Bengaluru: ಸಭೆಗೆ ಡಿಸಿಎಂ 1 ತಾಸು ತಡ: ಹೊರ ನಡೆದ ಬಿಜೆಪಿ ಶಾಸಕರು

By Kannadaprabha NewsFirst Published Jun 6, 2023, 6:33 AM IST
Highlights

ನಗರದಲ್ಲಿ ಮಳೆ, ಪ್ರವಾಹ ನಿರ್ವಹಣೆ, ರಸ್ತೆ ಗುಂಡಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಗೆ ಐವರು ಬಿಜೆಪಿ ಶಾಸಕರು ಬಹಿಷ್ಕರಿಸಿದ ಪ್ರಸಂಗ ನಡೆಯಿತು.

ಬೆಂಗಳೂರು (ಜೂ.6) ನಗರದಲ್ಲಿ ಮಳೆ, ಪ್ರವಾಹ ನಿರ್ವಹಣೆ, ರಸ್ತೆ ಗುಂಡಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಗೆ ಐವರು ಬಿಜೆಪಿ ಶಾಸಕರು ಬಹಿಷ್ಕರಿಸಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸೌಧ(Vidhanasoudha)ದಲ್ಲಿ ಬೆಳಗ್ಗೆ 11ಕ್ಕೆ ಸಭೆಗೆ ನಿಗದಿಯಾಗಿತ್ತು. ಬೆಂಗಳೂರಿನ ಹಲವು ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಭಾಗಿಯಾಗಿದ್ದರು. ಆದರೆ, ಅನ್ಯ ಕಾರಣಗಳಿಂದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಭೆಗೆ ಆಗಮಿಸುವುದು ಒಂದು ತಾಸುಗಳ ಕಾಲ ತಡವಾಯಿತು. ಉಪಮುಖ್ಯಮಂತ್ರಿಗಳು ಸಭೆಗೆ ಬರುವುದು ವಿಳಂಬವಾಗದ ಕಾರಣ ಬೇಸರಗೊಂಡು ಬಿಜೆಪಿ ಶಾಸಕರಾದ ಡಾ ಸಿ.ಎನ್‌.ಅಶ್ವತ್ಥನಾರಾಯಣ(DR CN Ashwath narayana), ಬೈರತಿ ಬಸವರಾಜು(Byrati basavaraj), ಎಸ್‌.ಟಿ.ಸೋಮಶೇಖರ್‌(ST Somashekhar), ಮುನಿರತ್ನ ಮತ್ತು ಎಸ್‌.ಆರ್‌.ವಿಶ್ವನಾಥ್‌ ಸಭೆ ಆರಂಭಕ್ಕೂ ಮುನ್ನವೇ ನಿರ್ಗಮಿಸಿದರು.

ವಿಷನ್‌ ಬೆಂಗಳೂರಿಗೆ ಸಮಿತಿ ರಚನೆ: ಕುಡಿಯುವ ನೀರು, ಚರಂಡಿ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಡಿಕೆಶಿ ಚರ್ಚೆ

ಡಿ.ಕೆ.ಶಿವಕುಮಾರ್‌(DK Shivakumar) ನಿಗದಿಯಾಗಿದ್ದ 11 ಗಂಟೆಯ ಸಭೆಗೆ ಆಗಮಿಸಲಿಲ್ಲ. ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳು ಕಾದು ಕುಳಿತಿದ್ದರು. ಆದರೆ, ಒಂದು ತಾಸು ಕಳೆದರೂ ಉಪಮುಖ್ಯಮಂತ್ರಿಗಳು ಆಗಮಿಸದಿರುವ ಕಾರಣ ಬೇಸರಗೊಂಡು ಐವರು ಶಾಸಕರು ಹೊರನಡೆದರು. ಮಧ್ಯಾಹ್ನ 12ಕ್ಕೆ ಉಪಮುಖ್ಯಮಂತ್ರಿಗಳು ಆಗಮಿಸಿ ಸಭೆ ನಡೆಸಿದರು.

ಮನವೊಲಿಕೆಗೆ ಯತ್ನಿಸಿದ ಸಚಿವ ಜಮೀರ್‌:

ಈ ನಡುವೆ, ಬಿಜೆಪಿ ಐವರು ಶಾಸಕರು ಸಭೆಯನ್ನು ಬಹಿಷ್ಕಾರ ಮಾಡುತ್ತಿದ್ದಂತೆ ಅವರ ಮನವೊಲಿಕೆಗೆ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರಯತ್ನಿಸಿದರು. ಸಭೆಯಿಂದ ಹೊರಗೆ ಹೋಗಿ ತೆರಳುತ್ತಿದ್ದವರನ್ನು ಕರೆದರು. ಅದರಲ್ಲಿಯೂ ಮುನಿರತ್ನ ಅವರನ್ನುದ್ದೇಶಿಸಿ ಪ್ರೀತಿಯಿಂದ ‘ಹೇ..ಮುನಿ... ಮುನಿರತ್ನ’ ಎಂದು ಕರೆದು ತಡೆದು ಮಾತನಾಡಿಸಿದರು. ಆದರೂ ಸಮಾಧಾನಗೊಳ್ಳದ ಶಾಸಕರು ಸಭೆಗೆ ಬಾರದೆ ತೆರಳಿದರು.

ಉದ್ದೇಶಪೂರ್ವಕವಾಗಿ ತಡ ಮಾಡಿದ್ದಾರೆ: ಅಶ್ವತ್ಥ

ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಡಾ ಸಿ.ಎನ್‌.ಅಶ್ವತ್ಥನಾರಾಯಣ, ಬೆಂಗಳೂರಲ್ಲಿ ಮಳೆ ಮತ್ತು ಪ್ರವಾಹ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿತ್ತು. ಆದರೆ, ಉಪಮುಖ್ಯಮಂತ್ರಿಗಳು ನಮ್ಮನ್ನು ಸಭೆಗೆ ಕರೆದು ಒಂದು ಗಂಟೆಯಿಂದ ಕಾಯಿಸಿದ್ದಾರೆ. ತಡವಾಗಿ ಆಗಮಿಸುವ ಕುರಿತು ಮಾಹಿತಿ ನೀಡಿಲ್ಲ. ಸಭೆಗೆ ವಾಟ್ಸ್‌ಆ್ಯಪ್‌ ಮೂಲಕ ಸಭೆಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡವಳಿಕೆ ಪ್ರದರ್ಶಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಬಿಡಿ, ನಗರ ಅಭಿವೃದ್ಧಿಗೆ ಸಲಹೆ ನೀಡಿ: ಡಿಸಿಎಂ ಡಿಕೆ ಶಿವಕುಮಾರ...

ಶಾಸಕ ಬೈರತಿ ಬಸವರಾಜ ಮತ್ತು ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಸುಮಾರು ಒಂದು ತಾಸು ಕಳೆದರೂ ಸಭೆ ಆರಂಭವಾಗಿಲ್ಲ. ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಆಮಿಸಿದ್ದೇವು. ಆದರೆ, ಸಭೆ ನಡೆಯುವುದೇ ತಡವಾಗಿದೆ. ನಮಗೆ ಬೇರೆ ಕಾರ್ಯಕ್ರಮಗಳಿವೆ ಎಂದು ಹೇಳಿದರು. ಕಾಂಗ್ರೆಸ್‌ ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಎನ್‌.ಎ.ಹ್ಯಾರಿಸ್‌ ಅವರು ಗೈರುಹಾಜರಾಗಿದ್ದರು.

click me!