ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದ ಈಗ ತಾರಕ್ಕೇರಿದೆ. ವಿವಾದ ಕೋರ್ಟ್ ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ ಮಠದ ಹೊಲದ ಉಳುಮೆಗೆ ಆಕ್ರೋಶ ವ್ಯಕ್ತವಾಗಿದೆ.
ಬಾಗಲಕೋಟೆ (ಫೆ.17): ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದ ಈಗ ತಾರಕ್ಕೇರಿದೆ. ವಿವಾದ ಕೋರ್ಟ್ ನಲ್ಲಿದ್ದಾಗಲೇ ಶ್ರೀ ಜಗದ್ಗುರು ಪೀಠದ ಶಾಖಾ ಮಠದ ಗುರುಲಿಂಗೇಶ್ವರ ಮಠಕ್ಕೆ ಗಂಗಾಧರ ಸ್ವಾಮೀಜಿ ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ್ದು, ಗಂಗಾಧರ ಸ್ವಾಮೀಜಿ ಅವರು ಮಠದ ದುರಸ್ತಿ, ಮಠದ ಹೊಲದ ಉಳುಮೆ ಮಾಡಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ರಂಭಾಪುರಿ ಜಗದ್ಗುರುಗಳ ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ರಂಭಾಪುರಿ ಶ್ರೀಗಳು ಚಲಿಸುತ್ತಿದ್ದ ಕಾರಿಗೆ ಮಹಿಳೆ ಚಪ್ಪಲಿ ತೂರಿದ ಘಟನೆ ನಡೆದಿದೆ.
ಕಲಾದಗಿ ಗ್ರಾಮದಲ್ಲಿ ರಂಭಾಪುರಿ ಶ್ರೀಗಳು ತೆರಳುವ ವಾಹನ ಅಡ್ಡಗಟ್ಟಲು ಪ್ರಯತ್ನಿಸಿರುವ ಘಟನೆ ನಡೆದಿದ್ದು, ತಳ್ಳಾಟ, ನೂಕಾಟವಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಗುರುಲಿಂಗೇಶ್ವರ ಮಠ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿದೆ. ಪೀಠಾಧಿಪತಿ ಆಯ್ಕೆ ವಿವಾದ ಕೋರ್ಟ್ ನಲ್ಲಿರುವಾಗ ಗಂಗಾಧರ ಸ್ವಾಮೀಜಿ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆ ಮಾಡಿರುವುದು ಈ ತಕರಾರಿಗೆ ಕಾರಣವಾಗಿದೆ.
ಇನ್ನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗುರುಲಿಂಗೇಶ್ವರ ಮಠದ ವಿವಾದಕ್ಕೆ ಸಂಬಂಧಿಸಿದಂತೆ ರಂಭಾಪುರಿ ಸ್ವಾಮೀಜಿ ವಿರುದ್ಧ ಕಲಾದಗಿ ಭಕ್ತರು ಆಕ್ರೋಶ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಉತ್ತರಾಧಿಕಾರಿ ಗಂಗಾಧರ ಸ್ವಾಮೀಜಿ ಇರಲು ಬಿಡೋದಿಲ್ಲ. ಮಠದ ಆಸ್ತಿ ಹೊಡೆಯಲು ರಂಭಾಪುರಿ ಶ್ರೀಗಳು ಷಡ್ಯಂತ್ರ ನಡೆಸಿದ್ದಾರೆ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಕಲಾದಗಿ ಗ್ರಾಮಸ್ಥರನ್ನ ಕೇಳಿಲ್ಲ. ತಮ್ಮ ಸಂಬಂಧಿಯನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ವ್ಯಾಜ್ಯ ಕೋರ್ಟ್ ನಲ್ಲಿದೆ. ಅಲ್ಲಿಯವರೆಗೆ ಉತ್ತರಾಧಿಕಾರಿ ಇರಿಸೋದು ಸರಿಯಲ್ಲ. ನ್ಯಾಯ ಸಿಗೋವರೆಗೆ ಹೋರಾಟ ಮುಂದುವರೆಸುತ್ತೇವೆ. ಈ ಕಾರಣಕ್ಕೆ ರಂಭಾಪುರಿ ಶ್ರೀ ಗ್ರಾಮಕ್ಕೆ ಬಂದಾಗ ವಿರೋಧಿಸಿದ್ದೇವೆ ಎಂದು ಪ್ರತಿಭಟನೆ ನಡೆಸಿದ ಭಕ್ತರು ಮತ್ತು ಮಹಿಳೆಯರು ಹೇಳಿದ್ದಾರೆ.
ಕಲಾದಗಿಯಲ್ಲಿ ರಂಭಾಪುರಿ ಶಾಖಾ ಮಠದ ದುರಸ್ತಿಗೆ ಕೆಲವರ ವಿರೋಧದ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ರಂಭಾಪುರಿ ಜಗದ್ಗುರು ಹೇಳಿಕೆ ನೀಡಿದ್ದು, ಆ ವಿಷಯ ಸಂಬಂಧ ಇಲ್ಲ, ಕಲಾದಗಿಯಲ್ಲಿ ನಮ್ಮ ಕಾರ್ಯಕ್ರಮ ಇಲ್ಲ. ಕಲಾದಗಿಗೆ ನಾವು ಹೋಗುವುದೂ ಇಲ್ಲ. ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಲ್ವಾ?. ನ್ಯಾಯಾಲಯದ ತೀರ್ಪು ಏನು ಕೊಡುತ್ತೆ ಅದೇ ಅಂತಿಮ. ಅಭಿವೃದ್ಧಿಗೆ ಕುಂಠಿತ ಮಾಡೋದು ಸರಿಯಲ್ಲ. ಧಾರ್ಮಿಕ ಸಂಸ್ಕೃತಿಯನ್ನು ಕೆಲವರು ಕೆಡಿಸುವ ಜನ ಇರ್ತಾರೆ. ಅಂತಹ ವಿಚಾರಗಳಿಗೆ ಅವಕಾಶ ಕೊಡಬಾರದು. ಅದು ರಂಭಾಪುರಿ ಶಾಖಾ ಮಠ ಆಗಿರೋದ್ರಿಂದ ಪೀಠದ ಜಗದ್ಗುರು ಅವರ ನಿರ್ಣಯವೇ ಅಂತಿಮ ಹೊರತು, ಬೇರೆಯವರ ಭಾವನೆಗಳಿಗೆ ಪುರಸ್ಕಾರ ಕೊಟ್ಟಿದ್ದೇ ಈ ಸಮಸ್ಯೆಗೆ ಕಾರಣ ಎಂದು ಸ್ವಾಮೀಜಿ ಹೇಳಿದ್ದಾರೆ.