
ಬೆಂಗಳೂರು (ಮೇ.24): ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕದ ನಿಯೋಗ ಮಾತುಕತೆ ನಡೆಸಿತು. ಪ್ರಸಿದ್ಧ ಲುಲು ಗ್ರೂಪ್, ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ, ಹೀರೋ ಮೋಟೋಕಾಪ್‌ರ್, ನೆಸ್ಲೆ, ದಸ್ಸಾಲ್ಸ್ ಹಾಗೂ ಸೀಮನ್ಸ್ ಸಂಸ್ಥೆಗಳ ಜತೆ ಖುದ್ದು ಬೊಮ್ಮಾಯಿ ಅವರು ಹೂಡಿಕೆ ಸಂಬಂಧ ಸಮಾಲೋಚನೆ ನಡೆಸಿದರು. ಇದೇ ವೇಳೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲುಲು ಗ್ರೂಪ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಎ.ವಿ.ಅನಂತರಾಮನ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಇದರ ಅಂಗವಾಗಿ ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರು. ಹೂಡಿಕೆ ಮಾಡಲು ಮುಂದಾಗಿದ್ದು, ನಾಲ್ಕು ಶಾಪಿಂಗ್ ಮಾಲ್, ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ, ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ, ರಾಜ್ಯದ ಸ್ಮಾರ್ಚ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಮುಖ್ಯಸ್ಥರು ಉತ್ಸುಕತೆ ತೋರಿದರು. ಮೈಸೂರು ಜಿಲ್ಲೆಯ ನಂಜನಗೂಡಿನ ಇನ್‌ಸ್ಟಂಟ್ ಕಾಫಿ ಕಾರ್ಖಾನೆಯ ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಲೆ ಸಂಸ್ಥೆ ಮುಂದಾಗಿದೆ.
"
ವಿದೇಶಕ್ಕೆ ಹೋಗುವ ಮುನ್ನ ಸಿಎಂ ಮಹತ್ವದ ಆದೇಶ: ಅಷ್ಟ ದಿಕ್ಪಾಲಕರ ನೇಮಕ
ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ಆರಂಭಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಜ್ಯೂಬಿಲಿಯಂಟ್ ಫುಡ್ ವರ್ಕ್ಸ್ ತೀರ್ಮಾನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9000 ಜನರು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಹಿಟಾಚಿ ಎನರ್ಜಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆ ವೇಳೆ ಇವಿ ಚಾರ್ಜಿಂಗ್‌ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆಗೆ ಕಂಪನಿ ಒಲವು ತೋರಿದೆ. ಬೆಂಗಳೂರಿನಲ್ಲಿ ಪ್ರತಿಭೆಯ ಲಭ್ಯತೆ ಇರುವುದರಿಂದ ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ.
ಸೀಮನ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ. ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಗ್ನಾಸ್ಟಿಕ್ಸ್ ಮೇಲೆ ಕೇಂದ್ರೀಕೃತವಾದ ಆರ್ ಅಂಡ್ ಡಿ ಆರೋಗ್ಯ ಯೋಜನೆ, ಸ್ಥಳೀಯ ಮಾರುಕಟ್ಟೆಗಳಿಗೆ ಮಾರಾಟ ಮಾಡಲು ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಘಟಕವನ್ನು ಬೊಮ್ಮಸಂದ್ರದಲ್ಲಿ ಸ್ಥಾಪಿಸಲು ಬರುವ ಸೆಪ್ಟೆಂಬರ್‌ನಲ್ಲಿ ಶಂಕುಸ್ಥಾಪನೆಗೆ ಯೋಜಿಸಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳನ್ನು ಸಂಸ್ಥೆ ಆಹ್ವಾನಿಸಿದೆ.
ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಸೂಚನೆ: ಮಳೆ ಹಾನಿ ತಡೆಗೆ 15 ದಿನ ರಜೆ ಕಟ್
ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿವೆ. ಈ ವೇಳೆ ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣ ರೆಡ್ಡಿ, ಕೈಗಾರಿಕಾ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ