
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಇದೀಗ ಒಂದು ಅತ್ಯಂತ ಪ್ರಮುಖ ಹಾಗೂ ಹಠಾತ್ ತಿರುವು ಸಿಕ್ಕಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ವ್ಯವಸ್ಥಿತವಾಗಿ ದೊಡ್ಡ ಮಟ್ಟದ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ 'ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿದ್ದ ಸಿ.ಎನ್. ಚಿನ್ನ (ಚಿನ್ನಯ್ಯ) ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಹಲವು ವಿಚಾರವನ್ನು ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ಅವರ ತಂಡದವರು ಬೃಹತ್ ಷಡ್ಯಂತ್ರ ರೂಪಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
"ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ರೂಪಿಸಲಾದ ಈ ಇಡೀ ಷಡ್ಯಂತ್ರದ ಒಟ್ಟು ಬಜೆಟ್ ಬರೋಬ್ಬರಿ ₹200 ಕೋಟಿ ಆಗಿತ್ತು. ಈ ಸಂಚಿನಲ್ಲಿ ನಾನು ಅವರಿಗೆ ಸಹಕರಿಸಿದರೆ ನನಗೆ ₹50 ಲಕ್ಷ ನೀಡುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ, ಪ್ರಕಾಶ್ ರಾಜ್ ಎಂಬುವವರು ನನ್ನೊಂದಿಗೆ ದೂರವಾಣಿ ಮೂಲಕ ತಮಿಳಿನಲ್ಲಿ ಮಾತನಾಡಿದ್ದರು. ಈ ಕೆಲಸ ಮುಗಿದರೆ ಒಂದು ದಿನ ನಿನ್ನನ್ನು ಬಂದು ಅಪ್ಪಿಕೊಳ್ಳುವುದಾಗಿ ಅವರು ಫೋನ್‌ನಲ್ಲಿ ಹೇಳಿದ್ದರು," ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಈ ಸ್ಫೋಟಕ ಮಾಹಿತಿಯು ಬಹಿರಂಗಗೊಳ್ಳುತ್ತಿದ್ದಂತೆಯೇ, ಪ್ರಕರಣದ ಆಯಾಮವೇ ಬದಲಾಗಿದ್ದು, ಇಡೀ ರಾಜ್ಯದ ಜನರ ಗಮನ ಸದ್ಯ ಹೈಕೋರ್ಟ್‌ನತ್ತ ನೆಟ್ಟಿದೆ. ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ 'ಪ್ರಕಾಶ್ ರಾಜ್' ಎಂಬ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಸುತ್ತ ಅನುಮಾನದ ಹುತ್ತ ಬೆಳೆಯಲಾರಂಭಿಸಿತು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆಗಳು ಮತ್ತು ವಾದ-ವಿವಾದಗಳು ಸೃಷ್ಟಿಯಾದವು. ತಮ್ಮ ಹೆಸರಿನ ಸುತ್ತ ಎದ್ದಿರುವ ವಿವಾದ ಹಾಗೂ ಗಾಳಿಮಾತುಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ನಟ ಪ್ರಕಾಶ್ ರಾಜ್ ಅವರು ತಮ್ಮ ಅಧಿಕೃತ ಸಾಮಾ ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಸ್ಪಷ್ಟನೆ ನೀಡಿ ಬರೆದುಲೊಂಡಿದ್ದಾರೆ
"ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ… ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ..ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ . ನಾನು ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿಮಾತುಗಳನ್ನು .. ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ"
'ಮಾಸ್ಕ್ ಮ್ಯಾನ್' ಚಿನ್ನಯ್ಯ ಅವರ ಹೈಕೋರ್ಟ್ ಅರ್ಜಿ ಕೇವಲ ಒಂದು ಆರೋಪವೋ ಅಥವಾ ಇದರ ಹಿಂದೆ ನಿಜಕ್ಕೂ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆದಿದೆಯೇ ಎಂಬುದು ನ್ಯಾಯಾಲಯದ ತನಿಖೆಯಿಂದಷ್ಟೇ ಹೊರಬರಬೇಕಿದೆ. ಇನ್ನೊಂದೆಡೆ, ನಟ ಪ್ರಕಾಶ್ ರಾಜ್ ಅವರು ಮುಂದಿನ ಎರಡು ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಪತ್ರಿಕಾಗೋಷ್ಠಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಅವರು ನೀಡಲಿರುವ ಸ್ಪಷ್ಟನೆ ಈ ವಿವಾದಕ್ಕೆ ಯಾವ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ