ನ್ಯಾಕ್ ಮಾನ್ಯತೆ ಭ್ರಷ್ಟಾಚಾರದಲ್ಲಿ ಪ್ರಾಧ್ಯಾಪಕಿ ಅಮಾನತು ಹೀಗೆ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಒಂಬತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ವಿದ್ಯಾರ್ಥಿಗಳದ್ದೇ ಕೊರತೆ.
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಮಾ.25): ಪರೀಕ್ಷೆಯಲ್ಲಿ ಉತ್ತರ ಸಹಿತ ಪ್ರಶ್ನೆಪತ್ರಿಕೆ, ಅಪೂರ್ಣ ಪ್ರಶ್ನೆ ಪತ್ರಿಕೆ ನೀಡಿಕೆ, ಬೀಳ್ಕೊಡುಗೆ ವೇಳೆ ವಿದ್ಯಾರ್ಥಿನಿಯನ್ನು ಹೊತ್ತು ಕುಣಿದ ಅತಿಥಿ ಉಪನ್ಯಾಸಕ, ಇತ್ತೀಚೆಗೆ ನ್ಯಾಕ್ ಮಾನ್ಯತೆ ಭ್ರಷ್ಟಾಚಾರದಲ್ಲಿ ಪ್ರಾಧ್ಯಾಪಕಿ ಅಮಾನತು ಹೀಗೆ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಒಂಬತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ವಿದ್ಯಾರ್ಥಿಗಳದ್ದೇ ಕೊರತೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು ಮಂಜೂರಾದ 33 ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿವೆ. ಈ ಪೈಕಿ 24 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಉಳಿದ ಒಂಬತ್ತು ವಿಭಾಗಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದೆ ಬಣಗುಡುತ್ತಿದೆ. ಕೆಲ ವಿಭಾಗಗಳಲ್ಲಿ ದಾಖಲಾದ ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುತ್ತಿದ್ದು ಪರೀಕ್ಷೆಗೆ ಹಾಜರಾಗುವ ಪರಿಪಾಠ ಬೆಳೆದಿದೆ ಎನ್ನುತ್ತವೆ ವಿವಿಯ ಆಂತರಿಕ ಮೂಲಗಳು. ಯಾವುದೇ ವಿಭಾಗಕ್ಕೆ ಕನಿಷ್ಠ ವಿದ್ಯಾರ್ಥಿಗಳು ದಾಖಲಾತಿ ಪಡೆದರೆ ಮಾತ್ರ ಆ ವಿಭಾಗದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ. ಆದರೆ, ಬಹುಬೇಡಿಕೆಯ ವಾಣಿಜ್ಯ ಅಥವಾ ಎಂ.ಕಾಂ ವಿಭಾಗದ ಕೆಲವು ಕೋರ್ಸುಗಳಿಗೂ ಈ ವಿವಿಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಯಂತೆ. ಏಕೆಂದರೆ ಈ ಕೋರ್ಸುಗಳಿಗೆ ಹೆಚ್ಚಿನದಾಗಿ ವಿದ್ಯಾರ್ಥಿಗಳು ವಿವಿಗಳಿಗಿಂತ ಕಾಲೇಜುಗಳಿಗೆ ಹೋಗುತ್ತಿದ್ದಾರಂತೆ.
ಅದೇ ರೀತಿ ಸಮಾಜ ವಿಜ್ಞಾನ ವಿಭಾಗದಲ್ಲಿ ದಾಖಲಾದ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ತರಗತಿಗೆ ಹಾಜರಾಗದೆ, ಕೆಲಸಕ್ಕೆ ಹೋಗುತ್ತಿದ್ದಾರೆ. ಪರೀಕ್ಷೆಗೆ ಮಾತ್ರ ಹಾಜರಾಗುತ್ತಾರೆ ಎನ್ನಲಾಗಿದೆ. ಇನ್ನು, ಸಂಸ್ಕೃತ, ಫ್ಯಾಷನ್ ಡಿಸೈನಿಂಗ್ ಸೇರಿ ಇನ್ನು ಕೆಲವು ಕೋರ್ಸುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಬಣಗುಡುತ್ತಿವೆ. ನಿಗದಿತ ವಿದ್ಯಾರ್ಥಿಗಳು ದಾಖಲಾದರೆ ಯಾವುದೇ ವರ್ಷದಲ್ಲಿ ಆ ವಿಭಾಗಗಳನ್ನು ಆರಂಭಿಸಬಹುದು ಎನ್ನುತ್ತಾರೆ ಅಧಿಕಾರಿಗಳು. ದಾವಣಗೆರೆ ಮತ್ತು ಚಿತ್ರದುರ್ಗ ಅವಳಿ ಜಿಲ್ಲೆಗಳಲ್ಲಿ 130ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ದಾವಣಗೆರೆ ವಿಶ್ವವಿದ್ಯಾಲಯವು ಆರ್ಥಿಕವಾಗಿ ತಕ್ಕಮಟ್ಟಿನ ಸುಸ್ಥಿಯಲ್ಲಿದೆ.
ಮಂಡ್ಯ ವಿಶ್ವವಿದ್ಯಾಲಯದಲ್ಲೂ ಬೋಧಕ ಹುದ್ದೆ ಖಾಲಿ: ಶಿಕ್ಷಣ, ಸಂಶೋಧನೆಗೆ ಸಿಗದ ಆದ್ಯತೆ
ತನ್ನದೇ ಆಂತರಿಕ ಸಂಪನ್ಮೂಲಗಳಿಂದ ವಾರ್ಷಿಕ 35ರಿಂದ 40 ಕೋಟಿ ರು. ಆದಾಯ ಬರುತ್ತಿದ್ದು ವಿವಿಯ ನಿರ್ವಹಣೆಗೆ ಸಮಸ್ಯೆ ಏನೂ ಇಲ್ಲ. ಬರುವ ಆದಾಯದಲ್ಲಿ ವಿವಿ ಕ್ಯಾಂಪಸ್ ನಿರ್ವಹಣೆ, ದುರಸ್ತಿ, ಬೋಧಕ, ಬೋಧಕೇತರ ಸಿಬ್ಬಂದಿಯ ವೇತನ ಇನ್ನಿತರೆ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. ಇನ್ನು 130 ಮಂದಿ ಕಾಯಂ ಬೋಧಕ ಹಾಗೂ 35 ಬೋಧಕೇತರ ಸಿಬ್ಬಂದಿ ಇದ್ದು ಅವರ ವೇತನವನ್ನು ಸರ್ಕಾರವೇ ಭರಿಸುತ್ತಿದೆ. ತುಂಬಾ ಹಳೆಯ ವಿವಿ ಅಲ್ಲದ ಕಾರಣ ಪಿಂಚಿಣಿ ಹಣದ ಹೊರೆಯೂ ಅಷ್ಟೇನೂ ಇಲ್ಲ. ಕೋವಿಡ್ ಬಳಿಕ ವಿವಿಯಗೆ ಸರ್ಕಾರದಿಂದ ಬರುತ್ತಿದ್ದ ಬ್ಲಾಕ್ ಗ್ರಾಂಟ್ ನಿಂತುಹೋಗಿದ್ದು, ಕಾಯಂ ಬೋಧಕರಿಗೆ ಮಾತ್ರ ಸರ್ಕಾರ ವೇತನ ನೀಡುತ್ತಿದೆ. ಅಧ್ಯಯನ, ಅಧ್ಯಾಪನ, ಸಂಶೋಧನೆ, ಸಾರ್ವಜನಿಕ ಕಾರ್ಯಕ್ರಮ, ಸಾಮಾಜಿಕ ಹೊಣೆಗಾರಿಕೆ ಕಾರ್ಯ, ನಿರ್ವಹಣೆಗೆ ಸರ್ಕಾರ ನೀಡುತ್ತಿದ್ದ ಅನುದಾನ ಸ್ಥಗಿತವಾಗಿದೆ.
ಹೀಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ವಿವಿಗೆ ಸದ್ಯಕ್ಕೆ ಆರ್ಥಿಕ ಶಕ್ತಿಯೇ ಇಲ್ಲದಾಗಿದೆ. ಶೈಕ್ಷಣಿಕ ಸಮಾವೇಶ, ಸಮ್ಮೇಳನ, ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆ ಹೀಗೆ ಹಲವು ಕಾರ್ಯಕ್ರಮಗಳಿಗೆ ಹಿಂದೆಲ್ಲ ಸರ್ಕಾರದಿಂದ ಬರುತ್ತಿದ್ದ ಅನುದಾನವೂ ಈಗಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಪಾಠ, ಮಾರ್ಗದರ್ಶನ ಬಿಟ್ಟರೆ ಬೇರಾವ ಚಟುವಟಿಕೆಯೂ ವಿವಿಯಲ್ಲಿ ನಡೆಯುತ್ತಿಲ್ಲ.ತುಂಬಾ ನಿರೀಕ್ಷೆ ಹುಟ್ಟು ಹಾಕಿದ್ದ ವಿವಿಯಲ್ಲಿ ಈಗ ಗುಣಮಟ್ಟದ ಶಿಕ್ಷಣದ ಕೊರತೆ ಕಾಡಲಾರಂಭಿಸಿದೆ. ಜೊತೆಗೆ ಬೋಧಕರಿಗೆ ಸೌಲಭ್ಯ ಕಲ್ಪಿಸಿ, ಸಂಶೋಧನೆಯಲ್ಲಿ ತೊಡಗಿಸುವ ವಾತಾವರಣ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.
ಮೊದಲು ಪರಿಶಿಷ್ಟ ವಿದ್ಯಾರ್ಥಿಗಳ ಶುಲ್ಕ ಸರ್ಕಾರವೇ ನೇರ ವಿವಿಗೆ ತುಂಬುತ್ತಿತ್ತು. ಕೆಲ ವರ್ಷದಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ಹಣ ಹಾಕುತ್ತಿದೆ. ಸ್ಕಾಲರ್‌ಶಿಪ್ ರೂಪದಲ್ಲಿ ಬರುವ ಹಣ ಬಹುತೇಕ ವಿದ್ಯಾರ್ಥಿಗಳು ವಿವಿಗೆ ಕಟ್ಟುತ್ತಿಲ್ಲ. ಸಂಶೋಧನೆಗೆ ಸರ್ಕಾರ, ಯುಜಿಸಿ, ಐಸಿಎಸ್ಎಸ್ಆರ್ ಬೆಂಬಲ ಸಿಗುತ್ತಿಲ್ಲ. ಸರ್ಕಾರದಿಂದ ಸಿಬ್ಬಂದಿ ಸಂಬಂಳದ ಭಾಗದ ಹಣ ಬಿಟ್ಟರೆ ಬೇರೆ ಯಾವುದಕ್ಕೂ ದುಡ್ಡು ಬರುತ್ತಿಲ್ಲ. ಹೀಗಾಗಿ ವಿವಿ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಸದ್ಯಕ್ಕೆ ಆದಾಯ-ಖರ್ಚು ಸಮವಾಗುತ್ತಿದೆ ಅಷ್ಟೇ.
ಅವಳಿ ಜಿಲ್ಲೆಯಲ್ಲಿ ದಾವಿವಿಗಿದೆ ಭಾರೀ ಆಸ್ತಿ: ಕುವೆಂಪು ವಿವಿಯಿಂದ ಬೇರ್ಪಟ್ಟು 2009ರಲ್ಲಿ ರಚನೆಯಾದ ದಾವಣಗೆ ವಿವಿಯು ಜಿಲ್ಲೆಯ ತೋಳಹುಣಸೆ ಬಳಿ ಸುಮಾರು 74 ಎಕರೆಯಲ್ಲಿ ಸ್ಥಾಪನೆಯಾಗಿರುವ ವಿವಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ದಿ. ರಾಜನಹಳ್ಳಿ ಹನುಮಂತಪ್ಪ ಕುಟುಂಬ ಸೇರಿ ಅನೇಕ ದಾನಿಗಳು ಭೂದಾನ ಮಾಡಿ ವಿವಿ ಸ್ಥಾಪನೆಗೆ ಸ್ಪಂದಿಸಿದ್ದರು. ಜೊತೆಗೆ ದಾವಣಗೆರೆ ತಾಲೂಕಿನ ಉಳುಪಿನಕಟ್ಟೆ ಬಳಿ 72 ಎಕರೆ ಜಾಗ ಸರ್ಕಾರ ನೀಡಿದೆ. ಚಿತ್ರದುರ್ಗದ ದೊಡ್ಡ ರಂಗವ್ವನಹಳ್ಳಿ ಸಮೀಪದ 30 ಎಕರೆ ಕ್ಯಾಂಪಸ್ ಸಹ ದಾವಿವಿ ಹೊಂದಿದೆ. ಉಭಯ ಜಿಲ್ಲೆಗಳಲ್ಲಿ 45 ಸಾವಿರ ಪದವಿ ವಿದ್ಯಾರ್ಥಿಗಳು, 2800 ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದಾವಣಗೆರೆ-ಚಿತ್ರದುರ್ಗ ಜಿಲ್ಲೆಯ 130 ಬಿಇಡಿ ಸೇರಿ ಪದವಿ ಕಾಲೇಜು ದಾವಿವಿ ಜೊತೆಗೆ ಸಂಲಗ್ನ (ಅಫಿಲಿಯೇಷನ್) ಗೊಂಡಿವೆ.
ಕ್ಯಾಬಿನ್, ಕುರ್ಚಿ, ಸಂಶೋಧನೆಗೆ ಲ್ಯಾಬ್ ಇಲ್ಲ: ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕಲಿಸಲು ವಿಜ್ಞಾನ ವಿಭಾಗಕ್ಕೆ ಹಣವಿಲ್ಲ. ಹಿಂದೆ ವರ್ಷಕ್ಕೆ ₹2 ಲಕ್ಷ ನೀಡುತ್ತಿದ್ದ ಕಡೆ ಈಗ ಅದನ್ನು ₹1.5 ಲಕ್ಷಕ್ಕೆ ಇಳಿಸಲಾಗಿದೆ. ವಿಜ್ಞಾನ ಪ್ರಯೋಗಕ್ಕೆ ಕನಿಷ್ಠ ಪ್ರತಿ ವಿಭಾಗಕ್ಕೆ ₹5-₹10 ಲಕ್ಷ ಬೇಕು. ಸಂಶೋಧನಾ ಸಾಮಗ್ರಿ, ಯಂತ್ರೋಪಕರಣ ಕೊರತೆ ಇದೆ. ವಿವಿ ಆರಂಭವಾದಾಗ ಇದ್ದ ಮೈಕ್ರೋಸ್ಕೋಪ್‌ಗಳೇ ಇಂದಿಗೂ ವಿಜ್ಞಾನ ವಿಭಾಗದಲ್ಲಿ ಬಳಸಲ್ಪಡುತ್ತಿವೆ. ಹೊಸ ಮೈಕ್ರೋ ಸ್ಕೋಪ್ ತರಿಸುವುದಕ್ಕೂ ಅನುದಾನವಿಲ್ಲ. ಪುಸ್ತಕ ಪ್ರಕಟಣೆಗೂ ಅವಕಾಶ ಇಲ್ಲ. ಸರ್ಕಾರದಿಂದ ಪ್ರತಿ ವರ್ಷ ಬರುತ್ತಿದ್ದ ಅಭಿವೃದ್ಧಿ ಅನುದಾನ ₹5 ಕೋಟಿ ಕೊರೋನಾ ಬಳಿಕ ನಿಂತು ಹೋಗಿದೆ. ಕಟ್ಟಡಗಳ ಸುಣ್ಣಬಣ್ಣ, ಹೊಸ ಬೋಧಕರಿಗೆ ಕುಳಿತುಕೊಳ್ಳಲು ಕ್ಯಾಬಿನ್, ಕುರ್ಚಿ, ಸಂಶೋಧನೆಗೆ ಲ್ಯಾಬ್ ಇಲ್ಲದ ಸ್ಥಿತಿಯಲ್ಲಿ ದಾವಿವಿ ನಡೆಯುತ್ತಿದೆ.
ಕನಿಷ್ಠ ಸೌಲಭ್ಯಗಳೂ ಇಲ್ಲದೆ ಸೊರಗುತ್ತಿದೆ ಕೊಪ್ಪಳ ವಿವಿ: ಕುಲಪತಿ ಸಂಚಾರಕ್ಕೆ ಕಾರೂ ಇಲ್ಲ!
ದಾವಣಗೆರೆ ವಿವಿ ಸ್ಥಾಪನೆಯಾದ 2009ರಿಂದ ಪ್ರಗತಿಯತ್ತಲೇ ಸಾಗಿದೆ. ಮೂಲ ಸೌಕರ್ಯಗಳ ವಿಚಾರದಲ್ಲಷ್ಟೇ ಅಲ್ಲ, ಸಂಶೋಧನಾ ವಿಚಾರದಲ್ಲೂ ದಾವಿವಿ ಮುಂದಿದೆ. ರಾಷ್ಟ್ರಮಟ್ಟದಲ್ಲಿ ದಾವಣಗೆರೆ ವಿವಿ ಮೊದಲ 100ನೇ ರ್‍ಯಾಂಕಿಂಗ್ ಒಳಗಿದೆ. 130 ರೆಗ್ಯುಲರ್ ಬೋಧಕರಿದ್ದು, 20 ಮಂದಿ ಸಹಾಯಕ ಬೋಧಕ (ಅತಿಥಿ ಉಪನ್ಯಾಸಕ)ರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಅನುದಾನ ಬಂದಿಲ್ಲವೆಂಬುದನ್ನು ಬಿಟ್ಟರೆ ಸ್ವಂತ ಆದಾಯ ಮೂಲದಿಂದಲೇ ದಾವಿವಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
- ಪ್ರೊ.ಬಿ.ಡಿ.ಕುಂಬಾರ ಕುಲಪತಿ, ದಾವಣಗೆರೆ ವಿವಿ