
ಬೆಂಗಳೂರು (ಜೂ.12): ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ಯುವತಿಯರು ರಸ್ತೆಗಿಳಿದು ಗದ್ದಲ ಮಾಡಿದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವನಗರದಲ್ಲಿರುವ ಅಂಜನಾದ್ರಿ ಲೇಡಿಸ್ ಪಿಜಿಯಲ್ಲಿ ನಡೆದದಿದೆ.
ಕೆಲ ದಿನಗಳ ಹಿಂದೆ ಪಿಜಿಯಲ್ಲಿ ನೀಡಿದ್ದ ಅನ್ನದಲ್ಲಿ ಹುಳ ಪತ್ತೆಯಾಗಿತ್ತು ಎಂದು ಯುವತಿಯರು ಆರೋಪಿಸಿದ್ದಾರೆ. ಈ ಬಗ್ಗೆ ಪಿಜಿಯವರಿಗೆ ತಿಳಿಸಿದರೆ ನಿರ್ಲಕ್ಷ್ಯ, 'ಕೊಟ್ಟಿದ್ದು ತಿನ್ನಿ ಇಲ್ಲದಿದ್ರೆ ಜಾಗ ಖಾಲಿ ಮಾಡಿ' ಎಂಬ ದರ್ಪ. ಕೊಡುವ ಊಟ ಸ್ವಚ್ಛವಾಗಿರಲಿ ಎಂದು ಪದೇಪದೆ ಹೇಳಿದ್ರೂ ಯಾವುದೇ ಬದಲಾವಣೆ ಕಾಣಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಪಿಜಿಯಲ್ಲಿದ್ದ ಯುವತಿಯರು ನ್ಯಾಯಕ್ಕಾಗಿ ರಸ್ತೆಗಿಳಿದು ಪಿಜಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಜಿಯಲ್ಲಿ ಕೊಡುವ ಆಹಾರ ಕಳಪೆ ಗುಣಮಟ್ಟದ್ದು ಅಲ್ಲದೇ ಪದೇಪದೆ ಅನ್ನದಲ್ಲಿ ಹುಳು ಕಸ ಕಡ್ಡಿ ಬರುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದ ಯುವತಿಯರು. ಅಷ್ಟಕ್ಕೆ ಮಾಲೀಕರು ಯುವತಿಯರಿಗೆ ಪಿಜಿ ಖಾಲಿ ಮಾಡುವಂತೆ ಸೂಚನೆ ನೀಡಿದ್ದರು ಎಂದು ಯುವತಿಯರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿಯರು ಮಧ್ಯರಾತ್ರಿಯೇ ಪಿಜಿಯಿಂದ ಹೊರಬಂದು ಪ್ರತಿಭಟನೆ ನಡೆಸಿದ್ದಾರೆ.
ಮಾಲೀಕಳ ಮಗನಿಂದ ಅನುಮತಿ ಇಲ್ಲದೆ ಪಿಜಿ ಪ್ರವೇಶ!
ಪಿಜಿಯನ್ನು ನೋಡಿಕೊಳ್ಳುತ್ತಿರುವ ಮಹಿಳೆಯ ಮಗ ಅನುಮತಿ ಇಲ್ಲದೆ ಪಿಜಿಗೆ ಪ್ರವೇಶಿಸುತ್ತಿದ್ದಾನೆ ಎಂದು ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ. ರಾತ್ರಿ ಹೊತ್ತು ಬರ್ತಾನೆ. ಆತನೇ ಟೆರಸ್‌ನ ಲೈಟ್‌ಗಳನ್ನು ಆಫ್ ಮಾಡೋದು ಇಷ್ಟು ಮಾತ್ರವಲ್ಲದೆ, ಕೆಲವೊಮ್ಮೆ ಅನುಮತಿ ಇಲ್ಲದೇ ಕೊಠಡಿ ಪ್ರವೇಶ ಮಾಡುತ್ತಿದ್ದ ಎಂದು ಯುವತಿಯರು ದೂರಿದ್ದಾರೆ. ಇದು ಲೇಡೀಸ್ ಪಿಜಿ, ಒಳಗಡೆ ಪ್ರವೇಶಕ್ಕೆ ಅನುಮತಿ ಇಲ್ಲ, ಈ ರೀತಿ ಬರೋದು ಎಷ್ಟು ಸರಿ ಎಂದು ಯುವತಿಯರು ಪ್ರಶ್ನಿಸಿದ್ದಕ್ಕೆ ಮಾಲೀಕಳ ಮಗ ಯುವತಿಯರಿಗೆ ಅವಾಚ್ಯವಾಗಿ ನಿಂದಿಸಿದ್ದ ಎಂದು ಆರೋಪಿಸಿರುವ ಯುವತಿಯರು, ಈ ಪಿಜಿಯಲ್ಲಿ ಕೊಡುವ ಆಹಾರ ಸ್ವಚ್ಛವಾಗಿಲ್ಲ, ಮಾಲೀಕಳ ಮಗನಿಂದ ನಮಗೆ ಸುರಕ್ಷತೆ ಇಲ್ಲದಂತಾಗಿದೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಆ ರೀತಿ ಏನೂ ಆಗಿಲ್ಲ ಎನ್ನುತ್ತಿರುವ ಪಿಜಿ ಮಾಲಕಿ!
ಯುವತಿಯರು ಮಾಡಿರುವ ಆರೋಪಗಳನ್ನ ತಳ್ಳಿಹಾಕಿರುವ ಪಿಜಿ ಮಾಲಕೀ, 'ಆ ರೀತಿ ಏನೂ ಆಗಿಲ್ಲ. ಈಗ ಆಗಿರುವ ಸಮಸ್ಯೆಯನ್ನ ನಾವು ಬಗೆಹರಿಸಿಕೊಳ್ಳುತ್ತೇವೆ' ಎಂದಿದ್ದಾರೆ.
ತಾಯಿ-ಮಗನ ಮೇಲೆ ಬಿಲ್ಡಿಂಗ್ ಓನರ್ ಆಕ್ರೋಶ
ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕಟ್ಟಡದ ಮಾಲೀಕರು ಸ್ಥಳಕ್ಕೆ ಬಂದು ಏನಾಗಿದೆ ಎಂಬ ವಿಚಾರ ತಿಳಿದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ವೇಳೆ ಪಿಜಿ ನೋಡಿಕೊಳ್ಳುತ್ತಿರುವ ತಾಯಿ ಮಗನ ವಿರುದ್ಧ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ
ಈ ಎಲ್ಲ ಹೈಡ್ರಾಮಾ ನಡೆದ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಸವೇಶ್ವರನಗರ ಪೊಲೀಸರು ದೌಡಾಯಿಸಿ ಎರಡು ಕಡೆಯವರಿಂದ ಸಮಸ್ಯೆ ಆಲಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಇದೀಗ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ