Land Compensation: ಸ್ವಾಧೀನ ಪಡಿಸಿಕೊಂಡ ಜಮೀನಿನ ಮಾಲೀಕರಿಗೆ ನೇರ ಪರಿಹಾರ, ನಿರಾಣಿ ಸ್ಪಷ್ಟನೆ

By Suvarna News  |  First Published Dec 17, 2021, 6:46 PM IST

* ಕೈಗಾರಿಕಾ ಭೂಮಿಯನ್ನು ರಿಯಲ್  ಎಸ್ಟೇಟ್‍ಗೆ ಬಳಸಿಕೊಳ್ಳಲು ಅವಕಾಶವಿಲ್ಲ
* ಸ್ವಾಧೀನ ಪಡಿಸಿಕೊಂಡ ಜಮೀನಿನ ಮಾಲೀಕರಿಗೆ ನೇರ ಪರಿಹಾರ
*ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ


ಬೆಳಗಾವಿ, (ಡಿ.17): ವರ್ಷಗಳು ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ 500ಕ್ಕೂ ಹೆಚ್ಚು ಕೈಗಾರಿಕೆಗಳ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ (Murugesh Nirani) ತಿಳಿಸಿದರು. 

ಇಂದು (ಶುಕ್ರವಾರ) ಬೆಳಗಾವಿಯಲ್ಲಿ ನಡೆಯುತ್ತಿರುವ  ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ (Belagavi Winter Session) ಕಾಂಗ್ರೆಸ್ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಮಿ ಹಂಚಿಕೆಯಾಗಿ 5ರಿಂದ 20 ವರ್ಷ ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ ಭೂಮಿಯನ್ನು ವಾಪಸ್ ಪಡೆಯಲಾಗುವುದು.  ಈಗಾಗಲೇ ಅವುಗಳನ್ನ ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

Seed Funding: ಸಾಮಾನ್ಯ ವರ್ಗದ ಯುವಕರಿಗೂ ಸ್ವಯಂ ಉದ್ಯೋಗಕ್ಕೆ ‘ಸೀಡ್‌ ಮನಿ’: ಮುರುಗೇಶ್‌ ನಿರಾಣಿ

ಕಾರ್ಖಾನೆ ಪೂರ್ಣವಾಗಿ  ಪ್ರಾರಂಭಿಸದಿದ್ದರೆ ಸೇಲ್ ಡೀಡ್ ಮಾಡಿಕೊಡುವುದಿಲ್ಲ. ಸೇಲ್ ಡೀಡ್ ಆಗದೆ ಅವರು ಕೈಗಾರಿಕಾ ಭೂಮಿಯನ್ನು ರಿಯಲ್  ಎಸ್ಟೇಟ್‍ಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಕೈಗಾರಿಕೆಗೆ ಹಂಚಿಕೆಯಾದ ಜಮೀನಿನಲ್ಲಿ ಶೇ.15ರಷ್ಟು ವಸತಿಗೆ ಮೀಸಲಿಡಬೇಕು ಎಂದು ಹೇಳಿದರು.

ಸ್ಥಳೀಯರಿಗೆ ಉದ್ಯೋಗ
ಡಾ.ಸರೋಜಿನಿ ಮಹಿಷಿ ವರದಿಯಂತೆ ನಮ್ಮ ಸರ್ಕಾರ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಲು ಬದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು. 

ಶಾಸಕ ಅಮೃತ್ ದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಡಾ.ಸರೋಜಿನಿ ಮಹಿಷಿ ವರದಿಯಂತೆ ಕೈಗಾರಿಕಾ ಪ್ರದೇಶಗಳಿಗಾಗಿ  ಜಮೀನು ನೀಡಿದ ರೈತರಿಗೆ ಪರಿಹಾರ ನೀಡುವುದರ ಜೊತೆಗೆ ಅವರ ಕುಟುಂಬದ ಸದಸ್ಯರಿಗೆ ಜಮೀನು ನೀಡಿದ್ದೇವೆ. ಯಾವುದೇ ಕಾರಣಕ್ಕೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು. 

ಧಾರವಾಡ ಜಿಲ್ಲೆ ಬೇಲೂರು ಕೈಗಾರಿಕಾ ಪ್ರದೇಶಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ ಒಟ್ಟು 1992.19 ಎಕರೆ ಜಮೀನುನನ್ನು ಭೂ ಸ್ವಾೀನಪಡಿಸಿಕೊಳ್ಳಲಾಗಿದೆ.  ಬೇಲೂರಿನಲ್ಲಿ ಒಂದು ಎಕರೆಗೆ 12 ಸಾವಿರ ರೂ. ಮಮಿಘಟ್ಟಿಯಲ್ಲಿ 15 ಸಾವಿರ, ಗುಗ್ಗರಕಟ್ಟೆಯಲ್ಲಿ 18 ಸಾವಿರ  ಪ್ರತಿ ಎಕರೆಗೆ ಪರಿಹಾರ ಕೊಡತ್ತಿದ್ದೇವೆ. ಬೇಲೂರು ಕೈಗಾರಿಕಾ  ಪ್ರದೇಶದಲ್ಲಿ ಒಟ್ಟು 1414  ಉದ್ಯೋಗಗಳನ್ನು  ನೀಡಲಾಗಿದೆ. 1538 ಸ್ಥಳೀಯರಿಗೆ ಹಾಗೂ ಭೂಮಿ ಕಳೆದುಕೊಂಡ 76 ಜನರಿಗೆ ಉದ್ಯೋಗ ನೀಡಲಾಗಿದೆ  ಎಂದು ವಿವರಿಸಿದರು. 

ಒಂದು ವೇಳೆ ಯಾವುದಾದರೂ ಕೈಗಾರಿಕಾ ಪ್ರದೇಶಗಳಿಗೆ ಉದ್ಯೋಗ ನೀಡದೆ ಇರುವುದನ್ನು ಗಮನಕ್ಕೆ ತಂದರೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ಕೊಟ್ಟರು.

ಕೈಗಾರಿಕೆಗೆ ಬಳಸದ 500 ಎಕರೆ ನಿವೇಶನ ವಾಪಸ್‌

ಕೈಗಾರಿಕೆ ಉದ್ದೇಶಕ್ಕೆ (Industrial Purpose) ಪಡೆದ ಭೂಮಿಯನ್ನು ನಿಗದಿತ ಅವಧಿಯಲ್ಲಿ ಬಳಸದಿದ್ದರೆ ಕಾನೂನು ಪ್ರಕಾರ ಹಿಂಪಡೆಯಲಾಗುವುದು. ಈಗಾಗಲೇ ಸುಮಾರು 500 ಎಕರೆ ವಾಪಸ್‌ ಪಡೆಯಲು ನೋಟಿಸ್‌ ನೀಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದ್ದಾರೆ.

ಮಂಗಳವಾರ ಜೆಡಿಎಸ್‌ (JDS) ಸದಸ್ಯ ಮರಿತಿಬ್ಬೇಗೌಡ ಹಾಗೂ ಕಾಂಗ್ರೆಸ್‌ನ ಮೋಹನ್‌ಕುಮಾರ್‌ ಕೊಂಡಜ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕೆ ಸ್ಥಾಪನೆಗೆ ಪಡೆದುಕೊಂಡ ಭೂಮಿ ಅಥವಾ ಶೆಡ್‌ಗಳನ್ನು ನಿಗದಿತ ಅವಧಿಯಲ್ಲಿ ಬಳಸಬೇಕು, ಮೂರು ವರ್ಷಗಳಾದರೂ ಯೋಜನೆ ಅನುಷ್ಠಾನಗೊಳಿಸದಿದ್ದರೆ ಅಂತಹ ಭೂಮಿ ಅಥವಾ ಶೆಡ್‌ಗಳನ್ನು ಹಿಂಪಡೆದು ಬೇರೆಯವರಿಗೆ ಹಂಚಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ ಅವರು, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ಪೈಕಿ ಸೋಮನಹಳ್ಳಿ ಗ್ರಾಮದ ಸರ್ವೆ ನ. 20ರಲ್ಲಿನ 3-16 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಖಾಸಗಿ ಮಾಲೀಕತ್ವದ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಆದರೆ ಕೆಐಎಡಿಬಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.  ಕೈಗಾರಿಕಾ ಪ್ರದೇಶಗಳಲ್ಲಿ ಮೂರ್ನಾಲ್ಕು ನಿವೇಶನಗಳನ್ನು ಅನೇಕ ವರ್ಷಗಳ ಹಿಂದೆಯೇ ಪಡೆದಿದ್ದರೂ ಈವರೆಗೆ ಕಾರ್ಯಾರಂಭವಾಗಿಲ್ಲ. ಮೂರು ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸದೇ ಇದ್ದರೂ ಈವರೆಗೆ ಈ ನಿವೇಶನಗಳನ್ನು ಹಿಂಪಡೆದಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ನಿರಾಣಿ ಅವರು, ಈ ಬಗ್ಗೆ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

click me!