ರಾಜ್ಯ ಸರ್ಕಾರದ ಜಾತಿಗಣತಿಗಿಲ್ಲ ಭೀತಿ; ಕಠಿಣ ಷರತ್ತು ವಿಧಿಸಿ ಸಮೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!

Published : Sep 25, 2025, 05:04 PM ISTUpdated : Sep 25, 2025, 05:09 PM IST
Karnataka Caste Census

ಸಾರಾಂಶ

ರಾಜ್ಯ ಸರ್ಕಾರದ ಜಾತಿ ಗಣತಿಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಸಮೀಕ್ಷೆ ಮುಂದುವರಿಸಲು ಅನುಮತಿ ನೀಡಿದೆ. ಆದರೆ, ದತ್ತಾಂಶದ ಗೌಪ್ಯತೆ ಕಾಪಾಡುವುದು ಮತ್ತು ಜನರಿಂದ ಸ್ವಯಂಪ್ರೇರಿತವಾಗಿ ಮಾತ್ರ ಮಾಹಿತಿ ಪಡೆಯುವುದು ಸೇರಿದಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಠಿಣ ಷರತ್ತುಗಳನ್ನು ವಿಧಿಸಿದೆ.

ಬೆಂಗಳೂರು (ಸೆ.25): ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ (ಜಾತಿ ಗಣತಿ) ತಡೆ ನೀಡಲು ಹೈಕೋರ್ಟ್‌ನ ವಿಭಾಗೀಯ ಪೀಠವು ನಿರಾಕರಿಸಿ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಸಮೀಕ್ಷೆ ಮುಂದುವರಿಸಲು ಅವಕಾಶ ನೀಡಿದ ಕೋರ್ಟ್, ದತ್ತಾಂಶ ಸಂಗ್ರಹ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ 'ಕೆಲವು ಕಠಿಣ ಷರತ್ತುಗಳನ್ನು' ವಿಧಿಸಿದೆ.

ಜಾತಿ ಗಣತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್‌ (PIL) ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು.

ಹೈಕೋರ್ಟ್ ವಿಧಿಸಿದ ಪ್ರಮುಖ ಷರತ್ತುಗಳು

ದತ್ತಾಂಶದ ಗೌಪ್ಯತೆ ಮತ್ತು ಖಾಸಗಿತನದ ಹಕ್ಕಿನ ರಕ್ಷಣೆ ಕುರಿತು ಅರ್ಜಿದಾರರು ವ್ಯಕ್ತಪಡಿಸಿದ ಕಳವಳವನ್ನು ಪರಿಗಣಿಸಿದ ಹೈಕೋರ್ಟ್, ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿತು:

  • 1. ಬಹಿರಂಗಪಡಿಸಬಾರದು: ಸಂಗ್ರಹಿಸಿದ ದತ್ತಾಂಶವನ್ನು ಆಯೋಗ ಅಥವಾ ಸರ್ಕಾರ ಸೇರಿದಂತೆ ಯಾರಿಗೂ ಬಹಿರಂಗಪಡಿಸಬಾರದು.
  • 2. ಗೌಪ್ಯತೆ ರಕ್ಷಣೆ: ದತ್ತಾಂಶದ ಗೌಪ್ಯತೆಯನ್ನು ಆಯೋಗವು ಕಟ್ಟುನಿಟ್ಟಾಗಿ ರಕ್ಷಿಸಬೇಕು.
  • 3. ಸ್ವಯಂಪ್ರೇರಿತ ಮಾಹಿತಿ: ಜನರು ಸ್ವಯಂಪ್ರೇರಣೆಯಿಂದ ನೀಡಿದರೆ ಮಾತ್ರ ಮಾಹಿತಿ ಪಡೆಯಬೇಕು.
  • 4. ಜಾಗೃತಿ ಕಡ್ಡಾಯ: ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಮತ್ತು ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು.

ಆಯೋಗದ ಪರ ವಾದ (ಪ್ರೊ. ರವಿವರ್ಮಕುಮಾರ್):

ಹಿಂದುಳಿದ ವರ್ಗಗಳ ಆಯೋಗದ ಪರ ವಾದ ಮಂಡಿಸಿದ ಪ್ರೊ. ರವಿವರ್ಮಕುಮಾರ್ ಅವರು, ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ಸಮೀಕ್ಷೆಯ ಮಹತ್ವವನ್ನು ವಿವರಿಸಿದರು. ಹೈಕೋರ್ಟ್ ಕಳವಳದ ಹಿನ್ನೆಲೆಯಲ್ಲಿ ಸಮೀಕ್ಷೆಯ ವಿಧಾನವನ್ನು ಮರುಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ಅರ್ಜಿದಾರರ ಪ್ರಮುಖ ಆಕ್ಷೇಪಗಳು:

ಖಾಸಗಿತನದ ಹಕ್ಕಿಗೆ ಧಕ್ಕೆ: ಈ ಸಮೀಕ್ಷೆಯಲ್ಲಿ ಹಣ, ಆಸ್ತಿ, ಜಾತಿ ಸೇರಿದಂತೆ ಆಧಾರ್‌ಗಿಂತಲೂ ಹೆಚ್ಚಿನ ಅಗಾಧ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆದರೆ, ಈ ದತ್ತಾಂಶಕ್ಕೆ ಆಧಾರ್ ಕಾಯ್ದೆಗಿರುವ ರಕ್ಷಣೆ ಇಲ್ಲ. ಖಾಸಗಿತನದ ಹಕ್ಕಿನ ರಕ್ಷಣೆಯ ಪ್ರಶ್ನೆ ಇಲ್ಲಿ ಮುಖ್ಯ ಎಂದು ವಿವೇಕ್ ರೆಡ್ಡಿ ವಾದಿಸಿದರು.

ವಂಚನೆಯ ಆರೋಪ: ಆಯೋಗದ ಕೈಪಿಡಿಯಲ್ಲಿ ಮೊಬೈಲ್ ಸಂಖ್ಯೆ ನೀಡುವುದು ಕಡ್ಡಾಯವೆಂದು ಮತ್ತು ಸಮೀಕ್ಷೆಯನ್ನು 'ಗಣತಿ' ಎಂದು ಉಲ್ಲೇಖಿಸಲಾಗಿದೆ. ಸರ್ಕಾರವು ಮಾಹಿತಿ ನೀಡುವವರಿಗೆ ವಂಚಿಸುತ್ತಿದೆ ಎಂದು ವಿವೇಕ್ ರೆಡ್ಡಿ ಆರೋಪಿಸಿದರು.

ದತ್ತಾಂಶ ರಕ್ಷಣೆ ಇಲ್ಲ: ಸಂಗ್ರಹಿಸಿದ ದತ್ತಾಂಶ ಎಲ್ಲಿರುತ್ತದೆ, ಹ್ಯಾಕಿಂಗ್‌ನಿಂದ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ. ಐಟಿ ಕಾಯ್ದೆಯಡಿ ಸೂಕ್ಷ್ಮ ದತ್ತಾಂಶ ರಕ್ಷಣೆಗೆ ನೀತಿ ರೂಪಿಸಿಲ್ಲ ಎಂದು ಅಶೋಕ್ ಹಾರನಹಳ್ಳಿ ವಾದಿಸಿದರು.

ಜನಗಣತಿ ಪ್ರಯತ್ನ: ಕೇಂದ್ರ ಮತ್ತು ರಾಜ್ಯ ಸರ್ಕಾರ ಪರ್ಯಾಯವಾಗಿ ಗಣತಿ ಮಾಡುವಂತಿಲ್ಲ. ಸಮೀಕ್ಷೆಯ ಹೆಸರಿನಲ್ಲಿ ಪ್ರಾಯೋಗಿಕವಾಗಿ ಜನಗಣತಿ ಮಾಡಲಾಗುತ್ತಿದೆ ಎಂದು ಪ್ರಭುಲಿಂಗ ನಾವದಗಿ ವಾದಿಸಿದರು.

ಹೈಕೋರ್ಟ್ ಪ್ರತಿಕ್ರಿಯೆ:

ಆಧಾರ್ ವಿಚಾರದಲ್ಲಿ, 'ಆಧಾರ್‌ನಲ್ಲಿರುವ ದತ್ತಾಂಶ ಪಡೆಯುತ್ತಿಲ್ಲ, ಕೇವಲ ಗುರುತಿಗಷ್ಟೇ ಆಧಾರ್ ನಂಬರ್ ಪಡೆಯಲಾಗುತ್ತಿದೆ' ಎಂದು ಸರ್ಕಾರ ಹೇಳಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

ಸದ್ಯ, ಜಾತಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿದರೂ, ದತ್ತಾಂಶದ ಗೌಪ್ಯತೆ ಮತ್ತು ಸ್ವಯಂಪ್ರೇರಿತ ಮಾಹಿತಿ ನೀಡುವಿಕೆಯ ಕುರಿತು ವಿಧಿಸಿರುವ ಷರತ್ತುಗಳು ಆಯೋಗಕ್ಕೆ ಮಹತ್ವದ್ದಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ