
ಬೆಂಗಳೂರು (ಮಾ.11): ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾ೧ಚಾರ ಹಾಗೂ ಜೀವ ಬೆದರಿಕೆ ಹಾಕಿದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ದಾಖಲಿಸಿದ್ದ ದೂರು ಸಂಬಂಧ ನಟಿ ರಮ್ಯಾ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದರು.
ಪ್ರಕರಣ ಸಂಬಂಧ ರಮ್ಯಾ ದಾಖಲಿಸಿರುವ ಪ್ರಕರಣದ ವಿಚಾರಣೆ ಮಂಗಳವಾರದಿಂದ ನಗರದ 46ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟಲ್ಲಿ ಆರಂಭಗೊಂಡಿತು. ನ್ಯಾಯಾಧೀಶ ರಾಜೀವ್ ಗೌಡ ಅವರು ವಿಚಾರಣೆ ನಡೆಸಿದರು. ರಮ್ಯಾ ಹಾಗೂ ಪ್ರಕರಣದ 12 ಆರೋಪಿಗಳು ಸಹ ಮಂಗಳವಾರ ಕೋರ್ಟ್‌ಗೆ ಹಾಜರಾಗಿದ್ದರು.
ಪ್ರಕರಣದಲ್ಲಿ ಆರೋಪಿಗಳಿಂದ ಅತ್ಯಾ೧ಚಾರ ಮತ್ತು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಇನ್-ಕ್ಯಾಮಾರಾ ಪ್ರೊಸೀಡಿಂಗ್ಸ್ (ಗೌಪ್ಯ ವಿಚಾರಣೆ) ನಡೆಸಲು ನ್ಯಾಯಾಧೀಶರು ನಿರ್ಧರಿಸಿದರು. ಅದರಂತೆ ರಮ್ಯಾ, ಆರೋಪಿಗಳು ಮತ್ತವರಿಗೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದವರನ್ನು ಕೋರ್ಟ್‌ನಿಂದ ಹೊರ ಕಳುಹಿಸಿ, ರಮ್ಯಾ ಅವರ ಸಾಕ್ಷ್ಯ ದಾಖಲಿಸಿಕೊಂಡರು. ಬಳಿಕ ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿದರು.
ವಿಚಾರಣೆ ನಂತರ ಕೋರ್ಟ್ ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ಇಂದು ನನ್ನ ಸಾಕ್ಷ್ಯ ದಾಖಲಿಸಬೇಕಿತ್ತು. ಅದಕ್ಕಾಗಿ ಕೋರ್ಟ್‌ಗೆ ಹಾಜರಾಗಿದ್ದೆ. ಸಾಕ್ಷ್ಯ ದಾಖಲಿಸಿದೆ. ಆರೋಪಿಗಳನ್ನು ನೋಡಿದರೆ, ಬೇಸರ ಆಗುತ್ತದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುವವರಿಗೆ ಭಯ ಬರಬೇಕು ಎಂಬ ಕಾರಣಕ್ಕೆ ದೂರು ದಾಖಲಿಸಿದೆ. ಇಂಥ ವಿಚಾರ ಸುಮ್ಮನೆ ಬಿಟ್ಟರೆ ಮುಂದೆ ಜನ ಅದೇ ಚಾಳಿ ಮುಂದುವರಿಸುತ್ತಾರೆ. ಇಂಥ ಬೆಳವಣಿಗೆ ತಡೆಯಲು ಎಲ್ಲ ಹೆಣ್ಣುಮಕ್ಕಳ ಪರ ಕೇಸ್ ಮುಂದುವರಿಸುತ್ತೇನೆ ಎಂದರು
ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಮತ್ತು ಬೆದರಿಕೆ ಹಾಕಿದ ಆರೋಪ ಸಂಬಂಧ ಸೈಬರ್ ಠಾಣಾ ಪೊಲೀಸರಿಗೆ ರಮ್ಯಾ 2025ರಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬೆಂಗಳೂರಿನ ಸೈಬರ್ ಪೊಲೀಸರು 11 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ