ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲು ಆರಂಭ ಇನ್ನೂ ವಿಳಂಬ?

By Kannadaprabha NewsFirst Published May 31, 2023, 12:09 AM IST
Highlights

ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ್‌ ರೈಲು ಸಂಚಾರ ಆರಂಭವಾಗುವುದು ಯಾವಾಗ? ಏಪ್ರಿಲ್‌ನಿಂದ ಪ್ರಾರಂಭವಾಗಬೇಕಿದ್ದ ರೈಲು ಈವರೆಗೂ ಪ್ರಾರಂಭವಾಗದಿರುವುದಕ್ಕೆ ಕಾರಣವೇನು?

ಶಿವಾನಂದ ಗೊಂಬಿ

ಹುಬ್ಬಳ್ಳಿ (ಮೇ.31) : ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ್‌ ರೈಲು ಸಂಚಾರ ಆರಂಭವಾಗುವುದು ಯಾವಾಗ? ಏಪ್ರಿಲ್‌ನಿಂದ ಪ್ರಾರಂಭವಾಗಬೇಕಿದ್ದ ರೈಲು ಈವರೆಗೂ ಪ್ರಾರಂಭವಾಗದಿರುವುದಕ್ಕೆ ಕಾರಣವೇನು?

ಇವು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ದೇಶದ ವಿವಿಧೆಡೆ ಈವರೆಗೆ ಬರೋಬ್ಬರಿ 18 ವಂದೇ ಭಾರತ್‌ ರೈಲು(Vande bharat train) ಸಂಚರಿಸುತ್ತಿವೆ. ಕೇಂದ್ರದ ಮಹತ್ವಾಕಾಂಕ್ಷಿ ರೈಲು ಇದು. ಉತ್ತರ ಕರ್ನಾಟಕNorth karnataka( ಭಾಗದ ಧಾರವಾಡ-ಬೆಂಗಳೂರು ಮಧ್ಯೆಯೂ ವಂದೇ ಭಾರತ್‌ ರೈಲು ಸಂಚರಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ರೈಲ್ವೆ ಸಚಿವ ವೈಷ್ಣವ ಅಶ್ವಿನ್‌ ಹುಬ್ಬಳ್ಳಿಗೆ ಬಂದಿದ್ದ ವೇಳೆ ಏಪ್ರಿಲ್‌ನಲ್ಲಿ ಧಾರವಾಡದಿಂದ ಬೆಂಗಳೂರು ವಂದೇ ಭಾರತ್‌ ರೈಲು ಓಡಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಏಪ್ರಿಲ್‌ನಿಂದಲೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.

ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಧಾರವಾಡ-ಬೆಂಗಳೂರು ಹೈಸ್ಪೀಡ್ 'ವಂದೇ ಭಾರತ್' ಆರಂಭ

ವಿಳಂಬವೇಕೆ?

ಹಾಗೆ ನೋಡಿದರೆ ಈಗಾಗಲೇ ವಂದೇ ಭಾರತ್‌ ರೈಲು ಸಂಚರಿಸಲು ಬೇಕಾದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಕಲ್ಲು ಕ್ವಾರಿಗಳ ಮಾಲೀಕರ ಪ್ರತಿಭಟನೆಯಿಂದಾಗಿ ಕೊಂಚ ವಿಳಂಬವಾಯಿತು. ಮಾ.31ಕ್ಕೆ ಹುಬ್ಬಳ್ಳಿ-ಬೆಂಗಳೂರು ಮಧ್ಯದಲ್ಲಿ ವಿದ್ಯುದ್ದೀಕರಣ ಮುಗಿಯಲಿಲ್ಲ. ಅಂದುಕೊಂಡಂತೆ ಸಕಾಲದಲ್ಲಿ ಕಾಮಗಾರಿ ಮುಗಿಯಲಿಲ್ಲ. ಬಳಿಕ ವಿಧಾನಸಭೆ ಚುನಾವಣೆ ಕೂಡ ಘೋಷಣೆಯಾಯಿತು. ಹೀಗಾಗಿ ವಂದೇ ಭಾರತ್‌ ರೈಲು ಸಂಚಾರದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಇದೀಗ ಕಾಮಗಾರಿ ಶೇ.90ಕ್ಕೂ ಹೆಚ್ಚು ಭಾಗ ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿಯೆಲ್ಲ ಪೂರ್ಣಗೊಳ್ಳಲಿದೆ. ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ವಂದೇ ಭಾರತ್‌ ರೈಲು ಸಂಚಾರದ ಬಗ್ಗೆ ನಿರ್ಧಾರವನ್ನು ರೈಲ್ವೆ ಮಂಡಳಿ ತೆಗೆದುಕೊಳ್ಳಲಿದೆ. ಆ ಬಳಿಕವೇ ಸಂಚಾರ ಆರಂಭವಾಗಲಿದೆ. ಇದೆಲ್ಲ ಆಗಿ ರೈಲು ಸಂಚಾರ ಆಗಬೇಕೆಂದರೆ ಕನಿಷ್ಠವೆಂದರೂ ಇನ್ನೂ 2 ತಿಂಗಳಾದರೂ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಏನು ಲಾಭ?:

ವಂದೇ ಭಾರತ್‌ ರೈಲು ಪ್ರತಿಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲಾಗಿದೆ. ಆದರೆ ಹಳಿಯ ಸಾಮರ್ಥ್ಯ, ಸಮತಟ್ಟು ಪ್ರದೇಶ, ತಿರುವುಗಳೆಲ್ಲವನ್ನು ಲೆಕ್ಕ ಹಾಕಬೇಕಾಗುತ್ತದೆ. ಹೀಗಾಗಿ ಅಲ್ಪ ಸ್ವಲ್ಪ ಸ್ಪೀಡ್‌ನಲ್ಲಿ ವ್ಯತ್ಯಾಸವಾಗಬಹುದು ಎಂದು ಇಲಾಖೆಯ ಅಂದಾಜು ಆಗಿದೆ. ಆದರೂ ಈಗ ಸಂಚರಿಸುವ ಎಲ್ಲ ರೈಲುಗಳಿಗಿಂತ ಈ ವಂದೇ ಭಾರತ್‌ ರೈಲಿನ ಸ್ಪೀಡ್‌ ಮಾತ್ರ ಜಾಸ್ತಿ ಇರುತ್ತದೆ. ಸದ್ಯ ರಾಣಿ ಚೆನ್ನಮ್ಮ ರೈಲು ಹುಬ್ಬಳ್ಳಿಯಿಂದ ಬೆಂಗಳೂರು ತಲುಪಲು 6 ರಿಂದ 6.30 ತಾಸು ತೆಗೆದುಕೊಳ್ಳುತ್ತದೆ. ವಂದೇ ಭಾರತ್‌ ರೈಲು ಸಂಚಾರ ಆರಂಭವಾದರೆ 5ಗಂಟೆಗೆಲ್ಲ ಧಾರವಾಡದಿಂದ ಬೆಂಗಳೂರಿಗೆ ತಲುಪಬಹುದಾಗಿದೆ. ಆದರೂ ಪ್ರಾಯೋಗಿಕ ಸಂಚಾರದ ಬಳಿಕವೇ ನಿಖರ ಸಮಯ ಗೊತ್ತಾಗುವುದು ಎಂದು ಇಲಾಖೆ ತಿಳಿಸುತ್ತದೆ.

 

 

ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್‌ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್‌ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ

ಆದರೆ ವಂದೇ ಭಾರತ್‌ ರೈಲಿನ ಬಗ್ಗೆ ಜನರಲ್ಲಿ ಕುತೂಹಲವನ್ನುಂಟು ಮಾಡಿರುವುದಂತೂ ಸತ್ಯ. ಆದಷ್ಟುಬೇಗನೆ ಈ ವಂದೇ ಭಾರತ್‌ ರೈಲು ಪ್ರಾರಂಭವಾಗಲಿ ಎಂಬುದು ಜನರ ಆಶಯ.

ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ವಂದೇ ಭಾರತ್‌ ಸಂಚಾರಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಂಡಿಲ್ಲ. ಕಾಮಗಾರಿಯೆಲ್ಲ ಪೂರ್ಣಗೊಳ್ಳಬೇಕೆಂದರೆ ಇನ್ನು ಕೆಲ ದಿನ ಬೇಕಾಗಬಹುದು. ಅದು ಪೂರ್ಣಗೊಂಡ ಬಳಿಕ ಪ್ರಯೋಗಿಕವಾಗಿ ಸಂಚಾರ ನಡೆಸಿ ನಂತರ ಚಾಲನೆ ನೀಡಲಾಗುವುದು.

-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

click me!