
ಬೆಂಗಳೂರು (ಏ.15): ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನೆಪದಲ್ಲಿ ವಿಧಾನ ಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶಕ್ಕೆ ಅಬ್ದುಲ್ ಜಬ್ಬಾರ್ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದು, ಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ತಮ್ಮ ಅಮಾನತು ಆದೇಶದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಬ್ದುಲ್ ಜಬ್ಬಾರ್, 'ನನಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನಿಮ್ಮ ಮುಖಾಂತರವೇ ನನಗೆ ವಿಷಯ ತಿಳಿದಿದೆ. ಅಮಾನತು ಮಾಡುವುದಕ್ಕೆ ಯಾವುದಾದರೂ ಆಡಿಯೋ ಅಥವಾ ವಿಡಿಯೋ ದಾಖಲೆ ಇದ್ದರೆ ಅದನ್ನು ಸಾರ್ವಜನಿಕವಾಗಿ ತೋರಿಸಲಿ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ' ಎಂದು ಕೆಪಿಸಿಸಿ ನಾಯಕತ್ವಕ್ಕೆ ನೇರ ಸವಾಲು ಹಾಕಿದ್ದಾರೆ.
ಈ ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿರುವ ಅವರು, 'ನನ್ನನ್ನು ಅಮಾನತು ಮಾಡುವ ಅಗತ್ಯವೇ ಇರಲಿಲ್ಲ. ನಾನೇ ಖುದ್ದಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಅಲ್ಲಿನ ಮುಖಂಡರಾಗಲಿ ಅಥವಾ ಅಭ್ಯರ್ಥಿಯಾಗಲಿ ಯಾರೂ ನನ್ನನ್ನು ಬಂದು ಮಾತನಾಡಿಸಲಿಲ್ಲ. ಈ ಕಡೆಗಣನೆಯಿಂದ ಬೇಸತ್ತು ನಾನೇ ನಿರ್ಧಾರ ಕೈಗೊಂಡಿದ್ದೆ. ಯಾರು ಕೂಡ ನನಗೆ ರಾಜೀನಾಮೆ ಕೊಡಿ ಎಂದು ಕೇಳಿರಲಿಲ್ಲ, ಸ್ವತಃ ನಾನೇ ಹೊರಬಂದಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಶಿಸ್ತು ಸಮಿತಿಯ ವಿರುದ್ಧ ಆಕ್ರೋಶ ಹೊರಹಾಕಿದ ಜಬ್ಬಾರ್, 'ಕಾಂಗ್ರೆಸ್‌ನಲ್ಲಿ ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ ಮಾಡಲಾಗುತ್ತಿದೆ. ಹಿಂದೆ ಏನೆಲ್ಲಾ ಘಟನೆಗಳು ನಡೆದಿವೆ, ಅಂತಹವರನ್ನು ಬಿಟ್ಟು ನನ್ನನ್ನು ಗುರಿ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂಬ ಪೂರ್ಣ ಮಾಹಿತಿ ಬಂದ ನಂತರ ನಾನು ಸರಿಯಾದ ಉತ್ತರ ನೀಡುತ್ತೇನೆ' ಎಂದು ಗುಡುಗಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಬ್ದುಲ್ ಜಬ್ಬಾರ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಕೆಲವು ಆಡಿಯೋಗಳು ವೈರಲ್ ಆಗಿವೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಏಪ್ರಿಲ್ 15, 2026ರಂದು ಅಮಾನತು ಆದೇಶ ಹೊರಡಿಸಿದ್ದರು.
ಮೇಲ್ನೋಟಕ್ಕೆ ಇದು ಕೇವಲ ಒಬ್ಬ ನಾಯಕನ ಅಮಾನತು ಎನಿಸಿದರೂ, ಇದರ ಹಿಂದೆ ದೊಡ್ಡ ರಾಜಕೀಯ ಹಗ್ಗಜಗ್ಗಾಟವಿದೆ. ಅಬ್ದುಲ್ ಜಬ್ಬಾರ್ ಅವರಂತಹ ಹಿರಿಯ ನಾಯಕರು 'ತಾರತಮ್ಯ'ದ ಆರೋಪ ಮಾಡಿರುವುದು ಕೆಪಿಸಿಸಿಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ಒಂದು ಕಡೆ ಪಕ್ಷವು ಶಿಸ್ತಿನ ಕ್ರಮ ಎನ್ನುತ್ತಿದ್ದರೆ, ಇನ್ನೊಂದು ಕಡೆ ಜಬ್ಬಾರ್ ಅವರು 'ನಾನೇ ಮೊದಲೇ ಹೊರಬಂದಿದ್ದೇನೆ' ಎನ್ನುವ ಮೂಲಕ ಅಮಾನತು ಆದೇಶದ ಮೌಲ್ಯವನ್ನೇ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ