ದಸರಾ ಕನ್ನಡಿಗರ ನಾಡು, ನುಡಿ, ಸಂಸ್ಕೃತಿಯ ಸಂಕೇತ: ಹಂಪ ನಾಗರಾಜಯ್ಯ

By Kannadaprabha News  |  First Published Oct 3, 2024, 10:55 AM IST

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೂ ಮುನ್ನಾ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಅನುಗ್ರಹ ದೊರಕಿರುವುದು ನನ್ನ ಪುಣ್ಯ ಎಂದು ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದರು. 


ಸುತ್ತೂರು (ಅ.03): ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೂ ಮುನ್ನಾ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಅನುಗ್ರಹ ದೊರಕಿರುವುದು ನನ್ನ ಪುಣ್ಯ ಎಂದು ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದರು. ಶ್ರೀ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಅವರು ಮಾತನಾಡಿ, ದಸರಾ ಮಹೋತ್ಸವವು ಕನ್ನಡಿಗರ ನಾಡು, ನುಡಿ ಸಂಸ್ಕೃತಿಯ ಸಂಕೇತವಾಗಿದೆ. ಸಮಸ್ತ ಕನ್ನಡಿಗರು ಹಾಗೂ ಸಾಹಿತ್ಯ ಲೋಕದ ಪ್ರತಿನಿಧಿಯಾಗಿ ನಾನು ಈ ಮಹೋತ್ಸವವನ್ನು ಉದ್ಘಾಟಿಸುತ್ತಿದ್ದೇನೆ ಎಂದರು.

ಜೈನರ ಕಾವ್ಯ, ಶರಣರ ವಚನಗಳು, ದಾಸರ ಹಾಡಿನ ಪರಂಪರೆಯಿಂದ ಬಂದವರು ನಾವು. ಈ ಸಮಾರಂಭ ಪುಟ್ಟ ಅನುಭವಮಂಟಪವೇ ಸೇರಿಸಿದಂತೆ ಕಾಣುತ್ತಿದೆ. ವಿಶ್ವವ್ಯಾಪಿಯಾಗಿ ಸಮಾಜ ಸೇವೆ ಮಾಡುವ ಮಠವೆಂದರೆ ಅದು ಸುತ್ತೂರು ಮಠ. ಬ್ರಹ್ಮಾಂಡದ ಎಲ್ಲಾ ವಿಚಾರಗಳನ್ನು ಕುರಿತು ಮಾತನಾಡಲು ವಚನಕಾರರು ನೀಡಿರುವ ವಚನ ಪರಂಪರೆಗೆ ಚೈತನ್ಯ ತುಂಬುವ ದಿಶೆಯಲ್ಲಿ ಅವುಗಳನ್ನು ಉಳಿಸಿ, ಬೆಳೆಸಿ, ಕಾಪಾಡಿ, ಪ್ರಸಾರಮಾಡುತ್ತಿರುವುದರಲ್ಲಿ ಸುತ್ತೂರು ಮಠದ ಕಾರ್ಯ ಶ್ಲಾಘನೀಯವಾದುದು. ದಸರಾ ಉದ್ಘಾಟನೆಗೂ ಮುನ್ನ ಶ್ರೀಗಳು ನನಗೂ ನನ್ನ ಕುಟುಂಬ ವರ್ಗದವರಿಗೂ ಆಶೀರ್ವಾದಿಸುತ್ತಿರುವುದು ನಮ್ಮ ಪುಣ್ಯವೇ ಸರಿ ಎಂದು ಹೇಳಿದರು.

Latest Videos

undefined

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಾಡೋಜ ಹಂ.ಪ ನಾಗರಾಜಯ್ಯ ಅವರು ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಮೈಸೂರು ದಸರಾ ಹೆಸರಿಗೆ ಮಾತ್ರವಲ್ಲ, ನಿಜವಾಗಿಯೂ ವಾಸ್ತವವಾಗಿಯೂ ಜಗದ್ವಿಖ್ಯಾತವಾದ ನಾಡಹಬ್ವವಾಗಿದೆ. ಮೈಸೂರು ಎಂದರೆ ದಸರಾ ಎಂದೇ ಪ್ರಸಿದ್ಧಿ. ವಿಜಯದಶಮಿ, ನವರಾತ್ರಿ ಹಾಗೂ ದೇವೀ ಆರಾಧನೆಗಳನ್ನು ನಾಡಿನ ಎಲ್ಲರೂ ಆಚರಿಸುತ್ತಾರೆ. ಆದರೆ ಮೈಸೂರು ದಸರಾ ಭಾರತದ ಹೆಗ್ಗುರುತು. ಇಂಥ ನಾಡಹಬ್ಬವನ್ನು ಹಂಪನಾರವರು ಉದ್ಘಾಟಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಸಂಭ್ರಮದ ದಸರಾ ಹಬ್ಬಕ್ಕೆ ಸಜ್ಜಾದ ಮೈಸೂರು: ಹಂಪ ನಾಗರಾಜಯ್ಯರಿಂದ ಉದ್ಘಾಟನೆ

ಕಲ್ಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ, ಜಿ.ಸಿ. ಭಟ್ಟ, ಎಂ.ಜಿ.ಆರ್. ಅರಸು, ಲತಾ ಸುದರ್ಶನ್, ಹಂ.ಪ. ನಾಗರಾಜು ಅವರ ಪುತ್ರಿಯರಾದ ಆರತಿ ಹಂಪನಾ ಮತ್ತು ರಾಜಶ್ರೀ ಹಂಪನಾ ಮಾತನಾಡಿದರು. ಸಾಹಿತಿಗಳಾದ ಕೆ.ಸಿ. ಶಿವಪ್ಪ, ರಾಜಶೇಖರ್, ನೀಲಗಿರಿ ತಳವಾರ, ಮೊರಬದ ಮಲ್ಲಿಕಾರ್ಜುನ, ವಿಕ್ರಂ ಅರಸ್, ಲತಾ ರಾಜಶೇಖರ್, ಜೆಎಸ್ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು.

click me!