತೇಗೌಡ- ಸಿಐಡಿ, ಬಿ.ಎಸ್.ಲೋಕೇಶ್- ಬಳ್ಳಾರಿ ವಲಯ, ಡಾ.ಚಂದ್ರಗುಪ್ತ- ಪಶ್ಚಿಮ ವಲಯ, ಹಿರಿಯ ಎಸ್ಪಿಗಳಾದ ಡಾ.ಶರಣಪ್ಪ- ಜಂಟಿ ಆಯುಕ್ತ ಅಪರಾಧ ಬೆಂಗಳೂರು, ಎಂ.ಎನ್.ಅನುಚೇತ್- ಜಂಟಿ ಆಯುಕ್ತ ಸಂಚಾರ ಬೆಂಗಳೂರು, ರವಿ.ಡಿ.ಚೆನ್ನಣ್ಣನವರ್- ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್ ಹಾಗೂ ಬಿ.ರಮೇಶ್- ಆಯುಕ್ತ, ಮೈಸೂರು ನಗರ.
ಓಲಾ, ಉಬರ್ ಆಟೋ ಬಿಕ್ಕಟ್ಟು: ಇಂದು ಆರ್‌ಟಿಒ ಅಧಿಕಾರಿಗಳಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
ಪಿಎಸ್‌ಐ ನೇಮಕ ಹಗರಣ ತನಿಖಾಧಿಕಾರಿ ಬದಲಾವಣೆ: ಪಿಎಸ್‌ಐ ನೇಮಕಾತಿ ಅಕ್ರಮ ಹಗರಣದ ತನಿಖೆ ಮುಖ್ಯಸ್ಥರಾಗಿದ್ದ ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗಕ್ಕೆ ಸರ್ಕಾರ ವರ್ಗಾವಣೆಗೊಳಿಸಿದೆ. ಪಿಎಸ್‌ಐ ಅಕ್ರಮದ ಬಗ್ಗೆ ತನಿಖೆ ಪ್ರಗತಿಯಲ್ಲಿರುವಾಗಲೇ ಎಡಿಜಿಪಿ ಬದಲಾವಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ