ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಇದೀಗ ತೀವ್ರವಾಗಿ ಇಳಿಮುಖವಾಗಿದ್ದು ಜನಜೀವನ ಸಹಜ ಸ್ಥಿತಿಯೆಡೆಗೆ ಮುಖಮಾಡಿದೆ.
ಬೆಂಗಳೂರು (ಜು.13): ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಇದೀಗ ತೀವ್ರವಾಗಿ ಇಳಿಮುಖವಾಗಿದ್ದು ಜನಜೀವನ ಸಹಜ ಸ್ಥಿತಿಯೆಡೆಗೆ ಮುಖಮಾಡಿದೆ. ಆದರೂ ಕೆಲವೆಡೆ ಸಣ್ಣಪುಟ್ಟಭೂಕುಸಿತ, ರಸ್ತೆ ಕುಸಿತ ಮುಂತಾದ ಮಳೆ ಅನಾಹುತಗಳು ಮುಂದುವರಿದಿದ್ದು ಮಳೆ ಸಂಬಂಧಿ ಕಾರಣಗಳಿಗಾಗಿ ಮೂವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನಿಂದ ವರದಿಯಾಗಿವೆ. ಏತನ್ಮಧ್ಯೆ ಬೆಳಗಾವಿಯಲ್ಲಿ ಮಳೆ ನಿಂತಿದ್ದರೂ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಅದರ ಉಪನದಿಗಳ ಮಟ್ಟಏರುತ್ತಲೇ ಸಾಗಿದ್ದು ಕೆಳಹಂತದ 8 ಸೇತುವೆಗಳು ಜಲಾವೃತವಾಗಿವೆ.
ಉತ್ತರ ಕನ್ನಡದ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ತಾಯಿ ಮತ್ತು ಮಗಳು ಜೀವಂತ ಸಮಾಧಿಯಾಗಿದ್ದಾರೆ. ರುಕ್ಮಣಿ ವಿಠ್ಠಲ್ ಮಾಚಕ(37) ಮತ್ತು ಶ್ರೀದೇವಿ ವಿಠ್ಠಲ ಮಾಚಕ (13) ಮೃತಪಟ್ಟವರು. ಇನ್ನು ಚಿಕ್ಕಮಗಳೂರು ನಗರದ ಉಂಡೇದಾಸರಹಳ್ಳಿಯಲ್ಲಿ ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಎದುರೇ ಹಳ್ಳದ ನೀರು ಪಾಲಾದ ಘಟನೆ ನಡೆದಿದೆ. ಸುರೇಶ್ ಅಲಿಯಾಸ್ ಸೂರಿ (30) ಮೃತಪಟ್ಟದುರ್ದೈವಿ.
Chikkamagaluru ಐತಿಹಾಸಕ ಅಯ್ಯನ ಕೆರೆ ಕೋಡಿ : ಬಯಲು ಸೀಮೆ ರೈತರಲ್ಲಿ ಸಂತಸ
ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಆರ್ಭಟ ಗಣನೀಯವಾಗಿ ಇಳಿದಿದ್ದರೂ ವರದಾ ವದಿಯು ಪ್ರವಾಹ ಮಟ್ಟದಲ್ಲೇ ಹರಿಯುತ್ತಿರುವುದರಿಂದ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ತಾತ್ಕಾಲಿಕವಾಗಿ ಇಲ್ಲಿ ದೋಣಿ ಸಂಪರ್ಕವನ್ನು ಕಲ್ಪಿಸಿ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನಗಳಲ್ಲಿ ವಾರವಿಡೀ ಸುರಿದ ಮಳೆಯು ಇಳಿಮುಖವಾಗಿದ್ದು ಮಂಗಳವಾರ ಬಿಸಿಲು ಕಾಣಿಸಿಕೊಂಡಿತು. ಆದರೆ ಉಡುಪಿ ಜಿಲ್ಲೆಯಲ್ಲಿ ಇನ್ನೂ ಕೆಲದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಬುಧವಾರ ಆರೆಂಜ್ ಅಲರ್ಟ್ ಘೋಷಿಸಿದೆ.
ಮಲೆನಾಡು ಜಿಲ್ಲೆಗಳಲ್ಲಿ ಮಳೆ ಇನ್ನೂ ತೀವ್ರ: ರಾಜ್ಯದ ಕೆಲವೆಡೆಗಳಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತಷ್ಟು ತೀವ್ರವಾಗಿರುವುದರಿಂದ ಅಲ್ಲಲ್ಲಿ ಭೂಕುಸಿತ, ಪ್ರವಾಹ ಭೀತಿ ಎದುರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಮಳೆ ಅಬ್ಬರ ಮುಂದುವರಿದಿರುವುದರಿಂದ ಕೃಷ್ಣಾ ಮತ್ತದರ ಉಪನದಿಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ನದಿ ತೀರ ಪ್ರದೇಶಗಳಲ್ಲಿನ ಹೊಲಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ.
ಆಲಮಟ್ಟಿ ಡ್ಯಾಂನಿಂದ 75,000 ಕ್ಯುಸೆಕ್ ನೀರು ಬಿಡುಗಡೆ: ನದಿಪಾತ್ರದ ಜನರಲ್ಲಿ ಮುಂಜಾಗೃತೆಗೆ ಸೂಚನೆ
ಹಾಸನ ಜಿಲ್ಲೆಯ 4 ತಾಲೂಕುಗಳಲ್ಲಿ ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದೇವೇಳೆ ರೆಡ್ ಅಲರ್ಚ್ ಇದ್ದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಇಳಿಮುಖವಾಗುತ್ತಿದ್ದು, ಪ್ರವಾಹರೂಪಿಯಾಗಿದ್ದ ನದಿಗಳಲ್ಲೂ ನೀರಿನ ಮಟ್ಟಇಳಿಕೆಯಾಗಿ ಜನಜೀವನ ಸಹ ಸ್ಥಿತಿಯತ್ತ ಮುಖಮಾಡುತ್ತಿದೆ. ರಾಜ್ಯದಲ್ಲಿ ಗರಿಷ್ಠ ಮಳೆ ಪ್ರಮಾಣ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲಿ 18.8 ಸೆಂ.ಮೀ. ದಾಖಲಾಗಿದೆ. ಮಡಿಕೇರಿ ತಾಲೂಕಿನ ಮಾಡೆಯಲ್ಲಿ 17.2 ಸೆಂ.ಮೀ. ಮತ್ತು ಕಾರ್ಕಳ ತಾಲೂಕಿನ ಶಿವಪುರದಲ್ಲಿ 15.65 ಸೆಂ.ಮೀ. ಮಳೆಯಾಗಿದೆ.