
ಬಾಗಲಕೋಟೆ (ಜ.11): ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ಕಬ್ಬು ಕಟಾವು ಯಂತ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಡೀ ಕಬ್ಬಿನ ಗದ್ದೆಯೇ ಸುಟ್ಟು ಭಸ್ಮವಾಗಿದೆ.
ತಾಲ್ಲೂಕಿನ ಘಟ್ಟಿಗನೂರು ಗ್ರಾಮದ ಹೊಲದಲ್ಲಿ ಕಬ್ಬು ಕಟಾವು ಮಾಡುವ ಕಾರ್ಯ ಭರದಿಂದ ಸಾಗುತ್ತಿತ್ತು. ಈ ವೇಳೆ ಕಟಾವು ಮಷಿನ್‌ನ ಎಂಜಿನ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕಿಟ್ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಯಂತ್ರಕ್ಕೆ ವ್ಯಾಪಿಸಿದ್ದು, ಯಂತ್ರವು ಸಂಪೂರ್ಣವಾಗಿ ಹೊತ್ತಿ ಉರಿಯತೊಡಗಿದೆ.
ಯಂತ್ರಕ್ಕೆ ತಗುಲಿದ ಬೆಂಕಿ ಗಾಳಿಯ ವೇಗಕ್ಕೆ ಸುತ್ತಲಿನ ಕಬ್ಬಿನ ಗದ್ದೆಗಳಿಗೂ ವೇಗವಾಗಿ ಹರಡಿತು. ಘಟನೆಯಲ್ಲಿ ಸುಮಾರು 20 ಎಕರೆಯಷ್ಟು ವಿಸ್ತೀರ್ಣದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ದಹನವಾಗಿದೆ. ಬೆಂಕಿಯ ಕೆನ್ನಾಲಗೆಗೆ ರೈತರು ಆಘಾತಕ್ಕೊಳಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಣ್ಣೆದುರೇ ಬೂದಿಯಾಗಿದೆ.
ನಾಲ್ವರು ರೈತರ ಬದುಕು ಬೀದಿಗೆ
ಈ ಅಗ್ನಿ ಅವಘಡದಿಂದಾಗಿ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ. ಶಿವನಗೌಡ ಪಾಟಿಲ್, ಈರಮ್ಮ ಅಗಸಿಮುಂದಿನ, ವೆಂಕನಗೌಡ ಮತ್ತು ಮಂಜುನಾಥ ವಂದಾಲಿ ಎಂಬುವವರಿಗೆ ಸೇರಿದ ಕಬ್ಬಿನ ತೋಟಗಳು ಬೆಂಕಿಗೆ ಆಹುತಿಯಾಗಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಈ ದುರಂತ ಸಂಭವಿಸಿರುವುದು ರೈತರನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹುನಗುಂದದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಹರಸಾಹಸ ಪಟ್ಟ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ