
ಈ ಬಗ್ಗೆ ಸಿಎಂ ಮನವೊಲಿಸುತ್ತೇನೆ: ಗೃಹ ಸಚಿವ
ವಿಧಾನ ಪರಿಷತ್ತು (ಮಾ.11): ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರಿಗೆ ಕೊಡುತ್ತಿದ್ದ ಮಾಸಿಕ ಪಿಂಚಣಿಯನ್ನು 10 ಸಾವಿರದಿಂದ 50 ಸಾವಿರ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಮನವೊಲಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ಮಂಗಳವಾರ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರಿಗೆ ಸಿಗಬೇಕಾದ ನೆರವು ಮತ್ತು ಪರಿಹಾರ ಕಳೆದ 10 ವರ್ಷಕ್ಕೂ ಹೆಚ್ಚು ಅವಧಿಯಿಂದ ಸಿಗದಿರುವ ಬಗ್ಗೆ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಸದನದ ಗಮನ ಸೆಳೆದರು. ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಹೇಮಲತಾ ನಾಯಕ್, ಭಾರತಿಶೆಟ್ಟಿ, ಕಾಂಗ್ರೆಸ್‌ನ ಉಮಾಶ್ರೀ ಅವರು ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಗೃಹಸಚಿವರು, ಆ್ಯಸಿಡ್ ದಾಳಿಗೆ ಒಳಗಾದ ಎಲ್ಲಾ ಮಹಿಳೆಯರಿಗೆ 2022 ಏ.1ರಿಂದ ಮಾಸಿಕ 10 ಸಾವಿರ ರು.ಪಿಂಚಣಿಯನ್ನು ಫಲಾನುಭವಿಗಳಿಗೆ ಕೊಡಲಾಗುತ್ತಿದ್ದು, 2025ರ ಡಿಸೆಂಬರ್‌ನಲ್ಲಿ ಒಟ್ಟು 59 ಫಲಾನುಭವಿಗಳಿಗೆ ಪಿಂಚಣಿ ಪಾವತಿ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಇರುವ 169 ಮಂದಿ ಆ್ಯಸಿಡ್ ಸಂತ್ರಸ್ತೆಯರಿಗೆ ಮಾಸಿಕ 50 ಸಾವಿರ ರು.ಪಿಂಚಣಿ ಕೊಡುವಂತೆ ಮುಖ್ಯಮಂತ್ರಿಯವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೊಂದಿಗೆ ಸಮಾಲೋಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.
ಆ್ಯಸಿಡ್ ಸಂತ್ರಸ್ತೆಯರಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಥವಾ ರಾಜೀವ್‌ಗಾಂಧಿ ವಸತಿ ನಿಗಮ ಸೇರಿ ಇತರೆ ಮಂಡಳಿಗಳಲ್ಲಿ ಚಾಲ್ತಿಯಿರುವ ವಸತಿ ಯೋಜನೆಗಳಲ್ಲಿ 169 ಮಂದಿಗೂ ಉಚಿತವಾಗಿ ಮನೆಗಳನ್ನು ಕೊಡಲು ಏರ್ಪಾಡು ಮಾಡುತ್ತೇವೆ ಎಂದರು. ಜತೆಗೆ, ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಮೂಲಕ 5 ಲಕ್ಷ ರು.ಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತಿತ್ತು. ಈ ಮೊತ್ತವನ್ನು ಸಾಲವೆಂದು ಕೊಡದೆ ಅನುದಾನವಾಗಿ ಕೊಡಲು ಕ್ರಮ ತೆಗೆದುಕೊಳ್ಳುತ್ತೇವೆ. ಹಾಗೆಯೇ ಹತ್ತಾರು ವರ್ಷಗಳ ಹಿಂದೆ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರಿಗೆ ಪರಿಹಾರ ಪಡೆಯಲು ಅಗತ್ಯವಿರುವ ಎಫ್‌ಐಆರ್ ಸೇರಿ ಇತರೆ ದಾಖಲೆಗಳನ್ನು ನೀಡುವುದನ್ನು ಸರಳೀಕರಣಗೊಳಿಸುತ್ತೇವೆ ಎಂದರು.
ಆ್ಯಸಿಡ್ ದಾಳಿಗೊಳಗಾದವರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ, ಮಹತ್ವದ ಚರ್ಚೆಗೆ ಮೇಲ್ಮನೆ ಸಾಕ್ಷಿಯಾಗಿದೆ. ಹೀಗಾಗಿ ಆ್ಯಸಿಡ್ ದಾಳಿ ಪ್ರಕರಣಗಳ ಬಗ್ಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ನಿರ್ಭಯಾ ಮಾದರಿಯಲ್ಲಿ ಶೀಘ್ರಗತಿ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಪ್ರಯತ್ನಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದರು.
2 ಲಕ್ಷ ವರೆಗೆ ಪರಿಹಾರಕ್ಕೆ ಸಿದ್ಧ: ಲಾಡ್
ಆ್ಯಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಗಾಯದ ಪ್ರಮಾಣದ ಆಧಾರದಲ್ಲಿ ಅಸಂಘಟಿತ ಮಂಡಳಿಯಿಂದ 2 ಲಕ್ಷದ ವರೆಗೆ ಪರಿಹಾರ ಕೊಡಲು ಇಲಾಖೆ ಸಿದ್ಧವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ