ಅತ್ತೆ ಒಪ್ಪಿದಲ್ಲಿ ಮಾತ್ರ ಸೊಸೆಗೆ ಕಾಂಗ್ರೆಸ್‌ ಗ್ಯಾರಂಟಿ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

By Sathish Kumar KH  |  First Published May 30, 2023, 11:27 PM IST

ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯಡಿ ಕುಟುಂಬದ ಒಡತಿಯಾದ ಅತ್ತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.


ಬೆಳಗಾವಿ (ಮೇ 30): ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯಡಿ ಕುಟುಂಬದ ಒಡತಿಯಾದ ಅತ್ತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸುವರ್ಣ ಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಪ್ರದಾಯದಲ್ಲಿ ಕುಟುಂಬದ ಒಡತಿಯಾದ ಅತ್ತೆಗೆ ಮಾಸಿಕವಾಗಿ 2 ಸಾವಿರ ರೂ. ಗೌರವ ಧನ ನೀಡಲಾಗುವುದು. ಒಂದು ವೇಳೆ ಅತ್ತೆ ಒಪ್ಪಿಗೆ ನೀಡಿದ್ದಲ್ಲಿ ಸೊಸೆಗೆ ಗೌರವ ಧನ ನೀಡಲಾಗುವುದು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಒಡತಿಗೆ 2 ಸಾವಿರ ರೂ. ಮಾಸಿಕ ಗೌರವ ಧನ ನೀಡುವುದಾಗಿ ಭರವಸೆ ಕೊಟ್ಟಿದೆ. ಅದರಂತೆ ನಮ್ಮ ಸರ್ಕಾರ ನಡೆದುಕೊಳ್ಳುತ್ತದೆ. ನೂರಕ್ಕೆ ನೂರಷ್ಟು ಐದು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲಿದೆ. ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಪ್ರತಿಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಭೆ ಕರೆದಿದ್ದಾರೆ. ಅಲ್ಲಿ ಮಾನದಂಡ ರೂಪಿಸಿ, ಕುಟುಂಬದ ಒಡತಿಯಾದ ಅತ್ತೆಗೆ ಮಾಸಿಕ ಗೌರವ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿಯನ್ನು ನೀಡಿದರು.

Latest Videos

undefined

ಕೆಎಸ್‌ಆರ್‌ಟಿಸಿ ಬಸ್‌ ಓಡಿಸುತ್ತಲೇ ಚಾಲಕ ಸಾವು: ಮುಂದಾಗಿದ್ದೇ ರೋಚಕ

ಹಂತ ಹಂತವಾಗಿ ಭರವಸೆಗಳ ಈಡೇರಿಕೆ: ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳನ್ನು ಹಂತ, ಹಂತವಾಗಿ ಈಡೇರಿಸುತ್ತೇವೆ. ಈಗಾಗಲೇ ಇದರ ಕುರಿತಾಗಿ ಸಿದ್ಧತೆಗಳು ಸಹ ಆರಂಭವಾಗಿವೆ. ತುಸು ಸಮಯ ಹಿಡಿಯುತ್ತದೆ, ತಾಳ್ಮೆಯಿಂದ ಇರಿ. ಹಾಗೆಂದು ಜನರನ್ನು ತುಂಬಾ ದಿನ ಕಾಯಿಸುವುದಿಲ್ಲ ಎಂದು ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್ (Lakshmi hebbalkar minister) ಭರವಸೆ ನೀಡಿದ್ದಾರೆ.

ಕುವೆಂಪು ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಗ್ಯಲಕ್ಷ್ಮೇ ಯೋಜನೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ಮನೆ ಒಡತಿಗೆ .2,000 ಮಾಸಿಕ ಗೌರವಧನ ಸೇರಿದಂತೆ ಜನತೆಗೆ ನೀಡಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು. ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೆ .15 ಲಕ್ಷ ಹಾಕುತ್ತೇವೆ ಎಂದು ಹೇಳಿ ಜನರನ್ನು ನಂಬಿಸಿ ಕೈ ಕೊಟ್ಟಿದ್ದಾರೆ. ನಾವು ಹಾಗಲ್ಲ, ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ. ತೀರ ವಿಳಂಬ ಮಾಡದೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

ಕಾಂಗ್ರೆಸ್‌ ಗ್ಯಾರಂಟಿ ಜಾರಿ ಬಗ್ಗೆ ಕುಮಾರಸ್ವಾಮಿ ತರಾಟೆ: ಕಾಂಗ್ರೆಸ್‌ಗೆ 135 ಸೀಟು ಕೊಟ್ಟ ಜನತೆಯ 'ಗ್ಯಾರಂಟಿ ಬೇಡಿಕೆ'ಯಲ್ಲಿ ನ್ಯಾಯವಿದೆ. 5 ಗ್ಯಾರಂಟಿ ಜಾರಿ ಮಾಡುವುದು ಕಾಂಗ್ರೆಸ್‌ ಸರ್ಕಾರದ ಜವಾಬ್ದಾರಿಯಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರೇ ಸಹಿ ಮಾಡಿಕೊಟ್ಟ ಕಾರ್ಡುಗಳು ಜನರ ಬಳಿ ಇವೆ. ಆ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ? ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರವನ್ನ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಸರ್ಕಾರಿ ನೌಕರರು ಆಯ್ತು, ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಕಾಂಗ್ರೆಸ್‌ ಸರ್ಕಾರ: ಅಮೃತ ಮಳಿಗೆ ಆರಂಭ

ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ: ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಅವರ ಅಕ್ಕಪಕ್ಕದವರ ಹೇಳಿಕೆಗಳನ್ನು ಜನರು ನಂಬುತ್ತಿಲ್ಲ. ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಹೇಳಲಿ, ಜನರಲ್ಲಿ ವಿಶ್ವಾಸ ಮೂಡಿಸಲಿ ಅಂತ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆಯೂ ಮೇರೆ ಮೀರುತ್ತದೆ, ಆಕ್ರೋಶವೂ ಹೆಚ್ಚುತ್ತಿದೆ. ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ಇವರೇ. ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ. ಗ್ಯಾರಂಟಿಗಳ ಬಗ್ಗೆ ಮಾಧ್ಯಮಗಳಲ್ಲಿ ಅಬ್ಬರಿಸಿದ ಇವರೇ, ಈಗ ಮೀನಾಮೇಷ ಎಂದರೆ ಜನ ಒಪ್ಪುವರೇ? ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ. 

click me!