
ಕಲಬುರಗಿ (ಅ.15): ಮಂಗಳೂರಿನಿಂದ ಕಲಬುರಗಿಗೆ ಸಂಚರಿಸಲು ಅನಾನುಕೂಲವಿರುವುದರಿಂದ ವಿಮಾನ ಸೇವಾ ಸೌಲಭ್ಯ ಅತ್ಯಗತ್ಯವಾಗಿದೆ. ಕೇಂದ್ರ ಸರ್ಕಾರ ವಿಮಾನ ಪ್ರಾರಂಭ ಮಾಡಲು ಬದ್ಧವಾಗಿದ್ದು, ಕೂಡಲೇ ಕೇಂದ್ರ ವಿಮಾನಯಾನ ಖಾತೆಯ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧ್ಯಾ ಜೊತೆ ಚರ್ಚಿಸುವುದಾಗಿ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು.
ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆಲರ್ ಅವರ ನೇತೃತ್ವದ ನಿಯೋಗ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಬುರಗಿ ವಿಮಾನ ನಿಲ್ದಾಣವು ನೈಟ್ ಲ್ಯಾಂಡಿಂಗ್ ಸೌಲಭ್ಯ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಖಾಸಗಿ ವಿಮಾನ ಸಂಸ್ಥೆಗಳ ಜೊತೆ ನಾಗರಿಕ ವಿಮಾನಯಾನ ಇಲಾಖೆ ಚರ್ಚಿಸಿ ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಮಾನ ಸಂಚಾರ ಪ್ರಾರಂಭಿಸಲು ತಕ್ಷಣ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.
BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ಈಗಾಗಲೇ ಮಂಗಳೂರು - ಹುಬ್ಬಳ್ಳಿ ನಡುವೆ ವಿಮಾನ ಸಂಚಾರ ಪ್ರಾರಂಭವಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಂಡಿದೆ. ಆದರೆ ಕಲಬುರಗಿಯಿಂದ ಬೆಂಗಳೂರು ದಾರಿಯಾಗಿ ಮಂಗಳೂರಿಗೆ ವಿಮಾನ ಸಂಚಾರ ಪ್ರಾರಂಭಿಸಿದರೆ ವಿಮಾನ ಯಾತ್ರಿಕರ ಸಂಖ್ಯೆ ಹೆಚ್ಚಾಗಬಹುದು. ಕರಾವಳಿಯ ಶಿಕ್ಷಣ ಸಂಸ್ಥೆ, ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ಕೇಂದ್ರಗಳಿಗೆ ಈ ಭಾಗದಿಂದ ಹೆಚ್ಚಿನ ಜನರು ತೆರಳುತ್ತಿರುವುದರಿಂದ ವಯಾ ಬೆಂಗಳೂರು ವಿಮಾನ ಸಂಚಾರ ಲಾಭದಾಯಕವಾಗಲಿದೆ ಎಂದರು.
ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಸೂಚನೆ: ವಿಮಾನ ನಿಲ್ದಾಣದ ನಿರ್ದೇಶಕರಾದ ಮಹೇಶ್ ಚಿಲ್ಕಾ ಅವರ ಜೊತೆ ಸಚಿವೆ ಶೋಭಾ ಕರಂದ್ಲಾಜೆ ಚರ್ಚಿಸಿ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡರು. ಕೂಡಲೇ ಕೇಂದ್ರ ನಾಗರಿಕ ವಿಮಾನಯಾನ ಖಾತೆಗೆ ಪ್ರಸ್ತಾಪ ಸಲ್ಲಿಸಲು ನಿರ್ದೇಶಕರಿಗೆ ಸೂಚನೆ ನೀಡಿದರಲ್ಲದೆ, ಆ ಪ್ರಸ್ತಾಪದ ಪ್ರತಿಯನ್ನು ತಮಗೆ ನೀಡಲು ಹೇಳಿದರು. ಮಹೇಶ್ ಚಿಲ್ಕಾ ಕಲಬುರಗಿ ವಿಮಾನ ನಿಲ್ದಾಣದ ಸೌಲಭ್ಯ ಮತ್ತು ಸಾಧ್ಯತೆಗಳ ಕುರಿತ ಪ್ರಸ್ತಾಪದ ಪತ್ರವನ್ನು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ನೀಡಿದರು. ಕಲಬುರಗಿ ವಿಮಾನ ನಿಲ್ದಾಣವು ಸದ್ಯ ಆಧುನಿಕವಾಗಿ ಎಲ್ಲ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವುದರಿಂದ ಮತ್ತು ನೈಟ್ ಲ್ಯಾಂಡಿಂಗ್ ಸೌಲಭ್ಯವು ಈಗ ಸೇರ್ಪಡೆಗೊಂಡು ಈ ಭಾಗದ ಜನರಿಗೆ ಸೇವೆ ಸಲ್ಲಿಸಲು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ನಿಂತಿದೆ ಎಂದು ಮಹೇಶ್ ಚಿಲ್ಕಾ ಸಚಿವರಿಗೆ ವಿವರಿಸಿದರು.
ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷರ ರಾಜೀನಾಮೆ ಹೈಡ್ರಾಮಾ: ಸಿ.ಟಿ.ರವಿಗೆ ಕೈಕೊಟ್ರಾ ಆಪ್ತ ವರಸಿದ್ದಿ!
ವಿಮಾನ ಸಾರಿಗೆ ಸಂಪರ್ಕ ತುರ್ತು ಅಗತ್ಯ: ಕಲಬುರಗಿಯಿಂದ ಮಂಗಳೂರಿಗೆ ಸುಮಾರು 860 ಕಿ.ಮೀ. ದೂರವಿದ್ದು, ಈಗಾಗಲೇ ಕಲಬುರಗಿ ಹಾಗೂ ಬೀದರ್‌ನಿಂದ ಕನಿಷ್ಠ ಐದರಿಂದ ಆರು ಬಸ್ ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಕೂಡ ಹೆಚ್ಚಿರುವುದರಿಂದ ವಿಮಾನ ಸೌಲಭ್ಯ ಒದಗಿಸಿ ಪ್ರಯಾಣಿಕರಿಗೆ ತುರ್ತಾಗಿ ನೆರವಾಗಬೇಕೆಂದು ಸಚಿವರಿಗೆ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆಲರ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಘದ ಸದಸ್ಯ ಜೀವನ್ ಕುಮಾರ್ ಜತ್ತನ್, ಕಾರ್ಯದರ್ಶಿ ಪುರಂದರ ಭಟ್ ಮತ್ತು ಕ್ರೀಡಾ ಕಾರ್ಯದರ್ಶಿ ಸುನಿಲ್ ಶೆಟ್ಟಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ