ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್ ಸರ್ಜರಿ ವಿಳಂಬಕ್ಕೆ ಬಿಪಿ ಕಾರಣ, ಸಿ.ವಿ.ನಾಗೇಶ್

By Kannadaprabha News  |  First Published Nov 29, 2024, 6:00 AM IST

ದರ್ಶನ್ ಗೆ ಮತ್ತೊಮ್ಮೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದೆ. ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬಗ್ಗೆ ವೈದ್ಯರು ಇನ್ನೂ ತೀರ್ಮಾನಿಸಿಲ್ಲ ಎಂದು ತಿಳಿಸಿದ ದಶನ್ ಪರ ವಕೀಲ ಸಿ.ವಿ. ನಾಗೇಶ್  


ಬೆಂಗಳೂರು(ನ.29): ಬೆನ್ನುಹುರಿ ಊತದ ಹಿನ್ನೆಲೆಯಲ್ಲಿ ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರ ರಕ್ತದೊತ್ತಡದಲ್ಲಿ ಏರಿಳಿತವಾಗುತ್ತಿದೆ. ಇದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ವೈದ್ಯರು ಇನ್ನೂ ನಿರ್ಧರಿಸಿಲ್ಲ ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದರು. 

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್, ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಗುರುವಾರ ವಿಚಾರಣೆ ನಡೆಸಿತು. 

Latest Videos

undefined

ದರ್ಶನ್ ಖಾಯಂ ಜಾಮೀನು ಅರ್ಜಿ, ವಕೀಲರ ಜಿದ್ದಾಜಿದ್ದಿ; ಖಾಕಿ ಕೂಡ ಎಡವಿದೆಯಾ?

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ದರ್ಶನ್ ಅವರಿಗೆ ನೀಡಿರುವ ಈ ಮಧ್ಯಂತರ ಜಾಮೀನು ಕುರಿತ ವಸ್ತುಸ್ಥಿತಿ ಬಗ್ಗೆ ಸ್ವಲ್ಪ ಹೇಳಿ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ದಶನ್ ಪರ ವಕೀಲ ಸಿ.ವಿ. ನಾಗೇಶ್, ದರ್ಶನ್ ಗೆ ಮತ್ತೊಮ್ಮೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದೆ. ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬಗ್ಗೆ ವೈದ್ಯರು ಇನ್ನೂ ತೀರ್ಮಾನಿಸಿಲ್ಲ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ನೀಡಿರುವ ಪ್ರಮಾಣ ಪತ್ರ ಇದೆಯಲ್ಲವೇ ಎಂದು ಪ್ರಶ್ನಿಸಿತು. 

ಸಿ.ವಿ.ನಾಗೇಶ್ ಉತ್ತರಿಸಿ, ದರ್ಶನ್ ಅವರಿಗೆ ರಕ್ತದೊತ್ತಡ ಏರಿಳಿತವಾಗುತ್ತಿದೆ. ಇದರಿಂದ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಲ್ಲ. ರಕ್ತದೊತ್ತಡ ಕಡಿಮೆಯಾಗದೆ ಹೋದರೆ ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದನ್ನು ವೈದ್ಯರು ನಿರ್ಧರಿಸಬೇಕಿದೆ ಎಂದು ಸಮಜಾಯಿಷಿ ನೀಡಿದರು. 

ದರ್ಶನ್ ಬಗ್ಗೆ ಸಮರ್ಥನೆ: 

ಇದಕ್ಕೂ ಮುನ್ನ ದರ್ಶನ್ ಜಾಮೀನು ಮನವಿ ಕುರಿತು ವಾದ ಮಂಡಿಸಿ ಸಿ.ವಿ.ನಾಗೇಶ್, ರೇಣುಕಾಸ್ವಾಮಿಗೆ ಊಟ ನೀರು ತಂದು ಕೊಡುವಂತೆ ದರ್ಶನ್ ಹೇಳಿದ್ದರು ಎಂಬುದಾಗಿ ಸಾಕ್ಷಿಗಳ ಹೇಳಿಕೆಯಿಂದ ಕಂಡುಬರುತ್ತದೆ. ಒಂದೊಮ್ಮೆ ಕೊಲೆ ಮಾಡುವ ಉದ್ದೇಶವಿದ್ದರೆ ರೇಣುಕಾಸ್ವಾಮಿಗೆ ನೀರು ಕೊಡಿ, ಊಟ ತಂದು ಕೊಡಿ, ಆತನ ಚಿತ್ರ ಸೆರೆ ಹಿಡಿಯಿರಿ, ವಿಡಿಯೋ ಮಾಡಿ, ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಹೇಳುತ್ತಿದ್ದರೆ? ಇದು ದರ್ಶನ್ ನಡತೆಯಾಗಿದೆ. ಅದಕ್ಕೆ ದಾಖಲೆಯ ರೂಪದಲ್ಲಿ ಸಾಕ್ಷ್ಯವಿದೆ ಎಂದು ಪ್ರತಿಪಾದಿಸಿದರು. 

ರೇಣುಕಾಸ್ವಾಮಿ ಕಿಡ್ನಾಪ್ ಆಗಿಯೇ ಇಲ್ಲ, ದರ್ಶನ್ ಕೃತ್ಯದಲ್ಲಿ ಭಾಗಿಯಾಗಿಲ್ಲ; ವಕೀಲ ಸಿ.ವಿ. ನಾಗೇಶ್ ವಾದ

 ಅಲ್ಲದೆ, ಪ್ರಕರಣದಲ್ಲಿ ನರೇಂದ್ರ ಸಿಂಗ್, ಪುನೀತ್ ಸೇರಿದಂತೆ ಆರು ಮಂದಿ ಪ್ರತ್ಯಕ್ಷ ಸಾಕ್ಷಿಗಳ ಹೆಸರು ದೋಷಾರೋಪ ಪಟ್ಟಿ ಉಲ್ಲೇಖಿಸಲಾಗಿದೆ. ಈ ಆರು ಮಂದಿ ತನಿಖಾಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಗೂ ಹಾಗೂ ನ್ಯಾಯಾಲಯದ ಮುಂದೆ ದಾಖಲಿಸಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಘಟನೆ ಸಂಭವಿಸಿ ಹಲವು ದಿನಗಳ ನಂತರ ಪೊಲೀಸರು ಸಾಕ್ಷಿಗಳಿಂದ ಹೇಳಿಕೆ ಪಡೆದಿದ್ದಾರೆ. ಅದಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ. 
ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷ ಸಾಕ್ಷಿದಾರರ ಹೆಸರುಗಳನ್ನು ನಮೂದಿಸಿಲ್ಲ. ಸಾಕ್ಷಾಧಾರಗಳನ್ನು ಕಲೆ ಹಾಕುವಲ್ಲಿ ಪೊಲೀಸರು ವಿಳಂಬ ಮಾಡಿರುವುದನ್ನು ಪರಿಗಣಿಸಿ ಆರೋಪಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರುವ ಮೂಲಕ ತಮ್ಮ ವಾದ ಮುಕ್ತಾಯಗೊಳಿಸಿದರು. 

ನಂತರ ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ದರ್ಶನ್ ವ್ಯವಸ್ಥಾಪಕ ಆರ್.ನಾಗರಾಜು ಪರ ವಕೀಲರು, ಯಾವ ಕಾರಣಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರವನ್ನು ರಿಮ್ಯಾಂಡ್ ಅರ್ಜಿಯಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಿಲ್ಲ. ಈ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸಿಲ್ಲ. ಇದು ಗಂಭೀರ ಲೋಪ ಎಂದು ಆಕ್ಷೇಪಿಸಿದರು. ಅಂತಿಮವಾಗಿ ದಿನದ ಕಲಾಪ ಮುಗಿದ ಹಿನ್ನೆಲೆಯಲ್ಲಿ ನ್ಯಾಯಪೀಠ, ವಿಚಾರಣೆಯನ್ನು ಇಂದಿಗೆ(ಶುಕ್ರವಾರ) ಮುಂದೂಡಿತು.

click me!