ಚಿತ್ರದುರ್ಗದ ಬೃಹನ್ಮಠಕ್ಕೆ ಸೇರಿದ ಕೊಡಗಿನ ಬೇಳೂರು ಮಠದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳ ಪರವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದ ಪ್ರತಿನಿಧಿಯ ಮುಂದೆ ವಾಗ್ವಾದ ನಡೆದು ಕೆಲಕಾಲ ಬೇಳೂರು ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಅ.15): ಚಿತ್ರದುರ್ಗದ ಬೃಹನ್ಮಠಕ್ಕೆ ಸೇರಿದ ಕೊಡಗಿನ ಬೇಳೂರು ಮಠದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳ ಪರವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದ ಪ್ರತಿನಿಧಿಯ ಮುಂದೆ ವಾಗ್ವಾದ ನಡೆದು ಕೆಲಕಾಲ ಬೇಳೂರು ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ.
ಪೋಕ್ಸೋ ಮೊಕದ್ದಮೆಯಿಂದಾಗಿ ಮುರುಘಾ ಶರಣರು ಜೈಲು ಸೇರಿದ ನಂತರ ಮುರುಘಾ ಮಠ(murugha mutt)ದ ವಿಚಾರಗಳು ಒಂದೊಂದಾಗಿ ವಿವಾದ ಪಡೆದುಕೊಳ್ಳುತ್ತಿವೆ. ಇತ್ತ ಕೊಡಗು ಜಿಲ್ಲೆಯಲ್ಲೂ ಅಂದಿನ ರಾಜರು ನೀಡಿದ 3500 ಎಕರೆ ಜಮೀನು ಇಂದು ಕೇವಲ 550 ಎಕರೆಗೆ ಬಂದು ನಿಂತಿದೆ. ಉಳುವವನಿಗೆ ಭೂಮಿ ಕಾಯಿದೆ ಅನ್ವಯ ಒಂದಷ್ಟು ಭೂಮಿ ಉಳುವವರ ಪಾಲಾದರೆ, ಬಹುತೇಕ ಭೂಮಿ ಅನಧಿಕೃತವಾಗಿ ಮಠದ ಆಡಳಿತ ಹಿಡಿತವಿದ್ದವರೆ ಅನ್ಯರಿಗೆ ಪರಭಾರೆ ಮಾಡಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಬೃಹನ್ಮಠದ ಆಡಳಿತಾಧಿಕಾರಿಗಳು ಮಠದ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ವಿಶ್ವನಾಥ್ ಅವರು ಸ್ಥಳ ಪರಿಶೀಲನೆ ನಡೆಸಿ ವಸ್ತುಸ್ಥಿತಿ ತಿಳಿದು ವರದಿ ನೀಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಶನಿವಾರ ಜಿಲ್ಲೆಗೆ ತಂಡ ಆಗಮಿಸಿ ಚಂಗದಹಳ್ಳಿ ಮಠಕ್ಕೆ ತೆರಳಿ ಅಲ್ಲಿನ ವಿವರ ಸಂಗ್ರಹಿಸಿದ್ದಾರೆ.
ಚಿತ್ರದುರ್ಗ ಮುರುಘಾ ಶ್ರೀಗಳ ಪೋಕ್ಸೋ ಕೇಸ್ ಆರೋಪಿ ಪರಮಶಿವಯ್ಯಗೆ ಜಾಮೀನು ಮಂಜೂರು
ಭಾನುವಾರದಂದು ಬೇಳೂರು ಮಠಕ್ಕೆ ಸೇರಿದ ಮಾದಾಪುರ, ಗುತ್ತಿಮಠ, ಅಭಿಮಠಕ್ಕೆ ಸೇರಿದ ಜಮೀನಿನ ವಿವರ ಸಂಗ್ರಹಿಸಲು ತೆರಳುತ್ತಿದ್ದ ಸಂದರ್ಭ ಈ ಬಗ್ಗೆ ಮಾಹಿತಿ ತಿಳಿದ ವೀರಶೈವ ಮುಖಂಡರು ಹಾಗೂ ಕೆಲವು ಗ್ರಾಮಸ್ಥರು ಬೇಳೂರು ಮಠಕ್ಕೆ ದೌಡಾಯಿಸಿ ನೀವು ಬರುವ ವಿಚಾರ ಯಾರಿಗೂ ಗೊತ್ತಿಲ್ಲ. ಹೀಗೆ ಏಕಾಏಕಿಯಾಗಿ ಮಾಹಿತಿ ಸಂಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿಗಳ ಪ್ರತಿನಿಧಿ ವಿಶ್ವನಾಥ್, ಇಲ್ಲಿನ ಆಸ್ತಿ ಹಾಗೂ ಬೇಳೂರು ಮಠದ ವ್ಯವಸ್ಥಾಪಕರ ಮೇಲೆ ಸಾಕಷ್ಟು ದೂರುಗಳು ಬಂದಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿ ಒಂದು ಗ್ರೌಂಡ್ ರಿಪೋರ್ಟ್ ಕೊಡಲು ಹೇಳಿದ್ದಾರೆ. ಆದರೆ ಯಾರೊಂದಿಗೂ ನಾನು ಸಭೆ ನಡೆಸುವಂತಿಲ್ಲ. ನಿಮ್ಮದು ಏನಾದರೂ ಮಾಹಿತಿ ಇದ್ದರೆ ಕೊಡಿ, ನಾನು ವರದಿಕೊಡುತೇನೆ ಎಂದು ತಿಳಿಸಿದರು.
ಈ ಸಂದರ್ಭ ಹಲವರು ಇಲ್ಲಿನ ವ್ಯವಸ್ಥಾಪಕರು ಹಲವರಿಂದ ಹಣಪಡೆದು ಸಾಗುವಳಿ ಮಾಡಲು ಬಿಟ್ಟಿದ್ದಾರೆ. ಇವರು ಬಂದ ಮೇಲೆ ಮಠದ ಸಾಕಷ್ಟು ಆಸ್ತಿ ಅನ್ಯರ ಪಾಲಾಗಿದೆ. ತೋಟದಲ್ಲಿದ್ದ ಬಹುತೇಕ ಮರಗಳು ನೆಲಕಚ್ಚಿವೆ. ಇವೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಒಂದು ತಂಡ ಆಗ್ರಹಿಸಿದೆ. ಈ ಹಿಂದೆ 3500 ಎಕರೆ ಇದ್ದ ಪ್ರದೇಶ ಈಗ 550 ಎಕರೆ ಪ್ರದೇಶ ವಾಗಿದೆ ಎನ್ನುತ್ತಾರೆ. ಹಾಗಿದ್ದರೆ ಆಗಿಂದಲೂ ತನಿಖೆಯಾಗಲಿ ಎಲ್ಲರನ್ನೂ ಬಿಡಿಸಿ ಎಂದು ಮತ್ತೊಂದು ತಂಡ ತಮ್ಮವಾದ ಮಂಡಿಸಿತು.
Murughamath: ಏಳು ತಿಂಗಳಲ್ಲಿ ಮುರುಘಾಮಠದ ಹತ್ತುವರೆ ಕೋಟಿ ರು. ಸಾಲ ತೀರುವಳಿ
ಈ ಸಂದರ್ಭ ಎರಡು ತಂಡಗಳ ನಡುವೆ ಪರಸ್ಪರ ವಾಗ್ವಾದ ನಡೆಯಿತು. ವಾಗ್ವಾದದ ನಡುವೆ ಮಠದ ವ್ಯವಸ್ಥಾಪಕ ಶಶಿಧರ್, ಗ್ರಾಮಸ್ಥ ಮಹೇಶ್ ಎಂಬುವರಿಗೆ ಏಯ್ ಎಂದು ಗದರಿಸಿದರೆಂದು ಎಲ್ಲರೂ ಅವರ ಮೇಲೆ ತಿರುಗಿ ಬಿದ್ದಿದ್ದರಿಂದ ಶಶಿದರ್ ಅಲ್ಲಿಂದ ಕಾಲ್ಕಿತ್ತರು. ಬೇಳೂರು ಮಠದ ಆಸ್ತಿಪಾಸ್ತಿಗಳನ್ನು ಸಂರಕ್ಷಿಸಬೇಕು. ಮಠ ಅಭಿವೃದ್ದಿ ಪಡಿಸಬೇಕು. ಆದ್ದರಿಂದ ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಸಂಗ್ರಹಿಸಬೇಕು. ಅದಕ್ಕಾಗಿ ಆಡಳಿತಾಧಿಕಾರಿಗಳೊಡನೆ ಚರ್ಚಿಸಿ ದಿನಾಂಕ ನಿಗದಿಪಡಿಸಿ ಅದನ್ನು ಮಾಧ್ಯಮದ ಪ್ರಕಟಣೆ ಮೂಲಕ ತಿಳಿಸಿ. ಆಗ ಎಲ್ಲರೂ ದಾಖಲೆ ಸಹಿತ ಲಿಖಿತವಾಗಿ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ವೀರಶೈವ ಮುಖಂಡರು ಆಗ್ರಹಿಸಿದರು.
ಇದಕ್ಕೆ ಒಪ್ಪಿದ ವಕೀಲರಾದ ವಿಶ್ವನಾಥ್ ಅವರು ಈ ಬಗ್ಗೆ ಆಡಳಿತಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ತಮ್ಮ ಮಾಹಿತಿ ಸಂಗ್ರಹಣಾ ಕಾರ್ಯವನ್ನು ಮೊಟಕುಗೊಳಿಸಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು.