ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಗುರುವಾರ ಬೆಳಗ್ಗೆ ಕರೆತರಲಾಯಿತು.
ಬಳ್ಳಾರಿ (ಆ.30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಗುರುವಾರ ಬೆಳಗ್ಗೆ ಕರೆತರಲಾಯಿತು. ಬೆಳಗಿನ ಜಾವ 4.30ಕ್ಕೆ ಬೆಂಗಳೂರಿನಿಂದ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆಂಧ್ರ ಪ್ರದೇಶದ ಗಡಿ ಮೂಲಕ ದರ್ಶನ್ ನನ್ನು ಬೆಳಗ್ಗೆ 9.300 ಸುಮಾರಿಗೆ ಬಳ್ಳಾರಿಗೆ ಕರೆ ತರಲಾಯಿತು. ದರ್ಶನ್ ಜೈಲಿನ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಆರೋಪಿತರ ಡೈರಿಯಲ್ಲಿ ಹೆಸರು, ವಿಳಾಸ, ಯಾವ ಜೈಲಿನಿಂದ ಬಂದಿದ್ದಾರೆ, ಎಷ್ಟು ಗಂಟೆಗೆ ಒಳ ಪ್ರವೇಶ ಮಾಡಿದ್ದಾರೆ, ಯಾವ ಆರೋಪದ ಮೇಲೆ ಬಂದಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಅಧಿಕಾರಿಗಳು ದಾಖಲಿಸಿಕೊಂಡು, ದರ್ಶನ್‌ರಿಂದ ಸಹಿ ಪಡೆದುಕೊಂಡರು.
ದಾಖಲಾತಿ ಪರಿಶೀಲನೆ ಕಾರ್ಯ ಮುಗಿದ ಬಳಿಕ ದರ್ಶನ್‌ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ನಂತರ, ಬೆಳಗ್ಗೆ 10.20ರ ಸುಮಾರಿಗೆ ಕೇಂದ್ರ ಕಾರಾಗೃಹದಲ್ಲಿರುವ ವಿಶೇಷ ಬ್ಯಾರಕ್‌ಗೆ (ಸಂಖ್ಯೆ 15) ದರ್ಶನ್‌ನನ್ನು ಕಳಿಸಲಾಯಿತು. ಈಸೆಲ್ 10X10 ಅಡಿವಿಸ್ತೀರ್ಣದ್ದಾಗಿದೆ. ಇಲ್ಲಿ ದರ್ಶನ್ ಒಬ್ಬರನ್ನೇ ಇರಿಸಲಾಗಿದೆ. ಹಸ್ತಲಾಘವ ನಿರಾಕರಿಸಿದ ಪೊಲೀಸ್ ಅಧಿಕಾರಿ ಬೆಂಗಳೂರು ಜೈಲಿನಿಂದ ಬಳ್ಳಾರಿಗೆ ತಮ್ಮನ್ನು ಕರೆ ತಂದ ಪೊಲೀಸ್ ಅಧಿಕಾರಿಯೊಬ್ಬರಿಗೆ ದರ್ಶನ್ ಹಸ್ತಲಾಘವ ಮಾಡಲು ಮುಂದಾದರು.ಆದರೆ, ಅಧಿಕಾರಿಹಸ್ತಲಾಘವ ಮಾಡದೇ ನಯವಾಗಿ ತಿರಸ್ಕರಿಸಿದರು.
ಕಡಗ ತೆಗೆಯಲು ನಿರಾಕರಿಸಿದ ದರ್ಶನ್‌ಗೆ ಪೊಲೀಸರ ಕ್ಲಾಸ್: ಕಂಬಣ್ಣದ ಬ್ರಾಂಡೆಡ್ ಟೀ ಶರ್ಟ್ ಧರಿಸಿದ್ದ ದರ್ಶನ್,ಕೈಯಲ್ಲಿ ಜಾಕೆಟ್, ಮತ್ತೊಂದು ಕೈಯಲ್ಲಿ ವಾಟರ್ ಬಾಟಲ್, ಎದೆ ಮೇಲೆ ಕನ್ನಡಕ ಸಿಕ್ಕಿಸಿಕೊಂಡು ಭದ್ರತಾ ವಾಹನದಿಂದ ಕೆಳಗಿಳಿದರು. ಸಿನಿಮಾ ಶೈಲಿಯಲ್ಲಿಯೇ ಎಂಟ್ರಿ ನೀಡಿದರು. ಆದರೆ, ಜೈಲಿನ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಪೊಲೀಸ್ ಭದ್ರತೆ ಕಂಡು ಮಂಕಾದರು. ತಪಾಸಣೆ ವೇಳೆ ಕೊರಳಲ್ಲಿದ್ದ ಕರಿದಾರ ಹಾಗೂ ಡಾಲರ್‌ನ್ನು ತೆಗೆಸಲಾಯಿತು. ಕೈಯಲ್ಲಿರುವ ಕಡಗ ತೆಗೆಯಲು ಬರುವುದಿಲ್ಲ. ಕಡಗ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ದರ್ಶನ್ ಮನವಿ ಮಾಡಿದರು.
ಆದರೆ, ನಿಯಮದ ಪ್ರಕಾರ ಕಡಗ ಧರಿಸಲು ಅವಕಾಶವಿಲ್ಲ. ಹೀಗಾಗಿ ಕಡಗವನ್ನು ಕತ್ತರಿಸಿಯಾದರೂ ತೆರವುಗೊಳಿಸಲಾಗುವುದು ಎಂದು ಹೇಳಿದರು. ಬಳಿಕ, ಸೋಪಿನ ನೀರಿನಲ್ಲಿ ಕೆಲ ಹೊತ್ತು ಕೈಯನ್ನು ಅದ್ದಿ ಕಡಗವನ್ನು ಕಳಚಲಾಯಿತು. ದರ್ಶನ್ ಬಳಿ ಎರಡು ಕನ್ನಡಕಗಳಿದ್ದವು. ಈ ಪೈಕಿ ಟೆಸ್ಟೆಡ್ ಕನ್ನಡಕವನ್ನು ನೀಡಿ, ಸ್ಟೈಲಿಶ್ ಕನ್ನಡಕವನ್ನು ಜೈಲುಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ನಟ ದರ್ಶನ್ ತಂದಿದ್ದ ಎರಡು ಬ್ಯಾಗುಗಳ ತಪಾಸಣೆ ನಡೆಸಲಾಯಿತು.
ವಿಚಾರಣಾಧೀನ ಕೈದಿ ನಂಬರ್ 511: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿಯೇ ರೂಢಾಪರಾಧಿಗಳುಅಥವಾನಟೋರಿಯಸ್ ರೌಡಿಗಳನ್ನು ಇರಿಸುವ 15 ಸೆಲ್‌ಗಳ ವಿಶೇಷ ಬ್ಯಾರಕ್ ಇದ್ದು, ಇಲ್ಲಿಯೇ ದರ್ಶನ್‌ನನ್ನು ಇರಿಸಲಾಗಿದೆ. ಈತನಿಗೆ 511 ನಂಬರ್ ನೀಡಲಾಗಿದೆ. ಈ ಸೆಲ್‌ಗೆ ಮೂವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ದರ್ಶನ್ ಇರುವ ಸೆಲ್ 10X10 ವಿಸ್ತೀರ್ಣದ್ದಾಗಿದೆ. ಶೌಚಾಲಯ, ಫ್ಯಾನ್, ಕುಡಿವ ನೀರಿನ ವ್ಯವಸ್ಥೆ ಬಿಟ್ಟರೆಬೇರೆಯಾವಸೌಕರ್ಯಗಳಿಲ್ಲ. ಈ ಸೆಲ್‌ನಲ್ಲಿ ದರ್ಶನ್ ಒಬ್ಬರನ್ನೇ ಇರಿಸಲಾಗಿದೆ. ಹೈ ಸೆಕ್ಯೂರಿಟಿ ಬ್ಯಾರಕ್‌ನ್ನು ಮೂರೂವರೆ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಈ ಬ್ಯಾರಕ್‌ನ ಎರಡು ಬದಿಯಲ್ಲಿ ಒಟ್ಟು 30 ಸೆಲ್‌ಗಳಿವೆ. ಒಂದು ಬದಿಯಲ್ಲಿರುವ15 ಸೆಲ್‌ಗಳಪೈಕಿ ಒಂದರಲ್ಲಿ ದರ್ಶನನ್ನು ಬಂಧಿಸಿಡಲಾಗಿದೆ.
ಮಧ್ಯಾಹ್ನ ಊಟ ಬಿಟ್ಟು, ರಾತ್ರಿ ಮುದ್ದೆ ಸೇವನೆ: ಬಳ್ಳಾರಿ ಸೇರಿದ ಬಳಿಕ ದರ್ಶನ್, ಗುರುವಾರ ಮಧ್ಯಾಹ್ನ ಊಟ ನಿರಾಕರಿಸಿದ್ದರು. ಆದರೆ ರಾತ್ರಿ ಅವರಿಗೆ ಊಟಕ್ಕೆ ಮುದ್ದೆ, ಅನ್ನ ಹಾಗೂ ಸಾಂಬಾರ್ ನೀಡಲಾಯಿತು. ಮೊದಲು ನಿರಾಕರಿಸಿದ ದರ್ಶನ್, ಬಳಿಕ ಒಂದಷ್ಟು ಊಟ ಮಾಡಿದ್ದಾರೆಂದು ತಿಳಿದು ಬಂದಿದೆ. ಸೆಲ್ ಒಳಗೆ ಕಾಲಿಟ್ಟಾಗಿಂದಲೂ ದರ್ಶನ್ ಮಂಕಾಗಿದ್ದಾರೆ ಎಂದು ಗೊತ್ತಾಗಿದೆ.
ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಬಳ್ಳಾರಿ ಜೈಲಿನತ್ತ ನಟ ದರ್ಶನ್
ಹೂವು, ಹಣ್ಣು ಹಿಡಿದು ಕಾದಿದ್ದ ಫ್ಯಾನ್ಸ್!: ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಜೈಲಿನ ಮುಂಭಾಗದ ಸಾರ್ವಜನಿಕರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಲಾಗಿತ್ತು. ದರ್ಶನ್‌ರನ್ನು ನೋಡಲು ಶ್ರೀಕನಕದುರ್ಗಮ್ಮದೇವಸ್ಥಾನದ ಸಮೀಪ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕೆಲವರು ಹೂವಿನ ಹಾರಗಳನ್ನು ತಂದಿದ್ದರೆ, ಮತ್ತೆ ಕೆಲವರು ಬೇಕರಿಯಲ್ಲಿ ಸಿಹಿ ಪದಾರ್ಥಗಳನ್ನು ಖರೀದಿಸಿ ತಂದಿದ್ದರು. ಪೊಲೀಸರು ಅವರೆಲ್ಲರನ್ನೂ ದೂರ ಕಳಿಸಿದರು. ವಿಚಾರಣಾಧೀನ ಕೈದಿಯಾಗಿರುವ ದರ್ಶನ್‌ರನ್ನು ಒಂದು ವಾರದವರೆಗೆ ಕುಟುಂಬ ಸದಸ್ಯರು ಭೇಟಿ ಮಾಡಲು ಅವಕಾಶ ವಿದೆ. ನಂತರ, ವಾರದಲ್ಲಿ ಒಂದು ದಿನ ಮಾತ್ರ ಭೇಟಿಯಾಗಬಹುದೆಂದು ಮೂಲಗಳು ತಿಳಿಸಿವೆ.