
ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ್ ಅವರ ಆತ್ಮ*ಹತ್ಯೆ ಪ್ರಕರಣವು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಭಾರೀ ಆರೋಪ ಕೇಳಿಬಂದಿದೆ. ಜೈಲರ್ ಸಿದ್ದರಾಮಪ್ಪ ಅವರ ಸಾವಿಗೆ ರಾಜ್ಯ ಕಾರಾಗೃಹ ಇಲಾಖೆಯ ಡಿಜಿಪಿ (DGP) ಅಲೋಕ್ ಕುಮಾರ್ ಅವರ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಡಿಜಿಪಿ ವಿರುದ್ಧವೇ ಪ್ರಕರಣ ದಾಖಲಿಸಲು ಪತ್ನಿ ಹಾಗೂ ಕುಟುಂಬ ಸಜ್ಜಾಗಿದೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಸಿದ್ದರಾಮಪ್ಪ ಅಮಾನತುಗೊಂಡಿದ್ದರು. ಬಳಿಕ ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರು ಇನ್ನೇನು ಮೈಸೂರಿಗೆ ಹೋಗಿ ವರದಿ ಮಾಡಿಕೊಳ್ಳಬೇಕಿತ್ತು, ಅಷ್ಟರಲ್ಲಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.
ಜೈಲರ್ ಸಿದ್ದರಾಮಪ್ಪ ಅವರ ನಿಗೂಢ ಆತ್ಮ*ಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿ ಲಕ್ಷ್ಮಿ ಅವರು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಇಲಾಖಾ ವಿಚಾರಣೆಯ ನೆಪದಲ್ಲಿ ಕಳೆದ ಎರಡು ತಿಂಗಳ ಹಿಂದೆ ಪತಿ ಸಿದ್ದರಾಮಪ್ಪ ಅವರನ್ನು ಸೇವೆಯಿಂದ ಅಮಾನತು (Suspend) ಮಾಡಲಾಗಿತ್ತು. ಇಲಾಖೆಯ ಈ ಕ್ರಮದಿಂದ ಅವರು ತೀವ್ರವಾಗಿ ನೊಂದಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬುದು ಕುಟುಂಬದ ವಾದ. ಜೂನ್ 12 ರಂದು ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹ ಸಿಬ್ಬಂದಿ ವಸತಿಗೃಹದ ಮನೆಯಲ್ಲಿ ಸಿದ್ದರಾಮಪ್ಪ ಶವವಾಗಿ ಪತ್ತೆಯಾಗಿದ್ದರು. ಇಂದು ವೈದ್ಯರು ಶವಪರೀಕ್ಷೆ (Post-mortem) ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಪ್ರಕರಣ ಇಲ್ಲಿಗೇ ಮುಗಿಯದೆ, ಜೈಲರ್ ಸಿದ್ದರಾಮಪ್ಪ ಅವರ ಸಾವಿಗೆ ಇಲಾಖೆಯ ಉನ್ನತಾಧಿಕಾರಿಯ ಕಿರುಕುಳವೇ ಕಾರಣ ಎಂದು ಮೃತರ ಪತ್ನಿ ಲಕ್ಷ್ಮಿ ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಮಾನಸಿಕ ಕಿರುಕುಳ (Mental Harassment) ನೀಡಿದ ಆರೋಪದಡಿ ಧಾರವಾಡ ಉಪನಗರ ಪೊಲೀಸ್ ಠಾಣೆ ದೂರು ದಾಖಲಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
ನನ್ನ ಪತಿಗೆ ಡಿಜಿಪಿ ಅಲೋಕ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದ್ದಾರೆ. ಇಲಾಖೆಯ ಅಧಿಕೃತ ವಿಡಿಯೋ ಕಾನ್ಫರೆನ್ಸ್ (Video Conference) ಸಭೆಗಳಲ್ಲಿ ಕನಿಷ್ಠ ಮೂರು ಬಾರಿ ನನ್ನ ಪತಿಯನ್ನು ಎಲ್ಲರೆದುರು ಏಕವಚನದಲ್ಲಿ ನಿಂದಿಸಲಾಗಿದೆ. ಶ್ರೀ ಶ್ರೀ ಸಿದ್ದರಾಮಪ್ಪ, ನಿನಗೆ ಯಾವ ಶಿಕ್ಷೆ ಕೊಡಬೇಕು ಹೇಳು? ಎಂದು ಮೀಟಿಂಗ್‌ನಲ್ಲಿ ಇತರ ಅಧಿಕಾರಿಗಳ ಸಮ್ಮುಖದಲ್ಲೇ ಅವಮಾನಿಸಿದ್ದರು. ಈ ನಿರಂತರ ಕಿರುಕುಳ ಹಾಗೂ ಅಮಾನತಿನಿಂದಾಗಿ ನನ್ನ ಪತಿ ಮಾನಸಿಕವಾಗಿ ಸಂಪೂರ್ಣವಾಗಿ ಕುಸಿದುಹೋಗಿದ್ದರು ಎಂದು ಪತ್ನಿ ಲಕ್ಷ್ಮಿ ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ತಮ್ಮ ಪತಿಯ ಸಾವಿಗೆ ಕಾರಣರಾದ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ತಮಗೆ ನ್ಯಾಯ ಸಿಗಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ. ಈ ಘಟನೆಯು ಇಡೀ ಪೊಲೀಸ್ ಹಾಗೂ ಕಾರಾಗೃಹ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಉನ್ನತಾಧಿಕಾರಿಗಳ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ