
ತುಮಕೂರು(ಜ.22): ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿ ಹೊರನಡೆದ ಘಟನೆ ಈಗ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಕುರಿತು ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ನಡೆದ ದುರದೃಷ್ಟಕರ ಘಟನೆ ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ಅಸೆಂಬ್ಲಿಗೆ ಬಂದರೂ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಪೂರ್ಣವಾಗಿ ಓದದೇ ಅರ್ಧಕ್ಕೆ ನಿಲ್ಲಿಸಿ ಹೋದದ್ದು ತಪ್ಪು ಎಂದ ಗೃಹಸಚಿವರು, ನಿಯಮದ ಪ್ರಕಾರ ಸರ್ಕಾರ ಬರೆದ ಭಾಷಣವನ್ನು ರಾಜ್ಯಪಾಲರು ಓದಲೇಬೇಕು, ಅದು ಅವರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಯಾವ ರಾಜ್ಯಪಾಲರೂ ಈ ರೀತಿ ಮಾಡಿರಲಿಲ್ಲ. ನಾವು ಸಿದ್ಧಪಡಿಸಿದ ಭಾಷಣದಲ್ಲಿ ಅವರಿಗೆ ಮುಜುಗರ ತರುವಂತಹ ಯಾವುದೇ ಪದಗಳಿರಲಿಲ್ಲ. ಆದರೂ ಅವರು ಓದದಿರುವುದು ಅವರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಭಾಷಣ ಮುಗಿಸಿ ಹೋಗುವಾಗ ರಾಜ್ಯಪಾಲರು ಪ್ರೋಟೋಕಾಲ್ ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಗೃಹ ಸಚಿವರು, ಪ್ರೋಟೋಕಾಲ್ ಪ್ರಕಾರ ಭಾಷಣದ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡಲೇಬೇಕು. ಆದರೆ ರಾಜ್ಯಪಾಲರು ಕೇವಲ 'ಜೈ ಹಿಂದ್' ಎಂದು ಹೇಳಿ ರಾಷ್ಟ್ರಗೀತೆಗೆ ನಿಲ್ಲದೆಯೇ ವೇದಿಕೆಯಿಂದ ಕೆಳಗಿಳಿದು ಬಂದಿದ್ದಾರೆ. ಇದು ಸಂವಿಧಾನದ ಮುಖ್ಯಸ್ಥರಾಗಿ ಅವರು ಮಾಡಬಾರದ ಕೆಲಸ. ಈ ರೀತಿಯ ವರ್ತನೆ ಲೆಜಿಸ್ಲೇಚರ್ ಪ್ರಕಾರ ಸರಿಯಲ್ಲ ಎಂದು ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರದ ವಿರುದ್ಧದ ಸಾಲುಗಳೇ ಭಾಷಣ ಮೊಟುಕಿಗೆ ಕಾರಣ?
ಭಾಷಣದಲ್ಲಿ ಕೇಂದ್ರ ಸರ್ಕಾರದ 'ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ' ಯೋಜನೆಯ ನಿಯಮ ಬದಲಾವಣೆ ಕುರಿತು ಟೀಕೆಗಳಿದ್ದವು ಎಂಬ ಅಂಶವನ್ನು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. 'ಕೇಂದ್ರ ಸರ್ಕಾರವು ಈ ಯೋಜನೆಯ ಹೆಸರು ಮಾತ್ರವಲ್ಲ, ಮೂಲ ನಿಯಮಗಳನ್ನೇ ಬದಲಿಸಿ ಪಂಚಾಯತ್ ರಾಜ್ ವ್ಯವಸ್ಥೆಗೆ ಪೆಟ್ಟು ಕೊಟ್ಟಿದೆ. ಆ ಆಕ್ಟ್ ಅನ್ನು ವಾಪಸ್ ಪಡೆಯಿರಿ ಎಂದು ನಾವು ಭಾಷಣದಲ್ಲಿ ಉಲ್ಲೇಖಿಸಿದ್ದೆವು. ಕೇಂದ್ರ ಸರ್ಕಾರ ಇವರನ್ನು ನೇಮಕ ಮಾಡಿರುವುದರಿಂದ, ಅವರಿಗೆ ಮುಜುಗರ ಆಗಬಹುದು ಎಂಬ ಕಾರಣಕ್ಕೆ ಓದಿಲ್ಲವೇನೋ? ಆದರೆ ರಾಜ್ಯದ ಮುಖ್ಯಸ್ಥರಾಗಿ ಅವರು ಸಂವಿಧಾನ ಪಾಲಿಸಬೇಕಿತ್ತು' ಎಂದರು.
ಮುಂದಿನ ಕ್ರಮದ ಬಗ್ಗೆ ಸರ್ಕಾರದಿಂದ ಶೀಘ್ರ ತೀರ್ಮಾನ
ಈ ಅನಿರೀಕ್ಷಿತ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. 'ಹಿಂದೆ ಹಂಸರಾಜ್ ಭಾರದ್ವಾಜ್ ತಪ್ಪು ಮಾಡಿದ್ದರು ಎಂಬ ಕಾರಣಕ್ಕೆ ಇವರೂ ಅದನ್ನೇ ಮಾಡಬೇಕೆಂದಿಲ್ಲ. ಬೇರೆ ರಾಜ್ಯಪಾಲರ ಜೊತೆ ಇವರನ್ನು ಹೋಲಿಸುವುದು ಬೇಡ. ಇವತ್ತಿನ ಘಟನೆಯನ್ನು ಯಾರೂ ಸಮರ್ಥಿಸಿಕೊಳ್ಳಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಚರ್ಚಿಸಿ ಮುಂದಿನ ಕಾನೂನಾತ್ಮಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ಪರಮೇಶ್ವರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ