ಪ್ರಮೋದ್‌ ಮುತಾಲಿಕ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌: ಉಡುಪಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ನಿರ್ವಿಘ್ನ

By Sathish Kumar KHFirst Published Oct 11, 2023, 6:03 PM IST
Highlights

ಉಡುಪಿಯಲ್ಲಿ ನಿರ್ಮಾಣ ಮಾಡುತ್ತಿರುವ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ವಿರೋಧಿಸಿ ಪ್ರಮೋದ್‌ ಮುತಾಲಿಕ್‌ ಸಲ್ಲಿಸಿದ ಪಿಐಎಲ್‌ ಅನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಬೆಂಗಳೂರು (ಅ.11): ರಾಜ್ಯದ ಕರಾವಳಿ ಜಿಲ್ಲೆ ಹಾಗೂ ಕೃಷ್ಣನ ಸ್ಥಳವಾದ ಉಡುಪಿಯಲ್ಲಿ ಪರಶುರಾಮ ಥೀಮ್ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದ್ದು, ಈ ಥೀಮ್‌ ಪಾರ್ಕ್‌ ನಿರ್ಮಾಣವನ್ನು ವಿರೋಧಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್‌ ಪ್ರಮೋದ್‌ ಮುತಾಲಿಕ್‌ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಉಡುಪಿಯಲ್ಲಿ ಗೋಮಾಳಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದ್ದು, ಪಾರ್ಕ್‌ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಗೋಮಾಳಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಥೀಮ್ ಪಾರ್ಕ್ ನಿರ್ಮಾಣವೇ ಕಾನೂನುಬಾಹಿರವೆಂದು ವಾದ ಮಂಡನೆ ಮಾಡಲಾಗಿತ್ತು.

ಕೋರ್ಟ್ ಕಲಾಪಕ್ಕೂ ತಟ್ಟಿದ ವಿದ್ಯುತ್ ಲೋಡ್ ಶೆಡ್ಡಿಂಗ್ ಎಫೆಕ್ಟ್: ಮೊಬೈಲ್‌ ಟಾರ್ಚ್‌ನಲ್ಲಿಯೇ ನಡೆದ ಕಲಾಪ

ಪ್ರಮೋದ್ ಮುತಾಲಿಕ್ ಪರ ವಕೀಲರ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಥೀಮ್ ಪಾರ್ಕ್ ನಿರ್ಮಾಣ ಅಂತಿಮ ಹಂತದಲ್ಲಿರುವಾಗ ಅರ್ಜಿ ಸಲ್ಲಿಸಲಾಗಿದೆ. ತಮ್ಮ ಗೋವುಗಳ ಸಾಕಣೆಗೆ ತೊಂದರೆಯಾಗಿದೆ ಎಂದು ಅರ್ಜಿದಾರರು ಎಲ್ಲಿಯೂ ಹೇಳಿಲ್ಲ, ಜೊತೆಗೆ ಉಲ್ಲೇಖವನ್ನೂ ಮಾಡಿಲ್ಲ. ಊಹೆಗಳ ಮೇಲೆ ಪಿಐಎಲ್ ಸಲ್ಲಿಸಿದ್ದಾರೆಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಆದ್ದರಿಂದ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮೊಬೈಲ್‌ ಟಾರ್ಚ್‌ನಲ್ಲಿಯೇ ನಡೆದ ಕೋರ್ಟ್‌ ಕಲಾಪ: 

ತುಮಕೂರು (ಅ.11): ಕರ್ನಾಟಕ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಆವರಿಸಿದ್ದು, ಮಲೆಗಾಲದಲ್ಲಿಯೇ ಲೋಡ್‌ ಶೆಡ್ಡಿಂಗ್‌ ಆರಂಭವಾಗಿದೆ. ಇದರ ಪರಿಣಾಮ ತುಮಕೂರಿನಲ್ಲಿ ನಡೆಯುತ್ತಿದ್ದ ಕೋರ್ಟ್‌ ಕಲಾಪದ ಮೇಲೆಯೂ ತಟ್ಟಿದೆ. ಇದರಿಂದ ಮೊಬೈಲ್‌ ಟಾರ್ಚ್‌ ಹಿಡಿದುಕೊಂಡೇ ಕೋರ್ಟ್‌ ಕಲಾಪವನ್ನು ನಡೆಸಿದ ಪ್ರಸಂಗ ತುಮಕೂರಿನ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಡೆದಿದೆ.

ಹೌದು, ರಾಜ್ಯದಲ್ಲಿ ಈಗಾಗಲೇ ಬರಗಾಲ ಕಂಡುಬಂದಿದ್ದು, ಸರ್ಕಾರದಿಂದ ರೈತರಿಗೆ ವಿದ್ಯುತ್‌ ಶಾಕ್‌ ನೀಡಲಾಗಿದೆ. ಈ ವಿದ್ಯುತ್ ಲೋಡ್ ಶೆಡ್ಡಿಂಗ್ ಪರಿಣಾಮ ಕೋರ್ಟ್ ಕಲಾಪಕ್ಕೂ ತಟ್ಟಿದೆ. ವಿದ್ಯುತ್ ಕೈಕೊಟ್ಟ ಹಿನ್ನೆಲೆಯಲ್ಲಿ ಮೊಬೈಲ್ ಟಾರ್ಚ್ ನಲ್ಲೇ ತುಮಕೂರು ಉಪ ವಿಭಾಗಾಧಿಕಾರಿ (ಎಸಿ) ಕೋರ್ಟ್ ಕಲಾಪ‌ ನಡೆಸಿದ್ದಾರೆ. ಕಚೇರಿ ಕೆಲಸದ ವೇಳೆ ವಿದ್ಯುತ್ ಲೋಡ್ ಶೆಡ್ಡಿಂಗ್ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ, ಮೊಬೈಲ್ ಟಾರ್ಚ್ ಹಿಡಿದು ಕೋರ್ಟ್ ಕಲಾಪ ನಡೆಸಿದರು.

ಕನ್ನಡಿಗರಿಗೆ ಒಲಿಯದ ಕಾವೇರಿ: ಮುಂದಿನ 15 ದಿನ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಲು ಆದೇಶ

ತುಮಕೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಲಯದ ಸಂಕೀರ್ಣದಲ್ಲಿ, ಬಾಕಿ ಇದ್ದ ಪ್ರಕರಣಗಳ ಕಲಾಪ ನಡೆಸುತ್ತಿದ್ದ ತುಮಕೂರು ಎಸಿ ಗೌರವಕುಮಾರ್ ಶೆಟ್ಟಿ ಅವರಿಗೆ, ಬೆಸ್ಕಾಂ ವಿದ್ಯುತ್ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿದೆ. ಪರ್ಯಾಯ ವ್ಯವಸ್ಥೆ ಇಲ್ಲದೇ ಮೊಬೈಲ್ ಟಾರ್ಚ್ ಬಳಸಿ ವಕೀಲರ ಹಾಗೂ ಸಾರ್ವಜನಿಕರ ಅಹವಾಲು ನಡೆಸಲಾಯಿತು. ಸಾರ್ವಜನಿಕ ವಲಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯ ವೈಖರಿ ಬಗ್ಗೆ ಅಪಸ್ವರ ಕೇಳಿಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಹೀಗಾದರೇ ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

click me!