ರಾಜಕೀಯ ಬಿಡಿ, ನಗರ ಅಭಿವೃದ್ಧಿಗೆ ಸಲಹೆ ನೀಡಿ: ಡಿಸಿಎಂ ಡಿಕೆ ಶಿವಕುಮಾರ

By Kannadaprabha NewsFirst Published Jun 6, 2023, 6:17 AM IST
Highlights

‘ಬೆಂಗಳೂರು ನಗರ  ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ, ಸಲಹೆ ಅಗತ್ಯವಿದೆ. ಚುನಾವಣಾ ರಾಜಕೀಯ ಮುಗಿದಿದೆ. ಈಗ ರಾಜಕೀಯ ಬೇಡವೇ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಇರಬಹುದು. ಅದನ್ನು ಪಕ್ಕಕ್ಕಿಟ್ಟು ಬೆಂಗಳೂರು ಅಭಿವೃದ್ಧಿಗೆ ಸಲಹೆ ನೀಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಬೆಂಗಳೂರು (ಜೂ.6) ‘ಬೆಂಗಳೂರು ನಗರ  ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ, ಸಲಹೆ ಅಗತ್ಯವಿದೆ. ಚುನಾವಣಾ ರಾಜಕೀಯ ಮುಗಿದಿದೆ. ಈಗ ರಾಜಕೀಯ ಬೇಡವೇ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಇರಬಹುದು. ಅದನ್ನು ಪಕ್ಕಕ್ಕಿಟ್ಟು ಬೆಂಗಳೂರು ಅಭಿವೃದ್ಧಿಗೆ ಸಲಹೆ ನೀಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಳೆ ಅನಾಹುತ, ರಸ್ತೆ ಗುಂಡಿ ಸೇರಿದಂತೆ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ನಗರದ ಜನಪ್ರತಿನಿಧಿಗಳ, ಸಂಸದರ ಮತ್ತು ಪರಿಷತ್‌ ಸದಸ್ಯರ ಜತೆ ಸಭೆ ನಡೆಸುವ ಮುನ್ನ ಪ್ರಸ್ತಾವಿಕ ಮಾತುಗಳನ್ನಾಡಿದರು.

Bengaluru: ಕೆರೆಯಲ್ಲಿ ರಸ್ತೆ ನಿರ್ಮಿಸಿದ ಬಿಬಿಎಂಪಿ ಅಧಿಕಾರಿಗಳ ಅಮಾನತುಗೊಳಿಸಿದ ಡಿಕೆ ಶಿವಕುಮಾರ್

ಈ ವೇಳೆ ನನಗೆ ದ್ವೇಷದ ರಾಜಕೀಯ ಬೇಕಿಲ್ಲ. ಅದರಲ್ಲಿ ನನಗೆ ನಂಬಿಕೆ ಇಲ್ಲ. ನಾವು ಬೇರೆ ಬೇರೆ ರಾಜಕೀಯ ಪಕ್ಷದವರಾಗಿಬಹುದು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಟ್ಟು ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಮಾಡುತ್ತೇನೆ ಎಂದರೆ ಅದಕ್ಕೂ ಸಿದ್ಧ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ. ಆದರೆ, ಅದೆಲ್ಲಾ ಬಿಟ್ಟು ನಗರದ ಅಭಿವೃದ್ಧಿಗೆ ಒತ್ತು ನೀಡೋಣ. ನೀವು ಸಲಹೆ ನೀಡಿ, ನಿರ್ಮಲ ಮನಸ್ಸಿಂದ ತೆಗೆದುಕೊಳ್ಳುತ್ತೇನೆ. ದೇಶದ ಅರ್ಥ ವ್ಯವಸ್ಥೆಗೆ ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ಕೊಡುಗೆ ಅಪಾರ. ಜಿಎಸ್‌ಟಿ, ಸೆಸ್‌ ಸೇರಿದಂತೆ ಇತರೆ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹಣ ಹೋಗುತ್ತದೆ. ರಾಜ್ಯಕ್ಕೆ ಬರಬೇಕಾದ ಪಾಲು ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳೋಣ ಎಂದರು.

‘ನೀರು ಪೂರೈಕೆ ಬಗ್ಗೆ ವರದಿ ನೀಡಿ’

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯೂ ಸಹ ಅದನ್ನು ಬಹಳ ಸಲ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ ಹೆಚ್ಚಿಸೋಣ. ಬೆಂಗಳೂರಿನ ನಾಗರಿಕರು ಮೂಲಸೌಕರ್ಯ ಕೊರತೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ. ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟುಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜನಸಂಖ್ಯೆಗನುಗುಣವಾಗಿ ನೀರು ಪೂರೈಕೆಯಾಗುತ್ತಿದೆಯೇ? ಎಂಬುದರ ಕುರಿತು ಸಂಬಂಧಪಟ್ಟಅಧಿಕಾರಿಗಳು ತಕ್ಷಣ ವರದಿ ನೀಡಬೇಕು ಎಂದು ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.

ವಿಷನ್‌ ಬೆಂಗಳೂರಿಗೆ ಸಮಿತಿ ರಚನೆ: ಕುಡಿಯುವ ನೀರು, ಚರಂಡಿ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಡಿಕೆಶಿ ಚರ್ಚೆ

‘ದಾರಿ ತಪ್ಪಿಸಿದರೆ ಸಹಿಸಲ್ಲ’

ಬೆಂಗಳೂರು ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಆದರೆ, ಕೆಲವರು ಈ ಬಗ್ಗೆ ಗಮನಹರಿಸದೆ, ಅವರವರ ಕಣ್ಣಿನ ನೇರಕ್ಕೆ ಅವರವರ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಕೆಲವರು ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ. ನಾವು ಪ್ರತಿಯೊಂದನ್ನೂ ಪರಾಮರ್ಶಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಆಟವಾಡಲು ಶುರು ಮಾಡಿದರೆ ಸಹಿಸುವುದಿಲ್ಲ. ಅಂತಹವರು ಜಾಗ ಖಾಲಿ ಮಾಡಬೇಕಾಗುತ್ತದೆ. ಹಿಂದಿನ ದಿನದಲ್ಲಿ ಏನಾಯಿತು ಎಂಬ ಬಗ್ಗೆ ಚರ್ಚೆ, ಪರಾಮರ್ಶೆಯಲ್ಲಿ ಸಮಯ ವ್ಯಯಿಸುವುದು ನನಗೆ ಬೇಕಿಲ್ಲ. ಭವಿಷ್ಯದ ಬಗ್ಗೆ ಸಕರಾತ್ಮಕ ಚಿಂತನೆ ಮಾಡೋಣ, ಬೆಂಗಳೂರು ಪರಿವರ್ತನೆ ಮಾಡೋಣ ಎಂದು ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದರು.

click me!