
ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿಗಳ (ಎಲ್‌ಕೆಜಿ-ಯುಕೆಜಿ) ಮಕ್ಕಳಿಗೂ ಡಿ.1ರಿಂದ ಬೆಳಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟ ಮತ್ತು ಮೊಟ್ಟೆ, ಬಾಳೆಹಣ್ಣು ವಿತರಿಸಲು ಅನುಮತಿ ನೀಡಿ ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಕೆಪಿಎಸ್, ಪಿಎಂಶ್ರೀ, ಮ್ಯಾಗ್ನೇಟ್ ಶಾಲೆಗಳು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರಾರಂಭಿಸಲಾಗಿರುವ ಶಾಲೆಗಳು ಸೇರಿ 2018ರಿಂದ ಪ್ರಾರಂಭವಾಗಿರುವ ಎಲ್ಲ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಮಕ್ಕಳಿಗೂ ಕ್ಷೀರಭಾಗ್ಯ ಯೋಜನೆಯಡಿ ಪ್ರತಿ ದಿನ ರಾಗಿ ಮಾಲ್ಟ್ ಮಿಶ್ರಿತ ಹಾಲು, ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಬಿಸಿಯೂಟ ಮತ್ತು ಪೂರಕ ಪೌಷ್ಟಿಕ ಆಹಾರ ಪೂರೈಕೆ ಯೋಜನೆಯಡಿ ವಾರದಲ್ಲಿ ಆರು ದಿನ ಮೊಟ್ಟೆ/ಬಾಳೆಹಣ್ಣು ವಿತರಿಸಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದೆ.
ಕೆಪಿಎಸ್ ಶಾಲೆಗಳಲ್ಲಿ ಈವರೆಗೆ ನೀಡುತ್ತಿದ್ದ ಬೆಳಗಿನ ಉಪಹಾರವನ್ನು ರದ್ದುಪಡಿಸಿ ಪೂರಕ ಪೌಷ್ಟಿಕ ಆಹಾರ ನೀಡಬೇಕು. ಒಂದು ಮಗುವಿಗೆ ಭರಿಸಬೇಕಾದ ಅಡುಗೆ ತಯಾರಿಕಾ ವೆಚ್ಚ ದಿನಕ್ಕೆ 6.78 ರು. ನಿಗದಿ ಪಡಿಸಲಾಗಿದೆ. ಹಾಗೆಯೇ ತಕ್ಷಣವೇ ಮಕ್ಕಳ ಇಂದೀಕರಣ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯ 1,105 ಶಾಲೆಗಳು, 126 ಪಿಎಂಶ್ರೀ ಶಾಲೆಗಳು, ಕೆಕೆಆರ್ ಡಿಬಿಯ 1,126 ಶಾಲೆಗಳು, 1,699 ಮ್ಯಾಗ್ನೆಟ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಇತ್ತೀಚೆಗೆ ಆದೇಶ ನೀಡಿತ್ತು. ಇದರ ಜತೆಗೆ ಸುಮಾರು 300 ಕೆಪಿಎಸ್ ಶಾಲೆಗಳಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳು ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ