ಮತಾಂತರ ನಿಷೇಧ ಕಾಯ್ದೆಯಿಂದ ಅಭಿವೃದ್ಧಿಗೆ ಅಡ್ಡಿಯಲ್ಲ: ಸಿಎಂ ಬೊಮ್ಮಾಯಿ

By Girish GoudarFirst Published May 24, 2022, 6:08 AM IST
Highlights

*  ರಾಜ್ಯಗಳ ಆಂತರಿಕ ವಿಷಯ ಹೂಡಿಕೆಗೆ ಅಡ್ಡಿಯಾಗದು
*  ದಾವೋಸ್‌ ಶೃಂಗದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಶ್ವಾಸ
*  ತೈಲ ಬೆಲೆ ಇಳಿಕೆ ಪರಿಶೀಲನೆ
 

ದಾವೋಸ್‌(ಮೇ.24): ಬಲವಂತದ ಮತಾಂತರ ನಿಷೇಧ ಕಾಯ್ದೆ ಅಂಗೀಕರಿಸಿರುವ ರಾಜ್ಯ ಸರ್ಕಾರದ ನಿರ್ಧಾರವು, ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಮೇಲೆ ಯಾವುದೇ ದುಷ್ಪರಿಣಾಮಗಳನ್ನು ಬೀರದು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವೋಸ್‌ ಶೃಂಗದಲ್ಲಿ ಭಾಗಿಯಾಗಲು ಆಗಮಿಸಿರುವ ಅವರು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ ‘ಬಲವಂತದ ಮತಾಂತರ ನಿಷೇಧ ಕಾಯ್ದೆಯು ರಾಜ್ಯದ ಅಭಿವೃದ್ಧಿ ಪಥಕ್ಕೆ ಯಾವುದೇ ಅಡ್ಡಿಯಾಗದು. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಆಂತರಿಕವಾಗಿ ನಾವು ಸಾಕಷ್ಟುವಿಷಯಗಳನ್ನು ನೋಡಿದ್ದೇವೆ. ಹಾಗೆಂದು ಯಾವ ರಾಜ್ಯಗಳಲ್ಲಿ ಇಂಥ ಆಂತರಿಕ ವಿಷಯಗಳು ಇಲ್ಲ? ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಆಂತರಿಕ ವಿಷಯಗಳು ಇದ್ದೇ ಇರುತ್ತವೆ. ಆದರೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸ ಈಗಲೂ ಉನ್ನತ ಮಟ್ಟದಲ್ಲೇ ಇದೆ’ ಎಂದು ಹೇಳಿದರು.

Davos2022: ದಾವೋಸ್‌ನಲ್ಲಿ ಬೊಮ್ಮಾಯಿ, ಸದ್ಗುರು ಭೇಟಿ

ಆಂತರಿಕವಾಗಿ ಕೆಲವೊಂದು ವಿಷಯಗಳನ್ನು ಮೇಲೆತ್ತಲಾಗುತ್ತದೆ. ಅದನ್ನು ನಿರ್ವಹಿಸುವುದು ನಮ್ಮ ಕೆಲಸ. ಅದು ನಮ್ಮ ಕರ್ತವ್ಯವೂ ಹೌದು. ಆದರೆ ಈ ವಿಷಯಗಳೆಂದೂ ನಮ್ಮ ಅಭಿವೃದ್ಧಿಯ ಕಥೆಗೆ ಅಡ್ಡಿ ಮಾಡದು ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ತೈಲ ಬೆಲೆ ಇಳಿಕೆ ಪರಿಶೀಲನೆ

ಜಿಎಸ್‌ಟಿ ಜಾರಿ ಬಳಿಕ ನಮ್ಮ ಬಳಿ ದರ ಕಡಿತಕ್ಕೆ ಹೆಚ್ಚಿನ ಅವಕಾಶಗಳು ಉಳಿದಿಲ್ಲ. ಹೀಗಾಗಿ ನಮ್ಮ ಸಂಪನ್ಮೂಲಗಳ ಸಂಗ್ರಹ ಮತ್ತು ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ತೈಲ ದರ ಕಡಿತದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
 

click me!