Bengaluru: ಜೀವನಾಂಶದ ಒಪ್ಪಂದ ಮುರಿದ ಮಗಳು: ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪೇನು?

Published : Aug 03, 2026, 07:47 AM IST
High Court

ಸಾರಾಂಶ

ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯೊಂದಿಗೆ ರಾಜೀ ಒಪ್ಪಂದ ಮಾಡಿಕೊಂಡು ತಂದೆಯಿಂದ ಶಾಶ್ವತ ಜೀವನಾಂಶ ಪಡೆದಿದ್ದ ಮಗಳು, ಪ್ರಾಪ್ತ ವಯಸ್ಕಳಾದ ಮೇಲೆ ಮತ್ತೆ ಜೀವನಾಂಶ ಕೋರಲು ಸಾಧ್ಯವಿಲ್ಲ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಈ ಹಿಂದಿನ ರಾಜೀ ಒಪ್ಪಂದವೇ ಅಂತಿಮ ಎಂದು ಮಹತ್ವದ ತೀರ್ಪು ನೀಡಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು: ಅಪ್ತಾಪ್ತ ಮಗಳು ತಾಯಿಯೊಂದಿಗೆ ಜಂಟಿಯಾಗಿ ನ್ಯಾಯಾಲಯದಲ್ಲಿ ರಾಜೀ ಒಪ್ಪಂದ ಮಾಡಿಕೊಂಡು ತಂದೆಯಿಂದ ಶಾಶ್ವತ ಜೀವನಾಂಶ ಪಡೆದ ನಂತರ ಪ್ರಾಪ್ತ ವಯಸ್ಕಳಾದ ಮೇಲೆ ತಂದೆಯಿಂದ ಪುನಃ ಜೀವನಾಂಶ ಕೋರಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣವೊಂದರಲ್ಲಿ ತಾಯಿ ವಿಚ್ಛೇದನ ಪಡೆದ ಸಂದರ್ಭದಲ್ಲಿ ತಂದೆಯಿಂದ ಮದುವೆ ಮತ್ತು ಶೈಕ್ಷಣಿಕ ಖರ್ಚು-ವೆಚ್ಚಕ್ಕಾಗಿ 2.80 ಲಕ್ಷ ರು. ಪಡೆದಿದ್ದ ಅಪ್ರಾಪ್ತ ಮಗಳಿಗೆ, ಆಕೆ ವಯಸ್ಕಳಾದ ಮೇಲೆ ಪುನಃ ಮಾಸಿಕ 5 ಸಾವಿರ ರು. ಜೀವನಾಂಶ ಪಾವತಿಸುವಂತೆ ತಂದೆಗೆ ಸೂಚಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್ ಈ ಆದೇಶ ಮಾಡಿದೆ.

ಮೈಸೂರಿನ ಒಂದನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2026ರ ಏ.6ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹರೀಶ್ ಎಂಬುವವರು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಪಿ.ಶ್ರೀಸುಧಾ ಅವರ ಪೀಠ, ಪತ್ನಿಗೆ ವಿಚ್ಛೇದನ ನೀಡುವ ವೇಳೆ ಪತ್ನಿಗೆ ಒಂದು ಲಕ್ಷ ಹಾಗೂ ಅಪ್ರಾಪ್ತಳಾಗಿದ್ದ ಮಗಳಿಗೆ ಶೈಕ್ಷಣಿಕ ಮತ್ತು ಮದುವೆ ಖರ್ಚಿಗೆಂದು 2.8 ಲಕ್ಷ ಶಾಶ್ವತ ಜೀವನಾಂಶ ಪಾವತಿಸಿದ್ದಾರೆ. ಜೀವನಾಂಶ ಪಡೆಯುವ ಬಗ್ಗೆ ತಾಯಿ-ಅಪ್ರಾಪ್ತ ಮಗಳು ರಾಜೀಗೆ ಒಪ್ಪಿ ಕೌಟುಂಬಿಕ ಜಂಟಿ ಮೆಮೊ ಸಹ ಸಲ್ಲಿಸಿದ್ದಾರೆ. ಹಾಗಾಗಿ, ವಯಸ್ಕರಾದ ನಂತರ ಪುತ್ರಿ ಮತ್ತೆ ರಾಜಿ ಒಪ್ಪಂದ ಅನ್ವಯಿಸುವುದಿಲ್ಲ ಎಂದು ತಂದೆಯಿಂದ ಜೀವನಾಂಶ ಕೋರಲು ಅವಕಾಶವಿಲ್ಲ ಎಂದು ಆದೇಶಿಸಿದೆ.

ಅಲ್ಲದೆ, ಮಗಳು ಸಂಪಾದನೆ ಮಾಡಲು ಅರ್ಹ ಮತ್ತು ಸಮರ್ಥರಾಗಿದ್ದಾರೆ. ಹಾಗಾಗಿ, ಮಗಳಿಗೆ ಮಾಸಿಕ 5 ಸಾವಿರ ರು. ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ 2026ರ ಏ.6ರಂದು ಆದೇಶ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಅಪ್ರಾಪ್ತೆಯಾಗಿದ್ದಾಗ ಒಪ್ಪಂದ

ನನಗೆ 16-17ನೇ ವರ್ಷವಿದ್ದಾಗ ಪೋಷಕರ ನಡುವೆ ರಾಜೀ ಸಂಧಾನ ಏರ್ಪಟ್ಟಿದೆ. ರಾಜೀ ಸಂಧಾನ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶ ನನಗೆ ಅನ್ವಯಿಸುವುದಿಲ್ಲ. ತಂದೆಯು ಶೈಕ್ಷಣಿಕ ಮತ್ತು ವಿವಾಹದ ಖರ್ಚಿಗೆ ಹಣ ಪಾವತಿಸಿದ್ದಾರೆ. ಆದರೆ, ಜೀವನ ಪೋಷಣೆಗೆ ಹಣ ಪಾವತಿಸಿಲ್ಲ ಎಂದು ಅರ್ಜಿಯಲ್ಲಿ ಪುತ್ರಿ ಆಕ್ಷೇಪಿಸಿದ್ದರು.

ಅಲ್ಲದೆ, ನ್ಯಾಯಾಲಯದ ಅನುಮತಿಯಿಲ್ಲದೆ ಅಪ್ರಾಪ್ತೆಯ ವಯಸ್ಕರ ಪರವಾಗಿ ಸ್ನೇಹಿತರ ಅಥವಾ ಪೋಷಕರು ಮಾಡಿಕೊಂಡು ಯಾವುದೇ ರಾಜೀಯನ್ನು ಪ್ರಾಪ್ತ ವಯಸ್ಸು ತಲುಪಿದ ನಂತರ ಯಾರಾದರೂ ಪ್ರಶ್ನಿಸಬಹುದು ಎಂಬುದು ಕಾನೂನಿನ ತತ್ವ. ಆದ್ದರಿಂದ ನಾನು ವಿವಾಹವಾಗುವವರೆಗೆ ಅಥವಾ ಲಾಭದಾಯಕ ಉದ್ಯೋಗ ಪಡೆಯುವವರೆಗೆ ಅಥವಾ ಜೀವನೋಪಾಯಕ್ಕೆ ಗಳಿಸಲು ಪ್ರಾರಂಭಿಸುವವರೆಗೆ ತಂದೆ ನನಗೆ ಜೀವನಾಂಶ ನೀಡಬೇಕಿದೆ ಎಂದು ಅರ್ಜಿಯಲ್ಲಿ ಪುತ್ರಿ ವಾದಿಸಿದ್ದರು. ಈ ವಾದ ಪರಿಗಣಿಸಿದ್ದ ಕೌಟುಂಬಿಕ ನ್ಯಾಯಾಲಯ, ಮಗಳಿಗೆ ಮಾಸಿಕ 5 ಸಾವಿರ ರು. ಜೀವನಾಂಶ ಪಾವತಿಸುವಂತೆ ಹರೀಶ್ ಗೆ 2026ರ ಏ.6ರಂದು ಆದೇಶಿಸಿತ್ತು. ಅದನ್ನು ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಹರೀಶ್ ಪರ ವಕೀಲ ಸಿ.ಎನ್. ರಾಜು ವಾದ ಮಂಡಿಸಿ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಸೆಕ್ಷನ್ 125 ಪ್ರಕಾರ 18 ವರ್ಷ ತುಂಬಿದ ನಂತರ ಅರ್ಜಿದಾರರಿಂದ ಜೀವನಾಂಶ ಪಡೆಯಲು ಮಗಳಿಗೆ ಅವಕಾಶವಿರುವುದಿಲ್ಲ. 18 ವರ್ಷ ತುಂಬಿದರೂ ಆಕೆ ಅಂಗವಿಕಲರಾಗಿದ್ದರೆ ಜೀವನಾಂಶ ಪಡೆಯಲು ಅರ್ಹರಾಗಿರುತ್ತಾಳೆ. ಮಗಳು ಯಾವ ಅಂಗವೈಕಲ್ಯದಿಂದ ಬಳಲುತ್ತಿಲ್ಲ. ಹಾಗಾಗಿ, ಮಗಳು ಜೀವನಾಂಶ ಪಡೆಯಲು ಅರ್ಹವಾಗಿಲ್ಲ. ಮೇಲಾಗಿ, ಜೀವನಾಂಶ ಪಾವತಿಸಲು ಅರ್ಜಿದಾರರಿಗೆ ಆದಾಯ ಮೂಲ ಇಲ್ಲವಾಗಿದ್ದು, ಕೌಟುಂಬಿಕ ನ್ಯಾಯಾಲಯ ಆದೇಶ ರದ್ದುಪಡಿಸಬೇಕು" ಎಂದು ಕೋರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿಯ) 0 ಸೆಕ್ಷನ್ 125 ರ ಸೆಕ್ಷನ್ 125 ಪ್ರಕಾರ, ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ಒದಗಿಸುವುದು ತಂದೆಯ ಪ್ರಾಥಮಿಕ ಜವಾಬ್ದಾರಿ. ಮಗು ಪ್ರೌಢಾವಸ್ಥೆಗೆ ಬಂದಾಗ (18 ವರ್ಷ) ಅದು ಕೊನೆಗೊಳ್ಳುತ್ತದೆ, ಆದರೆ, ಮಗುವಿನ ಸಂದರ್ಭ ಮತ್ತು ಲಿಂಗವನ್ನು ಅವಲಂಬಿಸಿ ಕಾನೂನು ನಿರ್ದಿಷ್ಟ ವಿನಾಯಿತಿಗಳನ್ನು ನೀಡುತ್ತದೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳ ಪ್ರಕಾರ ಅವಿವಾಹಿತ ಹೆಣ್ಣುಮಕ್ಕಳು ಮದುವೆಯಾಗುವವರೆಗೆ ತನ್ನ ತಂದೆಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾರೆ ಎಂಬುದಾಗಿ ತೀರ್ಪು ನೀಡಿವೆ. ಆದರೆ, ಅರ್ಜಿದಾರರು ಮಗಳ ಶೈಕ್ಷಣಿಕ ಮತ್ತು ಮದುವೆ ಖರ್ಚಿಗೆಂದು 2.8 ಲಕ್ಷ ರು. ಪಾವತಿಸಿದ್ದಾರೆ. ಆ ಬಗ್ಗೆ ಕೌಟುಂಬಿಕ ನ್ಯಾಯಾಲಯ ಮುಂದೆ ನಡೆದಿರುವ ರಾಜೀ ಒಪ್ಪಂದಕ್ಕೆ ಮಗಳು ವಯಸ್ಕಳಾದ ನಂತರವು ಬದ್ಧವಾಗಿರಬೇಕಾಗಿರುತ್ತದೆ ಎಂದು ಆದೇಶಿಸಿದೆ.

ಪ್ರಕರಣದ ವಿವರ 

ಹರೀಶ್ ಮತ್ತು ಪತ್ನಿ 2018ರಲ್ಲಿ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡಿದ್ದರು. ಅಪ್ರಾಪ್ತಳಾಗಿದ್ದ ಮಗಳ ಪರವಾಗಿ ತಾಯಿ ಜೀವನಾಂಶ ಅರ್ಜಿ ಸಲ್ಲಿಸಿದ್ದರು. ಒಪ್ಪಂದಂತೆ 2019ರಲ್ಲಿ ಪತ್ನಿ ಅಂತಿಮ ಜೀವನಾಂಶವೆಂದು ಒಂದು ಲಕ್ಷ ಹಣವನ್ನು ಮಗಳ ಶಿಕ್ಷಣ ಹಾಗೂ ಮದುವೆ ಖರ್ಚಿಗೆಂದು 2.80 ಲಕ್ಷ ರು. ಸ್ವೀಕರಿಸಲಾಗಿತ್ತು. ಆದರೆ ಪುತ್ರಿ ಪ್ರೌಢಾವಸ್ಥೆಗೆ ತಲುಪಿದ ನಂತರ 2025ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತನಗೆ ಮಾಸಿಕ 25 ಸಾವಿರ ರು. ಜೀವನಾಂಶ ಪಾವತಿಸಲು ತಂದೆಗೆ ನಿರ್ದೇಶಿಸುವಂತೆ ಕೋರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Bandh: ಕಾವೇರಿ ನೀರಿಗಾಗಿ ಮತ್ತೆ ಹೋರಾಟ 13ರಂದು ಕರ್ನಾಟಕ ಬಂದ್ ಫಿಕ್ಸ್, ವಾಪಸ್ ಮಾತೇ ಇಲ್ಲ: ವಾಟಾಳ್
Karnataka News Live: Bengaluru - ಜೀವನಾಂಶದ ಒಪ್ಪಂದ ಮುರಿದ ಮಗಳು - ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪೇನು?