* ಎಸ್‌ಐ ಪರೀಕ್ಷೆ ಮುಗಿದ 10-15 ನಿಮಿಷದಲ್ಲಿ ಕರಾಮತ್ತು
* ಪರೀಕ್ಷೆ ಮುಗಿದ ಬಳಿಕವೂ ಶಾಲಾವರಣದಲ್ಲೇ ಇದ್ದ ಆರೋಪಿಗಳು
* 10-15 ನಿಮಿಷ ಕಾರ್ಯಾಚರಣೆ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಮೇ.24): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಒಎಂಆರ್ ಶೀಟ್‌ಗಳನ್ನು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ನೇಮಕಾತಿ ವಿಭಾಗದ ಸಿಬ್ಬಂದಿ ಮಾತ್ರವಲ್ಲ ಖುದ್ದು ಕೆಲ ಅಭ್ಯರ್ಥಿಗಳೇ ತಿದ್ದಿದ್ದು, ಪರೀಕ್ಷೆ ಮುಗಿದ 10 ರಿಂದ 15 ನಿಮಿಷದಲ್ಲಿ ‘ಒಎಂಆರ್ ಶೀಟ್ ಭರ್ತಿ ಆಪರೇಷನ್’ ನಡೆದಿದೆ ಎಂಬ ಕುತೂಹಲಕಾರಿ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಪ್ರವೀಣ್ ಕುಮಾರ್, ಅಯ್ಯಾಳಿ ದೇಸಾಯಿ ಸೇರಿದಂತೆ ಇತರೆ ಆರೋಪಿಗಳು ಪರೀಕ್ಷೆ ಮುಗಿದ ಬಳಿಕ ಶಾಲಾ ಆವರಣದಲ್ಲೇ ಇದ್ದರು. ಪರೀಕ್ಷೆ ಮುಗಿಸಿ ಎಲ್ಲ ಅಭ್ಯರ್ಥಿಗಳು ಹೊರ ಹೋದ ಬಳಿಕ ಮತ್ತೆ ಕೇಂದ್ರಕ್ಕೆ ತೆರಳಿದ ಆರೋಪಿತ ಅಭ್ಯರ್ಥಿಗಳು, ದಿವ್ಯಾ ಹಾಗರಗಿ ತಂಡದ ಸದಸ್ಯರು ಒದಗಿಸಿದ ಉತ್ತರ ಪತ್ರಿಕೆ ಮುಂದಿಟ್ಟು ತಮ್ಮ ಒಎಂಆರ್ ಶೀಟ್‌ಗಳನ್ನು ತಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೇದೆ ಮನೆಯಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ 1.5 ಕೋಟಿ ಜಪ್ತಿ!
ಒಎಂಆರ್ ಶೀಟ್ ತಿದ್ದಿದ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿರುವ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಬಹಿರಂಗಪಡಿಸಿದ್ದಾರೆ. ಈ ಸಂಗತಿಯನ್ನು ಆರೋಪಿಗಳ ಜಾಮೀನು ಅರ್ಜಿಗೆ ತಕರಾರು ಸಲ್ಲಿಸುವ ವೇಳೆ ಸಿಐಡಿ ಉಲ್ಲೇಖಿಸಿದ್ದು, ಇದುವೇ ಆರೋಪಿಗಳಿಗೆ ಜಾಮೀನು ಪಡೆಯಲು ಸಂಕಷ್ಟತಂದೊಡ್ಡಿದೆ ಎಂದು ತಿಳಿದು ಬಂದಿದೆ.
ಇದುವರೆಗೆ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿದ ಆರೋಪದ ಮೇರೆಗೆ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಆಕೆಯ ಒಡೆತನದ ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ್, ಸುನಂದಾ, ಅರ್ಚನಾ ಹಾಗೂ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್ ಮತ್ತು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್‌ಡಿಸಿ ಹರ್ಷ, ಎಎಚ್‌ಸಿ ಶ್ರೀಧರ್, ಆರ್‌ಎಸ್‌ಐ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಬಂಧಿತರಾಗಿದ್ದಾರೆ. ಇದೇ ಪರೀಕ್ಷಾ ಅಕ್ರಮದಲ್ಲಿ ಕಲಬುರಗಿಯಲ್ಲಿ ಸಿಕ್ಕಿಬಿದ್ದ ಅಭ್ಯರ್ಥಿಗಳಾದ ಪ್ರವೀಣ್ ಕುಮಾರ್, ಅಯ್ಯಾಳಿ ದೇಸಾಯಿ, ಚೇತನ್ ನಂದಗಾವ್ ಸೇರಿ ಇತರರ ವಿಚಾರಣೆ ವೇಳೆ ಒಎಂಆರ್ ಶೀಟ್ ತಿದ್ದುಪಡಿಯಲ್ಲಿ ಅಭ್ಯರ್ಥಿಗಳೇ ನೇರವಾಗಿ ಪಾಲ್ಗೊಂಡಿರುವ ಮಹತ್ವದ ಸಂಗತಿ ಬಯಲಾಗಿದೆ ಎಂದು ಸಿಐಡಿ ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಎಸ್‌ಐ ಪರೀಕ್ಷೆಯಲ್ಲಿ ಲಂಚ ನೀಡಿದ ಅಭ್ಯರ್ಥಿಯಿಂದಲೇ ತನಿಖೆಗೆ ಅರ್ಜಿ!
10-15 ನಿಮಿಷ ಕಾರ್ಯಾಚರಣೆ:
ಕಲಬುರಗಿ ನಗರದ ದಿವ್ಯಾ ಒಡೆತನದ ಜ್ಞಾನಜ್ಯೋತಿ ಶಾಲೆಯನ್ನು ಪಿಎಸ್‌ಐ ನೇಮಕಾತಿ ನಡೆಸಲಾದ ಪರೀಕ್ಷೆಗೆ ಕೇಂದ್ರವಾಗಿ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗವು ಆಯ್ಕೆ ಮಾಡಿತ್ತು. ಶಾಲೆಯು ಪರೀಕ್ಷಾ ಕೇಂದ್ರವಾಗಿ ಆಯ್ಕೆಯಾದ ಬಳಿಕ ಪರೀಕ್ಷಾ ಅಕ್ರಮಕ್ಕೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಸಂಚು ರೂಪಿಸಲಾಯಿತು. ಅಂತೆಯೇ ಪರೀಕ್ಷೆ ಆರಂಭವಾದ ಕೂಡಲೇ ಪ್ರಶ್ನೆ ಪತ್ರಿಕೆಯ ಜೆರಾಕ್ಸ್ ಪಡೆದು ನಂತರ ಅದಕ್ಕೆ ತ್ವರಿತವಾಗಿ ಉತ್ತರ ಸಿದ್ಧಪಡಿಸುವುದು, ಪರೀಕ್ಷೆಯಲ್ಲಿ 150 ಅಂಕಗಳ ಪ್ರಶ್ನೆಗಳಿಗೆ 15 ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವಂತೆ ತಮಗೆ ಹಣ ಸಂದಾಯ ಮಾಡಿದ್ದ ಅಭ್ಯರ್ಥಿಗಳಿಗೆ ಸೂಚಿಸಿದ್ದರು. ಬಳಿಕ ಪರೀಕ್ಷೆ ಮುಗಿದು ಉತ್ತರ ಪತ್ರಿಕೆಗಳನ್ನು ಸಂಗ್ರಹಿಸುವ 10 ರಿಂದ 15 ನಿಮಿಷ ಅಂತರದಲ್ಲಿ ದಿವ್ಯಾ ಹಾಗರಗಿ ತಂಡವು ಒಎಂಆರ್ ಶೀಟ್‌ಗಳನ್ನು ತಿದ್ದಿಪಡಿ ಮಾಡಿದೆ. ಇದಕ್ಕೆ ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರದಲ್ಲೇ ಇದ್ದ ಕೆಲ ಅಭ್ಯರ್ಥಿಗಳು ಕೂಡ ಪಾಲ್ಗೊಂಡಿದ್ದಾರೆ. ಕ್ಷಿಪ್ರವಾಗಿ ಖಾಲಿ ಬಿಟ್ಟಿದ್ದ ಒಎಂಆರ್ ಶೀಟ್‌ಗಳನ್ನು ಅವರು ಭರ್ತಿ ಮಾಡಿದ್ದಾರೆ. ತಮ್ಮದು ಮಾತ್ರವಲ್ಲದೆ ಇತರರ ಒಎಂಆರ್ ಶೀಟ್‌ಗಳನ್ನು ಕೂಡ ಅಭ್ಯರ್ಥಿಗಳು ತಿದ್ದಿದ್ದಾರೆ ಎಂದು ಮೂಲಗಳು ಹೇಳಿವೆ.