Davanagere: ಹೊಸ ರಾಷ್ಟ್ರೀಯ ಸಹಕಾರ ನೀತಿ 2025ರ ಬಗ್ಗೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಪ್ರಶ್ನೆ

Kannadaprabha News, Ravi Janekal |   | Kannada Prabha
Published : Mar 11, 2026, 11:46 AM IST
Davanagere MP Prabha Mallikarjun questions about the new National Cooperative Policy 2025

ಸಾರಾಂಶ

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಹೊಸ ರಾಷ್ಟ್ರೀಯ ಸಹಕಾರ ನೀತಿ-2025ರ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದು, ಅದರ ಸ್ತಂಭಗಳು, ಉದ್ದೇಶಗಳು ಮತ್ತು ಸಮಾಲೋಚನಾ ಪ್ರಕ್ರಿಯೆಗಳ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.

ದಾವಣಗೆರೆ (ಮಾ.11): ರಾಷ್ಟ್ರೀಯ ಸಹಕಾರ ನೀತಿ (NCP)–2025 ಅನ್ನು 24 ಜುಲೈ 2025ರಂದು ಆರಂಭಿಸಲಾಗಿದೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶಿಯಾಗುವ ಈ ನೀತಿಯಲ್ಲಿ 6 ತಂತ್ರಾತ್ಮಕ ಸ್ತಂಭಗಳು, 16 ಉದ್ದೇಶಗಳು ಮತ್ತು 83 ಶಿಫಾರಸುಗಳು ಒಳಗೊಂಡಿವೆ. ರಾಜ್ಯಗಳು ತಮ್ಮ ಸಹಕಾರ ನೀತಿಗಳನ್ನು ಈ ಹೊಸ ನೀತಿಗೆ ಅನುಗುಣವಾಗಿ ರೂಪಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೊಸ ರಾಷ್ಟ್ರೀಯ ಸಹಕಾರ ನೀತಿ ಕುರಿತು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸಹಕಾರ ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ದರು. ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತಂದಿರುವುದೇ, ಅದರ ಅನುಷ್ಠಾನ ಮಾರ್ಗಸೂಚಿಗಳು, ಕಾಲಮಿತಿಗಳು ಹಾಗೂ ಅಳೆಯಬಹುದಾದ ಗುರಿಗಳನ್ನು ಪ್ರಕಟಿಸಿರುವರೇ ಎಂಬುದರ ಕುರಿತು ಮಾಹಿತಿ ಕೇಳಿದ್ದಾರೆ. ಜೊತೆಗೆ ಈ ನೀತಿ ರೂಪಿಸುವ ವೇಳೆ ರಾಜ್ಯ ಸರ್ಕಾರಗಳು ಮತ್ತು ಸಹಕಾರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ, ಸಹಕಾರ ಸಂಘಗಳ ಆಡಳಿತ, ಲೆಕ್ಕಪರಿಶೋಧನೆ, ಸಾಲ ಸೌಲಭ್ಯ ಮತ್ತು ಡಿಜಿಟಲೀಕರಣದಲ್ಲಿ ಸುಧಾರಣೆಗಳಾಗಿದೆಯೇ ಎಂಬ ಬಗ್ಗೆ ವಿವರ ಕೇಳಿದ್ದು, ಕೇಂದ್ರ ಸರ್ಕಾರ ಉತ್ತರಿಸಿದೆ.

ರಾಷ್ಟ್ರೀಯ ಸಹಕಾರ ನೀತಿಯಡಿ ಮುಂದಿನ 10 ವರ್ಷಗಳ ಅಭಿವೃದ್ಧಿ ಗುರಿಗಳನ್ನು ಆರು ಪ್ರಮುಖ ತಂತ್ರಾತ್ಮಕ ಸ್ತಂಭಗಳಡಿ ನಿಗದಿಪಡಿಸಲಾಗಿದೆ. ಅವುಗಳಲ್ಲಿ ಸಹಕಾರ ಚಳವಳಿಯ ಮೂಲಾಧಾರ ಬಲಪಡಿಸುವುದು, ಚೈತನ್ಯಮಯ ಸಹಕಾರ ಪರಿಸರ ನಿರ್ಮಾಣ, ಸಹಕಾರ ಸಂಸ್ಥೆಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು, ಸಮಾವೇಶಾತ್ಮಕ ಅಭಿವೃದ್ಧಿ ಮತ್ತು ವ್ಯಾಪ್ತಿ ವಿಸ್ತರಣೆ, ಹೊಸ ಹಾಗೂ ಉದಯೋನ್ಮುಖ ಕ್ಷೇತ್ರಗಳಿಗೆ ಪ್ರವೇಶ ಮತ್ತು ಯುವಪೀಳಿಗೆಯನ್ನು ಸಹಕಾರ ಕ್ಷೇತ್ರದತ್ತ ಆಕರ್ಷಿಸುವುದು ಸೇರಿವೆ ಎಂದು ತಿಳಿಸಲಾಗಿದೆ.

ನೀತಿ ರೂಪಿಸುವ ಸಂದರ್ಭದಲ್ಲಿ ರಾಜ್ಯಗಳು ಮತ್ತು ಹಿತಾಸಕ್ತಿಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಸುರೇಶ್ ಪ್ರಭು ಅಧ್ಯಕ್ಷತೆಯಲ್ಲಿ 48 ಸದಸ್ಯರ ಸಮಿತಿ ರಚಿಸಲಾಗಿದ್ದು, 17 ಸಭೆಗಳು ಹಾಗೂ 4 ಪ್ರಾದೇಶಿಕ ಕಾರ್ಯಾಗಾರಗಳ ಮೂಲಕ ಒಟ್ಟು 648 ಸಲಹೆಗಳು ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದೇ ವೇಳೆ, ಈ ನೀತಿ ಇತ್ತೀಚೆಗೆ ಜಾರಿಗೆ ಬಂದಿರುವುದರಿಂದ ಅದರ ಸ್ಪಷ್ಟ ಪರಿಣಾಮಗಳನ್ನು ಅಳೆಯಲು ಇನ್ನೂ ಸಮಯ ಬೇಕಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೀತಿಯ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸಲು 'Implementation Cell' ಹಾಗೂ 'Policy Implementation & Monitoring Committee' ರಚಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ದಾವಣಗೆರೆ: ದೆಹಲಿಯ ಸಂಸತ್ ಭವನದ ಮಕರ ದ್ವಾರದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭಾಗವಹಿಸಿದ್ದರು.ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಆತಂಕ ಉಂಟುಮಾಡುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ತೈಲಗಳ ಬೆಲೆಗಳಲ್ಲಿ ಏರಿಕೆ ಸಂಭವಿಸುವ ಸಾಧ್ಯತೆ ಇದೆ. ಆ ಪ್ರದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಸಂಕಷ್ಟದ ಪರಿಸ್ಥಿತಿ ಎದುರಿಸುವ ಭೀತಿ ವ್ಯಕ್ತವಾಗುತ್ತಿದೆ. ಈ ಮಹತ್ವದ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಮತ್ತು ಸಮರ್ಪಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನೀತಿಗಳು ಮತ್ತು ಕ್ರಮಗಳನ್ನು ಪ್ರಶ್ನಿಸುವುದು, ಅವುಗಳ ಬಗ್ಗೆ ಚರ್ಚೆ ನಡೆಸುವುದು ಹಾಗೂ ಪರ್ಯಾಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ವಿರೋಧ ಪಕ್ಷಗಳ ಮೂಲಭೂತ ಜವಾಬ್ದಾರಿಯಾಗಿದೆ. ವಿರೋಧ ಪಕ್ಷದ ಧ್ವನಿಯನ್ನು ತಡೆದು ಮೌನಗೊಳಿಸುವ ಪ್ರಯತ್ನಗಳು ನಡೆದರೆ ಅದು ಜನರ ಧ್ವನಿಯನ್ನೇ ಕುಂಠಿತಗೊಳಿಸುವಂತಾಗುತ್ತದೆ ಎಂದು ಸಂಸದರು ಪ್ರತಿಭಟನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.-

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಗ ಧಗನೆ ಹೊತ್ತಿ ಉರಿದ ಹೊಸಪೇಟೆಯ ತಾಲೂಕು ಪಂಚಾಯತಿ : ಹಲವು ದಾಖಲೆಗಳು ಬೆಂಕಿಗಾಹುತಿ
ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ: ಗೃಹಸಚಿವ ಪರಮೇಶ್ವರ್ ಭರವಸೆ