ಡೆಂಘೀ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಡೆಂಘೀ ಟೆಸ್ಟಿಂಗ್‌ಗೆ ಬೆಲೆ ಹೆಚ್ಚಳ ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಪರವಾನಗಿ ರದ್ಧತಿಯಂತಹ ಬಿಗು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು (ಜು.06): ಡೆಂಘೀ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಡೆಂಘೀ ಟೆಸ್ಟಿಂಗ್‌ಗೆ ಬೆಲೆ ಹೆಚ್ಚಳ ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಪರವಾನಗಿ ರದ್ಧತಿಯಂತಹ ಬಿಗು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡುವುದು ಮೊದಲ ಕೆಲಸವಾಗಬೇಕು. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ, ಅದನ್ನು ನಿಯಂತ್ರಿಸಬೇಕು.
ಈ ವಿಚಾರಗಳನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮನೆಗಳ ಮುಂದೆ ನೀರು ನಿಲ್ಲುತ್ತದೆ. ಡೆಂಘೀ, ವೈರಲ್ ಜ್ವರ, ಸಾವು ಸಂಭವಿಸದಂತೆ ತಡೆಯಬೇಕು ಎಂದು ಅವರು ಹೇಳಿದರು. ದ.ಕ ಜಿಲ್ಲೆಯಲ್ಲಿ ಹಲವೆಡೆ ಗುಡ್ಡ ಕುಸಿತ ವಿಚಾರ ಪ್ರಸ್ತಾಪಿಸಿದ ಸಚಿವರು, ಮನೆ ಕಟ್ಟಲು ನಾವೇ ಗುಡ್ಡ ಅಗೆಯುತ್ತಿದ್ದೇವೆ. ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸುತ್ತಿದ್ದೇವೆ. ಹಾಗಾಗಿ ಮಳೆ ಬಂದಾಗ ಅದು ಕುಸಿಯುತ್ತದೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರುವ ಸಮಸ್ಯೆಯಾಗಿದೆ. ತಡೆಗೋಡೆ ಕಟ್ಟುವುದಕ್ಕೆ ದೊಡ್ಡ ಅನುದಾನ ಬೇಕು, ಅದರ ಬಗ್ಗೆ ನೋಡೋಣ ಎಂದವರು ಹೇಳಿದರು.
ಡೆಂಗ್ಯೂ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿಗಳಿಗೆ ಸಚಿವ ದಿನೇಶ್ ಸೂಚನೆ
ಹಾಸನದಲ್ಲಿ ಡೆಂಘೀಗೆ ಮತ್ತೊಂದು ಬಲಿ: ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ಮತ್ತೊಬ್ಬ ಬಾಲಕಿ ಬಲಿಯಾಗಿದ್ದಾಳೆ. ಈ ಮೂಲಕ ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ನಾಲ್ವರು ಬಾಲಕಿಯರು ಬಲಿಯಾದಂತಾಗಿದೆ. ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಮೃತ ಬಾಲಕಿ. ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಯನ್ನು ಮೂರು ದಿನಗಳ ಹಿಂದೆ ಹಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೆ ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ನಂತರ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾಳೆ. ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ನಾಲ್ವರು ಬಾಲಕಿಯರು ಬಲಿಯಾಗಿದ್ದು, ಇದರಲ್ಲಿ ಮೂವರು ಹೊಳೆನರಸೀಪುರ ತಾಲೂಕಿನವರು.