ಗೂಂಡಾಕಾಯ್ದೆಯಡಿ ಬಂಧನದ ಗರಿಷ್ಠ ಅವಧಿ 1 ವರ್ಷ: ಹೈಕೋರ್ಟ್ ಮಹತ್ವದ ತೀರ್ಪು! ಏನಿದು ಪ್ರಕರಣ?

Kannadaprabha News, Ravi Janekal |   | Kannada Prabha
Published : Sep 14, 2025, 02:12 PM IST
karnataka highcourt

ಸಾರಾಂಶ

ಗೂಂಡಾ ಕಾಯ್ದೆಯಡಿ ಬಂಧನದ ಅವಧಿ ನಿಗದಿಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಬಂಧನದ ಅವಧಿ ಗರಿಷ್ಠ 12 ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಕಲಬುರಗಿಯ ರುಸ್ತುಂ ಅಹ್ಮದ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು

  • ವೆಂಕಟೇಶ್ ಕಲಿಪಿ

ಬೆಂಗಳೂರು (ಸೆ.14) : ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡು ಸಮಾಜದ ಶಾಂತಿ-ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್‌ ಇಲಾಖೆ ಹೊರಡಿಸಿದ ಆದೇಶ ದೃಢೀಕರಿಸಿದ ರಾಜ್ಯ ಸರ್ಕಾರದ ಆದೇಶದಲ್ಲಿ ಬಂಧನದ ಅವಧಿಯನ್ನು ನಿರ್ದಿಷ್ಟವಾಗಿ ಹೇಳುವ ಅಗತ್ಯವಿಲ್ಲ. ಅವಧಿಯನ್ನು ನಿರ್ದಿಷ್ಟವಾಗಿ ಹೇಳದಿದ್ದರೆ ಬಂಧನದ ಅವಧಿ ಗರಿಷ್ಠ 12 ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕಲಬುರಗಿಯ ಮೊಹಮ್ಮದ್‌ ಚೌಕ್‌ ನಿವಾಸಿ ರುಸ್ತುಂ ಅಹ್ಮದ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಹೊರಡಿಸಿರುವ ಆದೇಶ ರದ್ದುಪಡಿಸಲು ಕೋರಿ ಆತನ ಪತ್ನಿ ಶಾಜಿಯಾ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಏಕಕಾಲದಲ್ಲಿ ಒಂದು ವರ್ಷ ಕಾಲದ ಅವಧಿಗೆ ಬಂಧನದಲ್ಲಿಡಲು ಗೂಂಡಾ ಕಾಯ್ದೆಯಡಿ ಆದೇಶ ಮಾಡಲು ಸಾಧ್ಯವಿಲ್ಲ. ಕಾಯ್ದೆಯ ಸೆಕ್ಷನ್‌ 3(2) ಪ್ರಕಾರ ಬಂಧನ ಪ್ರಾಧಿಕಾರವು ಮೂರು ತಿಂಗಳ ಅವಧಿಗೆ ಸೀಮಿತವಾಗಿ ಮೊದಲಿಗೆ ಬಂಧನದ ಆದೇಶ ಹೊರಡಿಸಬೇಕು. ಮೂರು ತಿಂಗಳ ಅವಧಿ ಮುಗಿದ ನಂತರ ಹೊಸದಾಗಿ ಬಂಧನ ಆದೇಶ ಹೊರಡಿಸಬೇಕು. ಈ ಪ್ರಕ್ರಿಯೆ ಪಾಲಿಸುವುದು ಕಡ್ಡಾಯ. ಇಲ್ಲವಾದರೆ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಲಿದೆ. 12 ತಿಂಗಳವರೆಗೆ ರುಸ್ತುಂ ಅಹ್ಮದ್‌ ವಿರುದ್ಧ ಬಂಧನ ಆದೇಶ ಹೊರಡಿಸಲಾಗಿದೆ. ಇದು ಸಂವಿಧಾನದ ಪರಿಚ್ಛೇದ 22(5)ರ ಉಲ್ಲಂಘನೆ. ಆದ್ದರಿಂದ ಬಂಧನ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.

ಈ ವಾದ ತಿರಸ್ಕರಿಸಿರುವ ನ್ಯಾಯಪೀಠ, ಸಂವಿಧಾನದ ಪರಿಚ್ಛೇದ 22(4)(ಎ) ಗಮನಿಸಿದರೆ ರಾಜ್ಯ ಸರ್ಕಾರ ಗೂಂಡಾ ಕಾಯ್ದೆಯಡಿಯ ಬಂಧನವನ್ನು ಅನುಮೋದಿಸಿ ಹೊರಡಿಸುವ ಆದೇಶದಲ್ಲಿ ಬಂಧನದ ಅವಧಿಯನ್ನು ನಿರ್ದಿಷ್ಟವಾಗಿ ಹೇಳುವ ಅಗತ್ಯವಿಲ್ಲ. ಬಂಧನವನ್ನು ಅನುಮೋದಿಸಿದಾಗ ಆದೇಶದಲ್ಲಿ ಯಾವುದೇ ಅವಧಿಯನ್ನು ನಿರ್ದಿಷ್ಟವಾಗಿ ಹೇಳದಿದ್ದರೆ, ಆಗ ಬಂಧನವು ಬಂಧನದ ದಿನಾಂಕದಿಂದ ಗರಿಷ್ಠ 12 ತಿಂಗಳ ಅವಧಿಯವರೆಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಮೂರು ತಿಂಗಳ ಅವಧಿಯು ಸಲಹಾ ಮಂಡಳಿಯ ಮುಂದೆ ಪ್ರಕರಣವನ್ನು ಪರಿಗಣಿಸುವುದಕ್ಕೆ ಸಂಬಂಧಿಸಿದೆ. ಸಂವಿಧಾನದ ಪರಿಚ್ಛೇದ 22(4)(ಎ) ಪ್ರಕಾರ ಸಲಹಾ ಸಮಿತಿ ತನ್ನ ಅಭಿಪ್ರಾಯವನ್ನು ಬಂಧನ ಆದೇಶ ಹೊರಡಿಸಿದ ದಿನದಿಂದ ಮೂರು ತಿಂಗಳಲ್ಲಿ ನೀಡಬೇಕಿರುತ್ತದೆ. ಮಂಡಳಿಯ ಅಭಿಪ್ರಾಯ ಆಧರಿಸಿ ಸರ್ಕಾರ ಗೂಂಡಾ ಕಾಯ್ದೆಯ ಸೆಕ್ಷನ್‌ 12 ಅಡಿ ಬಂಧನ ಆದೇಶ ದೃಢೀಕರಿಸಬಹುದು. ಇಲ್ಲವೇ ಸೆಕ್ಷನ್‌ 13ರಲ್ಲಿ ಹೇಳಿರುವಂತೆ ಗರಿಷ್ಠ 12 ತಿಂಗಳವರಗೆ ಬಂಧನದ ಅವಧಿಯನ್ನು ಮುಂದುವರಿಸಬಹುದು ಅಥವಾ ಕೂಡಲೇ ಬಂಧಿತನನ್ನು ಬಿಡುಗಡೆ ಮಾಡಲು ಆದೇಶಿಸಬಹುದು. ಆಯಾ ಸಂದರ್ಭಕ್ಕೆ ಅನುಸಾರ ತೀರ್ಮಾನ ಕೈಗೊಳ್ಳಬಹುದಾಗಿದೆ ಎಂದು ಪೀಠ ಹೇಳಿದೆ.

ಈ ಪ್ರಕರಣದಲ್ಲಿ ಅರ್ಜಿದಾರನ 2010ರಿಂದ ವಿವಿಧ ಪೊಲೀಸ್‌ ಠಾಣೆಯಲ್ಲಿ 23 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. 2025ರ ಮಾ.20ರಂದು ಬಂಧನ ಆದೇಶ ಹೊರಡಿಸುವ ಮುನ್ನ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 400 ಪುಟಗಳ ದಾಖಲೆಗಳನ್ನು ಬಂಧಿತನಿಗೆ ಸರ್ಕಾರ/ಪೊಲೀಸ್‌ ಇಲಾಖೆ ಒದಗಿಸಿದೆ. ಬಂಧನ ಆದೇಶ ಹೊರಡಿಸಿರುವುದಕ್ಕೆ ಸಾಕಷ್ಟು ಸಕಾರಣಗಳಿದ್ದು, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?:

ರುಸ್ತುಂ ಅಹ್ಮದ್‌ನನ್ನು ಗೂಂಡಾ ಕಾಯ್ದೆಯಡಿ ಮುಚ್ಚರಿಕೆ ಕ್ರಮವಾಗಿ ಬಂಧಿಸಲು ಕಲಬುರಗಿ ನಗರ ಪೊಲೀಸ್‌ ಆಯುಕ್ತರು (ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌) 2025ರ ಮಾ.20ರಂದು ಆದೇಶಿಸಿದ್ದರು. ಈ ಆದೇಶ ಅನುಮೋದಿಸಿ ರಾಜ್ಯ ಆಂತರಿಕ ಆಡಳಿತ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆ ಪ್ರಧಾನ ಕಾರ್ಯದರ್ಶಿ 2025ರ ಏ.29ರಂದು ಅನುಮೋದಿಸಿದ್ದರು. ವಿವಿಧ ಅಂಶಗಳನ್ನು ಆಧರಿಸಿ ಈ ಆದೇಶ ರದ್ದು ಕೋರಿ ರುಸ್ತುಂ ಅಹ್ಮದ್‌ ಪತ್ನಿ ಶಾಜಿಯಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!