
ಬೆಂಗಳೂರು (ಏ.10): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿ ಕೆಲ ರೌಡಿಗಳಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ನೀಡಿದ ಆರೋಪ ಗುರಿಯಾಗಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮತ್ತು ಅಧೀಕ್ಷಕರ ವಿಚಾರಣೆ ನಡೆಸಲು ಗೃಹ ಇಲಾಖೆ ಅನುಮತಿ ನೀಡಿದೆ. ಘಟನೆ ಬೆಳಗೆ ಬಂದ ಬೆನ್ನಲ್ಲೇ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಶೇಷಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಸೇರಿ 9 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ವಿಶೇಷ ಆತಿಥ್ಯ ಆರೋಪದ ಸಂಬಂಧ ಕಾರಾಗೃಹ ಅಧಿಕಾರಿಗಳ ವಿಚಾರಣೆ ನಡೆಸಲು ಅನುಮತಿ ಕೋರಿ ಅಗ್ನೇಯ ವಿಭಾಗದ ಡಿಸಿಪಿ ಸಾ.ರಾ.ಫಾತಿಮಾ ಗೃಹ ಇಲಾಖೆಗೆ ಪತ್ರ ಬರೆದಿದ್ದರು.
ಇದೀಗ ಏಳು ತಿಂಗಳ ಬಳಿಕ ಗೃಹ ಇಲಾಖೆ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಿದೆ. ಹೀಗಾಗಿ ತನಿಖಾಧಿಕಾರಿ ಈ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಟ ದರ್ಶನ್ ಕೇಂದ್ರ ಕಾರಾಗೃಹದ ಒಳ ಆವರಣದಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಜತೆ ಸಿಗರೆಟ್ ಕೈಯಲ್ಲಿ ಹಿಡಿದು ಚಹಾ ಮಗ್ ಜತೆ ಕುರ್ಚಿಯಲ್ಲಿ ವಿಲಾಸಿಯಾಗಿ ಕುಳಿತ ಫೋಟೋ ಬಹಿರಂಗವಾಗಿತ್ತು. ಅಲ್ಲದೆ, ನಟ ದರ್ಶನ್, ರೌಡಿ ಧರ್ಮನ ಸಹಚರನ ಜತೆ ಮೊಬೈಲ್‌ನಲ್ಲಿ ಮಾತನಾಡಿದ ವಿಡಿಯೋ ತುಣುಕು ಬಯಲಾಗಿತ್ತು.
ಮೂರು ಪ್ರತ್ಯೇಕ ಎಫ್‌ಐಆರ್: ಸಿಸಿಬಿ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಜೈಲು ಸಿಬ್ಬಂದಿ ಆರೋಪಿಗಳ ಬ್ಯಾರಕ್‌ನಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಟ ದರ್ಶನ್ ಹಾಗೂ ರೌಡಿಗಳಿಗೆ ವಿಶೇಷ ಆತಿಥ್ಯ, ಮೊಬೈಲ್ ಬಳಕೆಗೆ ಅವಕಾಶ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪೈಕಿ ಎರಡು ಪ್ರಕರಣಗಳಲ್ಲಿ ನಟ ದರ್ಶನ್ ಹಾಗೂ ಇತರರು ಆರೋಪಿಗಳಿದ್ದರು. ಮತ್ತೊಂದು ಪ್ರಕರಣಗಳಲ್ಲಿ ಜೈಲು ಅಧಿಕಾರಿಗಳು ಆರೋಪಿಗಳಾಗಿದ್ದರು.
ರೇಣುಕಾಸ್ವಾಮಿ ಮರ್ಡರ್ ಕೇಸ್: ಆರೋಪಿ ದರ್ಶನ್‌ಗೆ ನ್ಯಾಯಾಲಯದ ಖಡಕ್ ಎಚ್ಚರಿಕೆ!
ಈ ಪ್ರಕರಣಗಳ ತನಿಖೆಗೆ ಎಸಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಎರಡು ಪ್ರಕರಣಗಳಲ್ಲಿ ಆರೋಪಿ ನಟ ದರ್ಶನ್ ಸೇರಿ ಕೆಲವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಮೂರನೇ ಪ್ರಕರಣದಲ್ಲಿ ಕೇಂದ್ರ ಕಾರಾಗೃಹಗಳ ಅಧಿಕಾರಿ ವಿಚಾರಣೆ ನಡೆಸಲು ಗೃಹ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ವಿಚಾರಣೆಗೆ ಅನುಮತಿ ನೀಡಿದೆ. ಹೀಗಾಗಿ ತನಿಖಾಧಿಕಾರಿ ಕಾರಾಗೃಹ ಅಧಿಕಾರಿಗಳ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ