ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿ, ಕೋರ್ಟ್ ಬಿಗ್ ತೀರ್ಪು

Published : Apr 15, 2026, 05:31 PM ISTUpdated : Apr 15, 2026, 05:41 PM IST
 vinay kulkarni and yogesh gowda

ಸಾರಾಂಶ

ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದೆ. 2016ರಲ್ಲಿ ನಡೆದ ಈ ಕೊಲೆಯು ಆಸ್ತಿ ವಿವಾದ ಮತ್ತು ರಾಜಕೀಯ ಪ್ರೇರಿತವಾಗಿದ್ದು, ಸಿಬಿಐ ತನಿಖೆಯ ನಂತರ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ.

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಒಟ್ಟು 21 ಆರೋಪಿಗಳಲ್ಲಿ  A20 - ವಾಸುದೇವ್​​ ನಿಲೇಕಣಿ , A21 - ಸೋಮಶೇಖರ್​ ಬಸಪ್ಪ ನ್ಯಾಮಗೌಡ ನಿರ್ದೋಷಿ, ಮುತ್ತಗಿ ಹಾಗೂ ಶ್ರೀಶೈಲ ಬಿರಾದರ್ ಮಾಫಿ ಸಾಕ್ಷಿ ಎಂದು ಘೋಷಿಸಿದ್ದು, ಉಳಿದ 17 ಮಂದಿ ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಕೋರ್ಟ್ ಸೂಚನೆ ನೀಡಿತು. Crpc 302, 120b, 201, 148, 149, ಸೆಕ್ಷನ್ ಅಡಿ ಆರೋಪಿಗಳು ದೋಷಿ ಎಂದು ತೀರ್ಪು ನೀಡಿತು.  ಈ ಮೂಲಕ ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ಕೊನೆಗೂ ಈ ಪ್ರಕರಣದಲ್ಲಿ ಶಿಕ್ಷೆಯಾಗಿ ನ್ಯಾಯಾಂಗ ಅಂತಿಮ ಮುದ್ರೆ ಬಿದ್ದಿದೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಅಪರಾಧಿಯಾಗಿದ್ದಾರೆ. ನ್ಯಾ. ಸಂತೋಷ್ ಗಜಾನನ ಭಟ್ ಅವರಿಂದ ಈ  ತೀರ್ಪು ಪ್ರಕಟವಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ತೀರ್ಪು ಬಳಿಕ ಕೋರ್ಟ್ ಹಾಲ್ ನಲ್ಲಿಯೇ ಎಲ್ಲಾ ಆರೋಪಿಗಳನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದರು.  

ತೀರ್ಪು ಪ್ರಕಟಣೆ ಮುಂದೂಡಲ್ಪಟ್ಟಿದ್ದು ಏಕೆ?

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಾಲಯವು ಏಪ್ರಿಲ್ 9ರಂದು ತೀರ್ಪು ಪ್ರಕಟಿಸುವುದಾಗಿ ಮೊದಲು ತಿಳಿಸಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ತೀರ್ಪು ರಚನೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅದನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಕೊಲೆ ಆರೋಪಿಗಳ ಜೊತೆ ವಿನಯ್‌ಕುಲಕರ್ಣಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತು. ಒಟ್ಟು 3 ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿದ್ದು, 113 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. 40 ಜನ ಸಾಕ್ಷಿಗಳ ವಿಡಿಯೋ ಹೇಳಿಕೆ ದಾಖಲಿಸಲಾಗಿದೆ.  ಪ್ರಕರಣದ ತೀರ್ಪು ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆ ನ್ಯಾಯಾಲಯಕ್ಕೆ ಕುಲಕರ್ಣಿ ಆಗಮಿಸಿದ್ದರು. ಧಾರವಾಡದಿಂದ ಬೆಂಬಲಿಗರು ಕೂಡ ಆಗಮಿಸಿದ್ದರು.

19  ಅಪರಾಧಿಗಳ ಪಟ್ಟಿ ಇಂತಿದೆ

A1 - ಬಸವರಾಜ್‌ ಮುತ್ತಗಿ (ಮಾಫಿ ಸಾಕ್ಷಿ), A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ,  A7 - ಸಂತೋಷ್,  A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್, ​​A15 - ವಿನಯ್ ಕುಲಕರ್ಣಿ,  A16 - ಚಂದ್ರಶೇಖರ್​ ಇಂಡಿ , A17 - ಶಿವಾನಂದ್​​ ಶ್ರೀಶೈಲ ಬಿರಾದರ್ (ಮಾಫಿ ಸಾಕ್ಷಿ), ​A18 - ವಿಕಾಸ್​​ ಕಲಬುರ್ಗಿ,  A19 - ಚೆನ್ನಕೇಶವ ಟಿಂಗರಿಕರ್ 

ಪ್ರಕರಣದ ಹಿನ್ನೆಲೆ

2016ರ ಜೂನ್ 15ರಂದು ಧಾರವಾಡದಲ್ಲಿ ನಡೆದಿದ್ದ ಈ ಭೀಕರ ಘಟನೆಯಲ್ಲಿ, ಯೋಗೇಶ್ ಗೌಡ ಅವರನ್ನು ಮುಂಜಾನೆ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಂಭಿಕ ತನಿಖೆಯಲ್ಲಿ ಆಸ್ತಿ ವಿವಾದವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿತ್ತು.

ಮೊದಲ ಹಂತದಲ್ಲಿ ಆರು ಮಂದಿಯ ವಿರುದ್ಧ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಮತ್ತು ರಾಜಕೀಯ ಅಂಶಗಳ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದಂತೆ, ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI)ಗೆ ಹಸ್ತಾಂತರಿಸಲಾಯಿತು.

ಯೋಗೇಶ್ ಗೌಡ ಕೊಲೆ ಪ್ರಕರಣ ಹಿನ್ನೆಲೆ ಕೋರ್ಟ್ ತೀರ್ಪಿಗೂ ಮುನ್ನ ಸದಾಶಿವನಗರ ನಿವಾಸದಲ್ಲಿ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ನೀಡಿ, ಇವತ್ತು ತೀರ್ಪು ಕೊಡ್ತೀನಿ ಅಂತ ಹೇಳಿದ್ರು. ನ್ಯಾಯಾಂಗ ವ್ಯವಸ್ಥೆ ಮೇಲೆ‌ ವಿಶ್ವಾಸ ಇದೆ. ತೀರ್ಪು ಬಂದ ಬಳಿಕ ಮಾತನಾಡುತ್ತೇನೆ. ಈ ಸಂದರ್ಭದಲ್ಲಿ ಚಾರ್ಜ್ ಶೀಟ್ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದರು.

ಸುಮಾರು 10 ವರ್ಷಗಳ ಬಳಿಕ ಈ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿರುವುದು ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ರಾಜಕೀಯ, ಆಸ್ತಿ ವಿವಾದ ಮತ್ತು ವೈಯಕ್ತಿಕ ವೈಮನಸ್ಸು ಎಲ್ಲಾ ಸೇರಿ ನಡೆದ ಈ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ನ್ಯಾಯಾಲಯದ ತೀರ್ಪು ಈ ಪ್ರಕರಣಕ್ಕೆ ಒಂದು ಮಹತ್ವದ ತಿರುವು ನೀಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿನಯ್ ಕುಲಕರ್ಣಿ ಕೊಲೆಗಾರ: 40 ಎಕರೆ ಜಮೀನು ತಕರಾರು, ರಾಜಕೀಯ ದ್ವೇಷಕ್ಕೆ ಕುಟುಂಬದ ಆಧಾರವನ್ನೇ ಮುಗಿಸಿದ ಕಥೆ!
ಯೋಗೇಶ್ ಗೌಡ ಹತ್ಯೆ ಕೇಸಲ್ಲಿ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದ ಕೋರ್ಟ್; ಧಾರವಾಡದಲ್ಲಿ 'ಖಾಕಿ' ಹೈ ಅಲರ್ಟ್!