
ದಕ್ಷಿಣ ಕನ್ನಡ (ಸೆ.14): ಧರ್ಮಸ್ಥಳದ ಬಳಿಯ ಪಾಂಗಳದ ಸೌಜನ್ಯಾಳನ್ನು ಆಕೆಯ ಮಾವ ವಿಠಲಗೌಡನೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ದೂರು ಕೊಟ್ಟಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧವೇ ಇದೀಗ ಸೌಜನ್ಯ ಪರ ಹೋರಾಟಗಾರರಾದ ವೆಂಕಪ್ಪ ಕೋಟ್ಯಾನ್ ಎಸ್‌ಪಿ ಹಾಗೂ ಸಿಎಂಗೆ ದೂರು ಕೊಡಲು ಮುಂದಾಗಿದ್ದಾರೆ.
ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲಾಗಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಹಾಗೂ ಸೌಜನ್ಯ ಪರ ಹೋರಾಟಗಾರರಾದ ವೆಂಕಪ್ಪ ಕೋಟ್ಯಾನ್ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ. ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ವೆಂಕಪ್ಪ ಕೋಟ್ಯಾನ್ ಅವರು, ಸ್ನೇಹಮಯಿ ಕೃಷ್ಣ ಅವರನ್ನು ಬೆಳ್ತಂಗಡಿಗೆ ಕರೆಸಿದ್ದು ಯಾರು ಎಂದು ಪ್ರಶ್ನಿಸಿದರು. 'ಸೌಜನ್ಯ ಹತ್ಯೆ ಮತ್ತು ಹೋರಾಟದ ಸಂದರ್ಭದಲ್ಲಿ ಅವರು ಬೆಳ್ತಂಗಡಿಯಲ್ಲಿ ಇರಬೇಕಿತ್ತಲ್ಲ? ನಮಗೆ ಕಳೆದ 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಈಗ ಬಂದು ಅವರು ಏಕೆ ಹೇಳಿಕೆ ನೀಡುತ್ತಿದ್ದಾರೆ?' ಎಂದು ವೆಂಕಪ್ಪ ಕೋಟ್ಯಾನ್ ಪ್ರಶ್ನಿಸಿದರು.
ಸ್ನೇಹಮಯಿ ಕೃಷ್ಣ ಅವರಿಗೆ ಈ ವಿಚಾರಗಳನ್ನು ಯಾರು ಹೇಳಿದ್ದಾರೆ, ಯಾರು ಇದನ್ನು ಬರೆಯಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು. ಪೊಲೀಸರು ತಮ್ಮ ದೂರಿನ ಕುರಿತು ಎಫ್‌ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ ಎಂದು ಕೋಟ್ಯಾನ್ ತಿಳಿಸಿದ್ದಾರೆ. ಸ್ನೇಹಮಯಿ ಕೃಷ್ಣ ಅವರ ಹಿಂದೆ ದೊಡ್ಡ ಕೈಗಳು ಇರಬಹುದು, ಹಿಂದಿನ ಇನ್‌ಸ್ಪೆಕ್ಟರ್ ಹಾಗೂ ಯೋಗೀಶ್ ಎಂಬುವವರು ಇದನ್ನು ಮಾಡಿಸಿರಬಹುದು ಎಂದು ಅವರು ಆರೋಪಿಸಿದ್ದಾರೆ. ಒಂದು ವೇಳೆ ಸ್ನೇಹಮಯಿ ಕೃಷ್ಣ ಅವರ ಬಳಿ ಸಾಕ್ಷ್ಯಗಳಿದ್ದರೆ, ಸೌಜನ್ಯಗೆ ಈ ಹಿಂದೆಯೇ ನ್ಯಾಯ ಸಿಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧ ತನಿಖೆ ಹಾಗೂ ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೂ ದೂರು ನೀಡುತ್ತೇನೆ ಎಂದು ವೆಂಕಪ್ಪ ಕೋಟ್ಯಾನ್ ಒತ್ತಾಯಿಸಿದ್ದಾರೆ.
2012ರಲ್ಲಿ ಕೊಲೆಯಾದ ಸೌಜನ್ಯಳನ್ನು ಆಕೆಯ ಮಾವ ವಿಠಲ ಗೌಡ ಕೊಲೆ ಮಾಡಿದ್ದಾನೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡುವ ಮೂಲಕ ಸೌಜನ್ಯಳಿಗೆ ನ್ಯಾಯ ಒದಗಿಸುವ ಹೋರಾಟದ ದಾರಿ ತಪ್ಪಿಸುವ ದುರುದ್ದೇಶವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೇ ಸ್ನೇಹಮಯಿ ಕೃಷ್ಣನನ್ನು ಮೈಸೂರಿನಿಂದ ಕರೆಯಿಸಿ ಈ ರೀತಿ ಹೇಳಿಕೆ ನೀಡಿರುವುದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಸ್ನೇಹಮಯಿ ಕೃಷ್ಣ ಅವರನ್ನು ವಿಚಾರಣೆ ನಡೆಸುವಂತೆ ದೂರು ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ