
ಬೆಂಗಳೂರು (ಆ.14) : ಕೊಪ್ಪಳದ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣವನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ವಹಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಿಯೋಗವು ರಾಜ್ಯಪಾಲರಿಗೆ ಮನವಿ ನೀಡಿದೆ.
ಬುಧವಾರ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ತೆರಳಿದ ಶಾಸಕರು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮೃತ ಗವಿಸಿದ್ದಪ್ಪ ನಾಯಕ ಅವರ ಕುಟುಂಬದ ಸದಸ್ಯರೂ ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಮಾಜಿ ಸಚಿವ ಶ್ರೀರಾಮುಲು, ರಾಜು ಗೌಡ, ಶಿವನಗೌಡ ನಾಯಕ, ಜನಾರ್ದನ ರೆಡ್ಡಿ ಅವರು ಸಂತ್ರಸ್ತನ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಇಂಥ ಕೊಲೆಗಡುಕರಿಗೆ ಈ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಪರೀತ ವಿಶ್ವಾಸ ಇದೆ. ಇದರಿಂದ ಮಂಗಳೂರು ಸೇರಿ ವಿವಿಧೆಡೆ ಸರಣಿ ಕೊಲೆಗಳು ನಡೆಯುತ್ತಿವೆ ಎಂದು ಟೀಕಿಸಿದರು.
ಮೃತರು ಬಿಜೆಪಿ ಇರಲಿ, ಕಾಂಗ್ರೆಸ್ ಅಥವಾ ಜೆಡಿಎಸ್ ಕಾರ್ಯಕರ್ತನೇ ಇರಲಿ. ಬೇರೆ ಪಕ್ಷದಲ್ಲಿ ಹಿಂದೂ ಕಾರ್ಯಕರ್ತ ಇರಬಾರದು ಎಂದೇನಿಲ್ಲ. ಇದು ಬಹಳ ಗಂಭೀರವಾದ ವಿಚಾರ. ಇಡೀ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಸುದ್ದಿಯಾಗಿದೆ. ಇದಕ್ಕಾಗಿ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಡ ಹೇರುವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳದ ಜನತೆ ಜಾತ್ಯತೀತವಾಗಿ ಎಲ್ಲರನ್ನೂ ಪ್ರೀತಿಸುವವರು. ಈ ಗ್ಯಾರಂಟಿ ಸರ್ಕಾರ ಬಂದ ಬಳಿಕ ಬಡವರ, ಹಿಂದೂಪರ ಕಾರ್ಯಕರ್ತರ ಪ್ರಾಣಕ್ಕೆ ಗ್ಯಾರಂಟಿ ಇಲ್ಲದ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹತ್ಯೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಗುಪ್ತಚರ ಇಲಾಖೆ ವಿಫಲತೆಗೆ ಮುಖ್ಯಮಂತ್ರಿಗಳೇ ಹೊಣೆಗಾರರು ಎಂದು ಹರಿಹಾಯ್ದರು.
ಹಿಂದೂಪರ ಕಾರ್ಯಕರ್ತರ ಹತ್ಯೆ ಆದಾಗ ಗೃಹ ಸಚಿವರು ‘ನನಗೆ ಗೊತ್ತಿಲ್ಲ; ನನಗೆ ಮಾಹಿತಿ ಇಲ್ಲ; ಇದು ಆಗಬಾರದಿತ್ತು’ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಈ ಸರ್ಕಾರ ನಮ್ಮ ಭಾಗದಲ್ಲಿ ದ್ವೇಷ ಬೆಳೆಸುವ ಕೆಲಸ ಮಾಡುತ್ತಿದೆ. ನೀವೆಲ್ಲ ಸೇರಿ ಇಡೀ ಕರ್ನಾಟಕದ ಎಲ್ಲ ಹಿಂದೂಪರ ಕಾರ್ಯಕರ್ತರನ್ನು ಕೊಲ್ಲುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ