ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಅನರ್ಥಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಣ್ಣ

Published : Sep 26, 2023, 05:11 PM ISTUpdated : Sep 26, 2023, 05:39 PM IST
ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಅನರ್ಥಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಣ್ಣ

ಸಾರಾಂಶ

ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಹೆಜ್ಜೆ ಹೆಜ್ಜೆಗೂ ಅನರ್ಥಗಳನ್ನು ಮಾಡಿದ್ದರಿಂದಲೇ CWRC ನಿತ್ಯ 3,000 ಕ್ಯೂಸೆಕ್ಸ್‌ ನೀರಿ ಹರಿಸುವಂತೆ ಆದೇಶ ನೀಡಿದೆ.

ಬೆಂಗಳೂರು (ಸೆ.26): ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರ ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿದೆ. ಆದರೆ, ಈ ಸರ್ಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ. ಆದ್ದರಿಂದಲೇ ಕಾವೇರಿ ಜಲ ನಿಯಂತ್ರಣ ಸಮಿತಿಯು (CWRC) ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3,000 ಕ್ಯೂಸೆಕ್ಸ್‌ ನೀರು ಹರಿಸುವಂತೆ ಆದೇಶ ಹೊರಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ. ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್‌ ಸರ್ಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ.

ಬಂದ್ ನಡುವೆ ಕರ್ನಾಟಕಕ್ಕೆ ಶಾಕ್, ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡಲು ಶಿಫಾರಸು!

ಕೆಆರ್ ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು "ನಮ್ಮಲ್ಲಿ ನೀರೇ ಇಲ್ಲ" ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು "ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ" ಎನ್ನುತ್ತಾರೆ. 'ಎತ್ತು ಏರಿಗೆ, ಕೋಣ ನೀರಿಗೆ' ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ.

ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ಕುರುವೈ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ, ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ 'ಬಂಡೆ' ಎಳೆದಿದೆ.

ಕಾವೇರಿ ನೀರಿಗಾಗಿ ಕರ್ನಾಟಕಕ್ಕೆ ಪ್ರಾಣಸಂಕಟ, ತಮಿಳುನಾಡಿಗೆ ಚೆಲ್ಲಾಟ: ನಿತ್ಯ 12,500 ನೀರು ಹರಿಸುವಂತೆ ಪಟ್ಟು

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) & ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ 'ಸಂಕಷ್ಟ ಹಂಚಿಕೆ ಸೂತ್ರ'ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ತಾಕೀತು ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ