
ದಕ್ಷಿಣ ಕನ್ನಡ (ಸೆ.25): ದೇಶಾದ್ಯಂತ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಮತ್ತೊಂದು ಅಸ್ಥಿಪಂಜರಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಅಸ್ಥಿಪಂಜರ ಶೋಧದ ವೇಳೆ ದೊರೆತ ಚಾಲನ ಪರವಾನಿಗೆ (Driving License) ಆಧಾರದ ಮೇಲೆ ಎಸ್‌ಐಟಿ (SIT) ಅಧಿಕಾರಿಗಳು ತುಮಕೂರು ಜಿಲ್ಲೆಯ ಕುಟುಂಬವೊಂದಕ್ಕೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ.
ಈ ಅಸ್ಥಿಪಂಜರವು ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂಬ ಯುವಕನದ್ದಾಗಿರಬಹುದು ಎಂದು ಶಂಕಿಸಲಾಗಿದೆ.
ನಾಪತ್ತೆಯಾಗಿದ್ದ ಯುವಕನಿಗೆ ಡಿಎಲ್ ಸುಳಿವು:
ನಾಪತ್ತೆ ವಿವರ: ಆದಿಶೇಷ ನಾರಾಯಣ ಎಂಬ ಈ ಯುವಕ 2013ರ ಅಕ್ಟೋಬರ್ 2 ರಿಂದ ಏಕಾಏಕಿ ನಾಪತ್ತೆಯಾಗಿದ್ದನು. ಈತ ಬೆಂಗಳೂರಿನ ಬಾರ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕುಟುಂಬಸ್ಥರ ನಿರ್ಲಕ್ಷ್ಯ: ಅಚ್ಚರಿಯೆಂದರೆ, ಆದಿಶೇಷ ನಾಪತ್ತೆಯಾದ ಸಂಬಂಧ ಆತನ ಕುಟುಂಬಸ್ಥರು ಈವರೆಗೂ ಯಾವುದೇ ಪೊಲೀಸ್ ದೂರು ಅಥವಾ ನಾಪತ್ತೆ ಪ್ರಕರಣವನ್ನು ದಾಖಲಿಸಿರಲಿಲ್ಲ.
ಡಿಎಲ್ ಪತ್ತೆ: ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ಥಿಪಂಜರದೊಂದಿಗೆ ದೊರೆತ ಚಾಲನ ಪರವಾನಿಗೆಯಲ್ಲಿ ಆದಿಶೇಷ ನಾರಾಯಣನ ಹೆಸರು ಇರುವುದು ಪೊಲೀಸರಿಗೆ ಪ್ರಮುಖ ಸುಳುವಾಗಿದೆ.
ಚಾಲನ ಪರವಾನಿಗೆಯ ಮಾಹಿತಿ ಆಧರಿಸಿ ಎಸ್‌ಐಟಿ ಅಧಿಕಾರಿಗಳು ಆದಿಶೇಷ ನಾರಾಯಣನ ಕುಟುಂಬಸ್ಥರಿಗೆ ಬೆಳ್ತಂಗಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ, ಆದಿಶೇಷನ ಅಕ್ಕಂದಿರಾದ ಲಕ್ಷ್ಮಿ, ಪದ್ಮ ಹಾಗೂ ಆತನ ಭಾವ ಶಿವಕುಮಾರ್ ಅವರು ವಿಚಾರಣೆಗೆ ಆಗಮಿಸಿದ್ದಾರೆ. ಕುಟುಂಬಸ್ಥರು, ಆದಿಶೇಷ ನಾರಾಯಣ ನಾಪತ್ತೆಯಾದ ನಂತರ ನಾವು ಹುಡುಕಲಿಲ್ಲ. ಅವನು ಮಾನಸಿಕವಾಗಿ ಚೆನ್ನಾಗಿದ್ದ' ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ.
ಸದ್ಯಕ್ಕೆ ನಾಪತ್ತೆಯಾದ ಯುವಕ ಆದಿಶೇಷ ನಾರಾಯಣ ಮತ್ತು ಪತ್ತೆಯಾದ ಅಸ್ಥಿಪಂಜರದ ನಡುವೆ ಸಂಬಂಧವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಸ್‌ಐಟಿ ಅಧಿಕಾರಿಗಳು ಕುಟುಂಬಸ್ಥರಿಗೆ ಡಿಎನ್‌ಎ ಪರೀಕ್ಷೆಗಾಗಿ ಮತ್ತೊಮ್ಮೆ ಕಚೇರಿಗೆ ಬರಲು ಸೂಚಿಸಿದ್ದಾರೆ. ಡಿಎನ್‌ಎ ವರದಿ ಬಂದ ನಂತರವೇ ಅಸ್ಥಿಪಂಜರವು ನಾಪತ್ತೆಯಾದ ಯುವಕನದ್ದೇ ಅಥವಾ ಬೇರೆಯವರದ್ದೇ ಎಂಬುದು ಸ್ಪಷ್ಟವಾಗಲಿದೆ. ಈ ಅಸ್ಥಿಪಂಜರ ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ತಿರುವನ್ನು ನೀಡುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುವುದಕ್ಕೆ ನಿಯೋಜನೆ ಮಾಡಿದ ಎಸ್‌ಐಟಿ ತಂಡದ ಅಧಿಕಾರಿಗಳು, ಚಿನ್ನಯ್ಯ ತೋರಿಸಿದ ಜಾಗವನ್ನು ಅಗೆದು ಹಾಕಿದ ನಂತರ ಅಲ್ಲಿ ಮೂಳೆಗಳು ಸಿಗದ ಹಿನ್ನೆಲೆಯಲ್ಲಿ ಭೂಮಿ ಅಗೆಯುವುದನ್ನು ಕೈಬಿಟ್ಟಿತ್ತು. ಈ ಪ್ರಕರಣದಲ್ಲಿ ಆರಂಭದಲ್ಲಿ ಬುರುಡೆ ತಂದುಕೊಟ್ಟ ಪ್ರಕರಣದಲ್ಲಿ ಸಿಲುಕಿದ ಧರ್ಮಸ್ಥಳದಲ್ಲಿ ಕೊಲೆಯಾಗಿದ್ದ ಯುವತಿ ಸೌಜನ್ಯಾಳ ಮಾವ ಜಯಂತ್ ಭಾಗಿಯಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿಚಾರಣೆ ಮಾಡಿದಾಗ ಬಂಗ್ಲೆಗುಡ್ಡ ಕಾಡಿನಲ್ಲಿ ಶವಗಳಿದ್ದು, ನಾನು ತೋರಿಸುತ್ತೇನೆ ಎಂದು ಹೇಳಿದ ನಂತರವೂ ಎಸ್ಐಟಿ ಶೋಧ ಮುಂದುವರೆಸಿತು. ಆಗ ಬಂಗ್ಲೆಗುಡ್ಡ ಕಾಡಿನಲ್ಲಿ ಭೂ ಮೇಲ್ಮೈ ಮೇಲೆ ಶೋಧ ಮಾಡಿದಾಗ 7 ಬುರುಡೆ ಮತ್ತು ನೂರಾರು ಮೂಳೆಗಳು ಲಭ್ಯವಾಗಿದ್ದವು. ಈ ಮೂಳೆಗಳನ್ನು ಎಫ್‌ಎಸ್‌ಎಲ್ ವರದಿಗೆ ಕಳಿಸಲಾಗಿದೆ.
ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆ ವಿಚಾರದ ಬಗ್ಗೆ ನಾಪತ್ತೆಯಾದ ಯುವಕ ಆದಿಶೇಷನ ಸಹೋದರಿಯರಾದ ಲಕ್ಷ್ಮೀ, ಪದ್ಮ ಹಾಗೂ ಬಾವಾ ಶಿವಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ. ನಮ್ಮ ಸಹೋದರ ಆದಿಶೇಷ ನಾರಾಯಣ 2013 ಅಕ್ಟೋಬರ್ 2 ರಿಂದ ನಾಪತ್ತೆಯಾಗಿದ್ದ. ಬೆಂಗಳೂರಿನ ಬಾರ್‌ನಲ್ಲಿ ಕ್ಯಾಶಿಯಾರ್ ಆಗಿ ಕೆಲಸ ಮಾಡುತಿದ್ದವನು ಏಕಾಏಕಿ ನಾಪತ್ತೆಯಾಗಿದ್ದ. ಮನೆಯಲ್ಲಿ ತಂದೆ ದುಡಿಯಬೇಕು ಅಂತಾ ಜೋರು ಮಾಡುತ್ತಿದ್ದರು. ಅದಕ್ಕೆ ಆಗಾಗ ಮನೆ ಬಿಟ್ಟು ಹೋಗುತ್ತಿದ್ದ. ಆದ್ದರಿಂದ ಅವನು ನಾಪತ್ತೆಯಾಗಿದ್ದ ವೇಳೆಯೂ ನಮ್ಮ ತಂದೆ ನಾಪತ್ತೆ ದೂರನ್ನು ಪೊಲೀಸರಿಗೆ ನೀಡಿರಲಿಲ್ಲ. ಡಿಎನ್ಎ ಟೆಸ್ಟ್‌ಗಾಗಿ ಮತ್ತೆ ಬರಲು ಎಸ್‌ಐಟಿ ಹೇಳಿದ್ದಾರೆ.
ನಮ್ಮ ತಮ್ಮನನ್ನು ನಾವು ಆಗ ಹುಡುಕಲಿಲ್ಲ, ಮಾನಸಿಕವಾಗಿ ಚೆನ್ನಾಗಿದ್ದ. ನಾವು ಧರ್ಮಸ್ಥಳಕ್ಕೆ ಬರುತ್ತಿರಲಿಲ್ಲ. ಆದರೆ ಅವನು ಧರ್ಮಸ್ಥಳಕ್ಕೆ ಬರುತ್ತಿದ್ದನು. ಆಗ ಆತನಿಗೆ ಮದುವೆ ಆಗಿರಲಿಲ್ಲ, ಆಮೇಲೆ ಏನಾಗಿತ್ತು ಗೊತ್ತಿಲ್ಲ. ಆತ್ಮಹ*ತ್ಯೆ ಮಾಡಿಕೊಳ್ಳೋ ಮನಸ್ಥಿತಿ ಇರಲಿಲ್ಲ, ಸ್ನೇಹಿತರು ಕೂಡ ಏನಾದರೂ ಮಾಡಿರಬಹುದು. ಸಾವು ಹೇಗೆ ಆಗಿದೆ ಅನ್ನೋ ಬಗ್ಗೆ ಸರಿಯಾಗಿ ಗೊತ್ತಾಗ್ತಾ ಇಲ್ಲ. ಒಮ್ಮೊಮ್ಮೆ ಎರಡು ಮೂರು ವರ್ಷ ಮನೆ ಬಿಟ್ಟು ಹೋದದ್ದೂ ಇದೆ. ಹೀಗಾಗಿ ಬರ್ತಾನೆ ಅಂತ ನಾವು ದೂರು ಕೊಡೋ ಕೆಲಸ ಮಾಡಿಲ್ಲ. ಇಬ್ಬರು ಅಕ್ಕಂದಿರು ಹಾಗೂ ಅವನೊಬ್ವನೇ ಗಂಡು ಮಗ. ಗುಬ್ಬಿ ಪೊಲೀಸರು ನಮ್ಮನ್ನ ಸಂಪರ್ಕಿಸಿ ಮಾಹಿತಿ ನೀಡಿದ್ದರು. ಎಸ್ಐಟಿಯವರು ಡಿಎಲ್ ಆಧಾರದಲ್ಲಿ ಪೊಲೀಸರ ಮೂಲಕ ಸಂಪರ್ಕಿಸಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ