ಬ್ರಿಟಿಷ್ ಕಾಲದ ಶ್ರೀರಾಮ, ಸೀತಾ ನಾಣ್ಯಕ್ಕೆ ಕಾಫಿನಾಡಿನ ಮನೆಯೊಂದರಲ್ಲಿ ನಿತ್ಯ ಪೂಜೆ!

By Kannadaprabha NewsFirst Published Jan 19, 2024, 6:03 AM IST
Highlights

ಕ್ರಿ.ಶ.1818ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಚಲಾವಣೆಗೆ ತಂದಿದ್ದ ಈ ನಾಣ್ಯವನ್ನು ಪಟ್ಟಣದ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಸುನೀಲ್‌ರಾಜ್ ಭಂಡಾರಿ ಸಂಗ್ರಹಿದ್ದು, ತಮ್ಮ ಮನೆಯಲ್ಲಿ ನಿತ್ಯವೂ ಪೂಜಿಸುತ್ತಿದ್ದಾರೆ. 
 

ಸಚಿನ್ ಕುಮಾರ್ ಬಿ.ಎಸ್,

ಬಾಳೆಹೊನ್ನೂರು (ಜ.19): ಬ್ರಿಟೀಷರ ಈಸ್ಟ್ ಕಂಪೆನಿ ಆಡಳಿತಾವಧಿಯಲ್ಲಿ ಚಲಾವಣೆಯಲ್ಲಿದ್ದ ಶ್ರೀರಾಮ, ಸೀತಾ ಚಿತ್ರದ ನಾಣ್ಯ ಪಟ್ಟಣದ ಮನೆಯೊಂದರಲ್ಲಿ ನಿತ್ಯವೂ ಪೂಜೆಗೆ ಪಾತ್ರವಾಗಿದೆ. ಕ್ರಿ.ಶ.1818ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಚಲಾವಣೆಗೆ ತಂದಿದ್ದ ಈ ನಾಣ್ಯವನ್ನು ಪಟ್ಟಣದ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಸುನೀಲ್‌ರಾಜ್ ಭಂಡಾರಿ ಸಂಗ್ರಹಿದ್ದು, ತಮ್ಮ ಮನೆಯಲ್ಲಿ ನಿತ್ಯವೂ ಪೂಜಿಸುತ್ತಿದ್ದಾರೆ. 

ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಚಿತ್ರದ ನಾಣ್ಯ ಇದಾಗಿದ್ದು, ಭಾರತ ಆಳಿದ ಬ್ರಿಟಿಷರು ಆಗಿನ ಕಾಲದಲ್ಲೇ ಇಂತಹ ನಾಣ್ಯಚಲಾವಣೆಗೆ ತರುವ ಮೂಲಕ ಭಾರತದ ಅಸ್ಮಿತೆ, ರಾಮಾಯಣದ ಐತಿಹ್ಯವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಿರುವುದು ಗಮನಾರ್ಹ. ನಾಣ್ಯದ ಒಂದು ಬದಿಯಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ಮಂಟಪದ ಚಿತ್ರವಿದೆ. ಇನ್ನೊಂದು ಬದಿಯಲ್ಲಿ ಯುಕೆ ಹಾಫ್ ಅಣ ಎಂದು ಆಂಗ್ಲ ಮತ್ತು ಬ್ರಿಟಿಷ್ ಭಾಷೆಯಲ್ಲಿದ್ದು, ಸುತ್ತಲೂ ಈಸ್ಟ್ ಇಂಡಿಯಾ ಕಂಪೆನಿ, 1818 ಇಸವಿ ಹಾಕಿ ವಿಶೇಷವಾಗಿ ಹೂವುಗಳನ್ನು ಚಿತ್ರಿಸಲಾಗಿದೆ.

ನಾಣ್ಯಕ್ಕೆ ಸುಮಾರು 206 ವರ್ಷಗಳಾಗಿದ್ದರೂ ಸಹ ತಾಮ್ರದ ಈ ನಾಣ್ಯ ಅತ್ಯಂತ ಗಟ್ಟಿಮುಟ್ಟಾಗಿ ತನ್ನ ಹೊಳಪು ಕಾಯ್ದುಕೊಂಡಿದೆ. 50 ಗ್ರಾಂಗೂ ಅಧಿಕ ತೂಕ ಹೊಂದಿದೆ. ಈ ನಾಣ್ಯ ನಮ್ಮ ಅಜ್ಜನ ಕಾಲದಲ್ಲಿ ಯಾರೋ ನಮ್ಮ ಕುಟುಂಬಕ್ಕೆ ಕೊಟ್ಟಿದ್ದರು ಎಂದು ನಮ್ಮ ತಂದೆ ಹೇಳುತ್ತಿದ್ದರು. ಈ ನಾಣ್ಯವನ್ನು ನಾವು ನಿತ್ಯ ದೇವರ ಮನೆಯ ಲಕ್ಷ್ಮಿ ವಿಗ್ರಹದ ಕೆಳಭಾಗದಲ್ಲಿಟ್ಟು ಪೂಜಿಸುತ್ತಿದ್ದೇವೆ. ಬ್ರಿಟಿಷ್ ಆಡಳಿತದಲ್ಲಿಯೂ ಸಹ ಶ್ರೀರಾಮ ಚರಿತೆ ಜನರಿಗೆ ಮನಮುಟ್ಟಿಸುತ್ತಿದ್ದ ರೀತಿ ಶ್ಲಾಘನೀಯ ಎನ್ನುತ್ತಾರೆ ಸುನೀಲ್‌ರಾಜ್ ಭಂಡಾರಿ.

ಅಯೋಧ್ಯೆ ರಾಮಮಂದಿರಕ್ಕೆ ಹೋಗಬೇಕೆಂಬ ಆಸೆ ಇದೆ: ಎಚ್‌.ಡಿ.ದೇವೇಗೌಡ

ರಾಮ ಜನ್ಮಭೂಮಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮ್‌ಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆಯಾಗುತ್ತಿರುವ ಸಂದರ್ಭದಲ್ಲಿ ಶ್ರೀರಾಮನ ಹಲವು ಐತಿಹ್ಯಗಳು ಹೊರಬರುತ್ತಿರುವುದು ಭಾರತದ ಸನಾತನ ಧರ್ಮ ಇತಿಹಾಸಕ್ಕೆ ಸಾಕ್ಷಿ. ದೇಶದಲ್ಲಿ ಇನ್ನೂ ಹಲವು ಐತಿಹ್ಯಗಳಿದ್ದು, ಸಮಗ್ರ ಅಧ್ಯಯನ, ಉತ್ಖನನಗಳಿಂದ ಇವುಗಳನ್ನು ತಿಳಿದು ಕೊಳ್ಳಬೇಕಿದೆ. ನನ್ನ ಬಳಿ ಇರುವ ಶ್ರೀರಾಮ ನಾಣ್ಯವನ್ನು ನಮ್ಮ ಕುಟುಂಬ ಸಂಪೂರ್ಣ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸಲಿದೆ.
-ಸುನೀಲ್‌ರಾಜ್ ಭಂಡಾರಿ, ಅಧ್ಯಕ್ಷ, ಹೋಬಳಿ ಜಾನಪದ ಪರಿಷತ್

click me!