
ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಡಿ.01): ರಾಜ್ಯದಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ರಾಜ್ಯದಲ್ಲಿ ಒಟ್ಟು 2,76,386 ಹುದ್ದೆಗಳನ್ನು ಭರ್ತಿ ಮಾಡುವುದಂತೆ ಹಾಗೂ ನೇಮಕಾತಿ ವಯೋಮಿತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಶ್ರೀನಗರ ಸರ್ಕಲ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಪರಿಸ್ಥಿತಿ ಕೈಮೀರಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಅವರ ಧ್ವನಿಯನ್ನೇ ಹತ್ತಿಕ್ಕಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜನ ಸಮಾನ್ಯ ವೇದಿಕೆ ಮತ್ತು ಇನ್ನಿತರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಜೊತೆಗೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಇತ್ತು. ಈ ಪ್ರತಿಭಟನೆಗೆ ಅವರು ಅನುಮತಿ ಕೋರಿದ್ದರು, ಈ ಸಂಬಂಧ ನಾವೂ ಹೆಚ್ಚಿನ ಮಾಹಿತಿ ಕೇಳಿದ್ದೆವು. 30 ಸಾವಿರ ಜನ ವಿದ್ಯಾರ್ಥಿಗಳು ಪ್ರತಿಭಟನೆಗೆ ಬರಲಿದ್ದಾರೆ ಎಂದು ಹೇಳಿದ್ದರು.
ನಗರದ ಕೆಲವು ಪಿಜಿ ಮತ್ತು ಲೈಬ್ರರಿಯಲ್ಲಿ ಇರುವವರು ಅಹೋರಾತ್ರಿ ಧರಣಿ ಮತ್ತು ಜಂಕ್ಷನ್ ಬಂದ್ ಮಾಡುವ ಮಾತನ್ನು ಹೇಳಿದ್ದರು. ಇದರ ಹಿನ್ನೆಲೆ ವಿವರಣೆ ಕೇಳಿದ್ದೆವು. ಯಾರ ನೇತೃತ್ವದಲ್ಲಿ, ಎಷ್ಟು ಜನ ಬರುತ್ತಾರೆ ಎಂಬ ಮಾಹಿತಿಯನ್ನೂ ಕೇಳಿದ್ದೆವು. ಧಾರವಾಡ ನಗರದಲ್ಲಿ ಒಟ್ಟಾರೆ 80 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ ಶಾಲಾ, ಕಾಲೇಜು ಆಸ್ಪತ್ರೆ ಇವೆ. ಸ್ಥಳೀಯ ಜನ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ವಿದ್ಯಾರ್ಥಿ ಸಮುದಾಯ ಇರುವ ಈ ಜಾಗದಲ್ಲಿ ಪರಿಸ್ಥಿತಿ ಲಾಭ ಪಡೆಯಲು ಕಿಡಿಗೇಡಿಗಳು ತಪ್ಪು ಕೆಲಸ ಮಾಡಿದರೆ, ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಪ್ರತಿಭಟನೆಗೆ ಅನುಮತಿ ಕೊಟ್ಟಿರಲಿಲ್ಲ ಎಂದರು.
ವಿದ್ಯಾರ್ಥಿ ಸಂಘಟನೆಗಳು ಸರಿಯಾಗಿ ಮಾಹಿತಿಯನ್ನು ಕೊಡಲಿಲ್ಲ, ಅಷ್ಟಾಗಿಯೂ ಇವತ್ತು ಬೆಳಿಗ್ಗೆ ಪ್ರತಿಭಟನಾಕಾರರು ಹಾಗೂ ಸ್ಥಳೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 200 ಜನರು ಸೇರಿದ್ದರು. ಈ ಪ್ರತಿಭಟನೆ ಆಯೋಜನೆ ಮಾಡಿದವರಿಗೆ ಇದು ಕಾನೂನು ಬಾಹಿರ ಎಂದು ನಾನು ಹೇಳಿದ್ದೆ. ನಂತರದ ಪರಿಸ್ಥಿತಿ ನೋಡಿದಾಗ ಯಾರಾದರೂ ಒಬ್ಬರು ತಪ್ಪು ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುತ್ತದೆ. ಅನುಮತಿಯಿಲ್ಲದ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮದ ಬಗ್ಗೆ ತಿಳುವಳಿಕೆ ಹೇಳಿದ್ದೆ. ಅದಕ್ಕೆ ಒಪ್ಪದೆ ಕೆಲವು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಡಿಸಿ ಕಚೇರಿವರೆಗೆ ಮೆರವಣಿಗೆ ಹೋಗುತ್ತೇವೆ ಎಂದಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ದಾರಿಯಲ್ಲಿ ಹತ್ತಾರು ಕೋಚಿಂಗ್ ಸೆಂಟರ್ ಇವೆ. ಅಲ್ಲಿನ ಎಲ್ಲ ವಿದ್ಯಾರ್ಥಿಗಳು ಪ್ರತಿಭಟನೆಗೆ ಸೇರಿಕೊಂಡಾಗ ಪರಿಸ್ಥಿತಿ ಕೈ ಮೀರಬಾರದು ಎಂದು ನಾವು ಅವರನ್ನು ವಶಕ್ಕೆ ಪಡೆದಿದ್ದೇವೆ. ಮುಂಜಾಗೃತಾ ಕ್ರಮದ ಹಿನ್ನೆಲೆ ಈ ಕ್ರಮ ಮಾಡಿದ್ದೇವೆ. 35 ಜನರನ್ನು ವಶಕ್ಕೆ ಪಡೆದಿದ್ದೇವೆ, ಮಹಿಳಾ ಆಕಾಂಕ್ಷಿಗಳು ಕೂಡ ಇದರಲ್ಲಿ ಇದ್ದಾರೆ.
ಪ್ರತಿಭಟನೆ ಹತ್ತಿಕುವ ಕೆಲಸ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಈ ಹಿಂದೆ ಪ್ರತಿಭಟನೆ ಮಾಡಿದಾಗ ಕೆಲವರು ಅಸಭ್ಯ ಘೋಷಣೆ ಹಾಕಿದ್ದರು. ಜುಬಿಲಿ ಸರ್ಕಲ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಿಸಿದ್ದರು. ಇದರಿಂದ ಜನರಿಗೆ ತೊಂದರೆ ಆಗಿತ್ತು. ಪ್ರತಿಭಟನೆ ಹತ್ತಿಕುವ ಪ್ರಶ್ನೆ ಇಲ್ಲ, ಪ್ರತಿಭಟನೆ ಮಾಡಲು ಸಮಾನ ಅವಕಾಶ ಇದೆ. ಆದರೆ ಅವಕಾಶ ನಿಯಮದಂತೆ ಮಾಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ