ಕ್ವಿಂಟಲ್‌ ಕೊಬ್ಬರಿಗೆ 11300 ಬೆಂಬಲ ಬೆಲೆ ನಿಗ​ದಿ: ಡಿಸಿಎಂ ಲಕ್ಷ್ಮಣ ಸವದಿ

By Kannadaprabha NewsFirst Published Aug 7, 2020, 10:04 AM IST
Highlights

ರೈತರಿಗೆ ಅನುಕೂಲವಾಗಲು ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಆಗಸ್ಟ್‌ 25ರವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ಸೆಪ್ಟೆಂಬರ್‌ 10ರವೆಗೆ ವಿಸ್ತರಿಸಿ ಆದೇಶ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ| ಕೇಂದ್ರವು ಕ್ವಿಂಟಲ್‌ಗೆ 10,300 ರು. ನಿಗದಿ ಮಾಡಲಾಗಿದೆ. ರೈತರ ಬೇಡಿಕೆಗೆ ಸ್ಪಂದಿಸಿ 1 ಸಾವಿರ ರು. ಹೆಚ್ಚುವರಿ ಬೆಂಬಲ ಬೆಲೆ ನೀಡಲು ನಿರ್ಧಾರ| 

ಬೆಂಗಳೂರು(ಆ.07):  ಕೇಂದ್ರ ಸರ್ಕಾರ ಕೊಬ್ಬರಿ ಖರೀದಿಗೆ ನಿಗದಿ ಮಾಡಿರುವ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ಒಂದು ಸಾವಿರ ರು. ಹೆಚ್ಚುವರಿ ಬೆಂಬಲ ಬೆಲೆ ನೀಡಿ, ಪ್ರತಿ ಕ್ವಿಂಟಲ್‌ಗೆ 11,300 ರು.ನಂತೆ ಖರೀದಿಸಲು ನಿರ್ಧರಿಸಲಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆ ಈ ನಿರ್ಧಾರ ತೆಗೆದುಕೊಂಡಿದ್ದು, ರೈತರಿಗೆ ಅನುಕೂಲವಾಗಲು ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಆಗಸ್ಟ್‌ 25ರವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ಸೆಪ್ಟೆಂಬರ್‌ 10ರವೆಗೆ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಭೂಕುಸಿತ: ಕೊಡಗು, ಚಿಕ್ಕಮಗಳೂರಿಗೆ ಸಚಿವ ಸೋಮಣ್ಣ, ಸಿ.ಟಿ. ರವಿ ದೌಡು

ಗುರುವಾರ ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥಿರೀಕರಣಗಳ ಸಚಿವ ಸಂಪುಟದ ಉಪ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಸಮಿತಿ ಸದಸ್ಯರೂ ಆದ ಸಚಿವರಾದ ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಕೆ.ಗೋಪಾಲಯ್ಯ ಹಾಗೂ ಪ್ರಭು ಚೌಹಾಣ್‌ ಸೇರಿ ಉಂಡೆ ಕೊಬ್ಬರಿಗೆ ಬೆಲೆ ನಿಗದಿ ಮಾಡುವ ಕುರಿತು ಚರ್ಚೆ ನಡೆಸಿದ್ದೇವೆ.

ಕೇಂದ್ರವು ಕ್ವಿಂಟಲ್‌ಗೆ 10,300 ರು. ನಿಗದಿ ಮಾಡಲಾಗಿದೆ. ರೈತರ ಬೇಡಿಕೆಗೆ ಸ್ಪಂದಿಸಿ 1 ಸಾವಿರ ರು. ಹೆಚ್ಚುವರಿ ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ 38 ಕೋಟಿ ರು. ಹೊರೆಯಾಗಲಿದೆ. ಇದರಿಂದಾಗಿ ಕೊಬ್ಬರಿ ಉತ್ಪಾದಿಸುವ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
 

click me!