
ಬೆಂಗಳೂರು: ನರೇಗಾ ವಿಚಾರವಾಗಿ ಬಹಿರಂಗ ಚರ್ಚೆಯ ವಿಪಕ್ಷಗಳ ಪಂಥಾಹ್ವಾನವನ್ನು ನಾನು ಸ್ವೀಕರಿಸುವೆ. ಸಾರ್ವಜನಿಕ ವೇದಿಕೆ, ಅಧಿವೇಶನ ಅಥವಾ ಮಾಧ್ಯಮ ವೇದಿಕೆಯಾದರೂ ಸರಿ. ಚರ್ಚೆಗೆ ನಾನು ಸಿದ್ಧ. ಮೊದಲು ‘ಡೈಲಾಗ್ ವೀರ ಕುಮಾರಸ್ವಾಮಿ’ ಅವರು ಬಂದರೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದವರು ನರೇಗಾ ವಿಚಾರವಾಗಿ ಚರ್ಚೆಗೆ ಸಿದ್ಧ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಯಾರು ಬೇಕಾದರೂ ಬರಲಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ. ಅವರು ಯಾವುದೇ ಮಾಧ್ಯಮ, ವೇದಿಕೆ, ಇಲ್ಲವೇ ಅಧಿವೇಶನದಲ್ಲಿ ಚರ್ಚಿಸುವುದಾದರೂ ನಾನು ಆ ಚರ್ಚೆಗೆ ಸಿದ್ಧ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚರ್ಚೆಗೆ ಸಿದ್ಧ ಎಂದಿದ್ದಾರಲ್ಲ ಎಂದು ಕೇಳಿದಾಗ, ನಾನು ಅವರನ್ನೂ ಸ್ವಾಗತಿಸುತ್ತೇನೆ. ಮೊದಲು ಅವರೇ ಬಂದರೆ ಬಹಳ ಒಳ್ಳೆಯದು ಎಂದರು.
ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ‘ಲೀಸ್ಡ್ ಸಿಎಂ’ ಎಂದು ಟೀಕಿಸಿರುವ ಬಗ್ಗ ಪ್ರತಿಕ್ರಿಯಿಸಿದ ಶಿವಕುಮಾರ್, ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೊದಲಿನಿಂದ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆದು ಹೋಗುವುದನ್ನು ನೋಡಿದ್ದೇವೆ. ಅವರ ಟೀಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಾರೆ. ಆ ಸಾಮರ್ಥ್ಯ ಅವರಿಗಿದೆ ಎಂದರು.
ಬಹಿರಂಗ ಚರ್ಚೆಗೆ ಯಾವಾಗ ಸಮಯ ನಿಗದಿ ಮಾಡುತ್ತೀರಾ ಹೇಳಿ. ಇಂದು ಸಂಜೆಯಿಂದಲೇ ಚರ್ಚೆಗೆ ಸಿದ್ಧ. ನರೇಗಾ ವಿಚಾರದಲ್ಲಿ ನನಗೆ ಚರ್ಚೆ ಮಾಡಲು ಯಾವ ತಯಾರಿಯೂ ಬೇಕಾಗಿಲ್ಲ. ಎಲ್ಲಾ ಮಾಹಿತಿಗಳು ನನ್ನ ಬೆರಳ ತುದಿಯಲ್ಲಿವೆ. ನರೇಗಾ ಯೋಜನೆಯಲ್ಲಿ ನಮ್ಮ ಕನಕಪುರ ತಾಲೂಕಿನಲ್ಲಿ ಎಷ್ಟು ಕೆಲಸ ಆಗಿದೆ ಎಂದು ನಮಗೆ ಗೊತ್ತಿದೆ. ನರೇಗಾ ಯೋಜನೆ ಜಾರಿಯಲ್ಲಿ ಕನಕಪುರ ನಂ.1 ಎಂದು ಬಿಜೆಪಿಯ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಈ ವಿಚಾರ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಜಯೇಂದ್ರ ಅವರಿಗೆ ಗೊತ್ತಿದೆಯೋ, ಇಲ್ಲವೋ?. ನಮ್ಮ ತಾಲೂಕಿನಲ್ಲಿ ಅವ್ಯವಹಾರ ಆಗಿದೆಯೇ, ಇಲ್ಲವೇ ಎಂದು ಕೇಂದ್ರ ಸರ್ಕಾರ ಹತ್ತು ತಂಡ ಕಳುಹಿಸಿ ತನಿಖೆ ಮಾಡಿಸಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ