ಮಂಗಳೂರು ಶಾಸಕ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಸರ್ಕಾರವು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಅಕ್ಕಿ ವಿತರಣೆಯಲ್ಲಿನ ಕೊರತೆ, ಹಾಲಿನ ದರ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು (ಏ.2): ಅಧಿಕಾರಕ್ಕೆ ಬರುವ ಮೊದಲು ತಿಂಗಳಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ದಿವಾಳಿಯಾಗಿರುವ ಪರಿಣಾಮ 10 ಕೆಜಿ ಬಿಡಿ, 5 ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಜೊತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನೂ ಕೊಡದೇ ರೇಷನ್ ಅಂಗಡಿಗಳ ಬಾಗಿಲಿಗೆ ‘ನೋ ಸ್ಟಾಕ್’ ಬೋರ್ಡ್ ಹಾಕಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಆಹಾರ ಸಚಿವರು ಅಕ್ಕಿ ಕೊರತೆ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ರೇಷನ್ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಯಾಕೆ? ಅಕ್ಕಿ ಸಿಗದೇ ಜನರು ಯಾಕೆ ವಾಪಾಸ್ ಹೋಗುತ್ತಿದ್ದಾರೆ? ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಬಡವರಿಗೆ ಸಿಗಬೇಕಾಗಿದ್ದ ಅಕ್ಕಿ ಅಕ್ರಮವಾಗಿ ಯಾರದ್ದೋ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬಯಲಾಯ್ತ ಬುಲ್ದಾನ ಹೇರ್ ಫಾಲ್ ಕೇಸ್ ರಹಸ್ಯ; ರೇಷನ್ ಶಾಪ್ ಗೋಧಿ ತಿಂದು ತಲೆಗೂದಲು ಕಳ್ಕೊಂಡ ಗ್ರಾಮಸ್ಥರು!
3ನೇ ಬಾರಿ ಹಾಲಿನ ದರ ಏರಿಕೆ:
ಇಲ್ಲಿಯವರೆಗೆ ಈ ಸರ್ಕಾರ ಹಾಲಿನ ದರವನ್ನು ₹ 9 ಏರಿಕೆ ಮಾಡಿದ್ದು ನಿಜವಾಗಿಯೂ ಹೈನುಗಾರಿಕೆಯನ್ನೇ ನಂಬಿರುವ ರೈತರಿಗೆ ದರ ಏರಿಕೆಯ ಲಾಭ ಹೋದರೆ ಯಾರೂ ವಿರೋಧ ಮಾಡುವುದಿಲ್ಲ. ಆದರೆ ಪ್ರತೀ ಬಾರಿಯೂ ರೈತರ ಹೆಸರಿನಲ್ಲಿ ಹಾಲಿನ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ದೋಚುವ ಸರ್ಕಾರ, ವಾಸ್ತವದಲ್ಲಿ ಹಾಲು ಉತ್ಪಾದಕರಿಗೆ ಸೇರಬೇಕಾಗಿದ್ದ 650 ಕೋಟಿ ರು.ಗೂ ಅಧಿಕ ಪ್ರೋತ್ಸಾಹ ಧನವನ್ನೇ ಇನ್ನೂ ಬಾಕಿ ಉಳಿಸಿಕೊಂಡಿದೆ. ರೈತರ ಹೆಸರಿನಲ್ಲಿ ಇವರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗುತ್ತಿದ್ದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದರು.ವಿದ್ಯುತ್ ದರ ಏರಿಕೆ ಶಾಕ್:
ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹ ಬಳಕೆ ವಿದ್ಯುತ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದೆ. ಗೃಹ ಬಳಕೆ ವಿದ್ಯುತ್‌ನ ಪ್ರತಿ ಯೂನಿಟ್ ದರದಲ್ಲಿ 10 ಪೈಸೆ ಇಳಿಕೆ ಮಾಡಿದ್ದೇವೆ ಎನ್ನುವ ಇವರು, ಗ್ರಾಹಕರಿಗೆ ಮಂಜೂರಾದ ಪ್ರತಿ ಕೆ.ವಿಗೆ ₹ 25 ಏರಿಕೆ ಮಾಡಿದ್ದಾರೆ. ಒಂದು ಕಡೆ ಉಚಿತ ಕರೆಂಟ್ ಎನ್ನುತ್ತಾ, ಇನ್ನೊಂದು ಕಡೆ ಕರೆಂಟ್ ದರ ಹೆಚ್ಚಿಸುತ್ತಾ ಬಂದ ಕಾಂಗ್ರೆಸ್ ಸರ್ಕಾರದ ಮಹಾ ಮೋಸ ಇದೀಗ ಎಲ್ಲರಿಗೂ ಅರಿವಾಗಿದೆ ಎಂದರು.
ಇದನ್ನೂ ಓದಿ: 'ಅನ್ನಭಾಗ್ಯ' ಯೋಜನೆಯಲ್ಲಿ ಮಹತ್ವದ ಬದಲಾವಣೆ; ಪಡಿತರ ಚೀಟಿದಾರರೇ ರೇಷನ್ ಬೇಕಾ? ಈ ವಿಷಯ ತಿಳಿದಿರಲಿ?
ಲ್ಯಾಂಡ್ ರೆಂಟ್ ದರ ತೀವ್ರ ಹೆಚ್ಚಳ:
ರಾಜ್ಯದ ಬಂದರುಗಳ ಲ್ಯಾಂಡ್ ರೆಂಟ್ ದರಗಳ ಹೆಚ್ಚಳದಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಿದೆ. ಸದ್ಯ ಇಲ್ಲಿ 10 ಚ.ಮೀ. ಗೆ 680 ರು. ವರೆಗೆ ಇದೆ. ಬಂದರುಗಳಲ್ಲಿನ ಲ್ಯಾಂಡ್‌ಗಳನ್ನು ಲೀಸ್‌ಗೆ ಕೊಡುವಂತಹ ಕ್ರಮ ಇದ್ದು, ಗ್ರೌಂಡ್ ರೆಂಟ್ ಹೆಚ್ಚಾದರೆ ಅಲ್ಲಿ ಹೊಸ ಪ್ರಾಜೆಕ್ಟ್‌ಗೆ ಯಾರೂ ಸಹ ಮುಂದೆ ಬರುವುದಿಲ್ಲ. ಇದರಿಂದ ಮುಖ್ಯವಾಗಿ ಟೂರಿಸಂಗೆ ತೀವ್ರ ಹಿನ್ನಡೆಯಾಗಿದ್ದು ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಎಲ್ಲರನ್ನೂ ಹಲವು ಬಾರಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದರು.
ಮುಖಂಡರಾದ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ರಮೇಶ್ ಕಂಡೆಟ್ಟು, ನಿತಿನ್ ಕುಮಾರ್, ಸಂಜಯ ಪ್ರಭು, ಪೂರ್ಣಿಮಾ, ರಮೇಶ್ ಹೆಗ್ಡೆ, ಲಲ್ಲೇಶ್ ಇದ್ದರು.