ಕಾವೇರಿ ನೀರಿಗಾಗಿ ಕರ್ನಾಟಕಕ್ಕೆ ಪ್ರಾಣಸಂಕಟ, ತಮಿಳುನಾಡಿಗೆ ಚೆಲ್ಲಾಟ: ನಿತ್ಯ 12,500 ನೀರು ಹರಿಸುವಂತೆ ಪಟ್ಟು
ಕಾವೇರಿ ನೀರಿನ ವಿವಾದದಲ್ಲಿ ಕರ್ನಾಟಕಕ್ಕೆ ಕುಡಿಯಲೂ ನೀರಿಲ್ಲದೇ ಪ್ರಾಣ ಸಂಕಟ ಶುರುವಾಗಿದ್ದರೆ, ನಮಗೆ 12,500 ಕ್ಯೂಸೆಕ್ಸ್ ನೀರು ಬಿಡುವಂತೆ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ತಮಿಳುನಾಡು ಚೆಲ್ಲಾಟ ಆರಂಭಿಸಿದೆ.
ನವದೆಹಲಿ (ಸೆ.26): ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕುಡಿಯಲೂ ನೀರು ಲಭ್ಯವಿಲ್ಲದೇ ಕರ್ನಾಟಕ ರಾಜ್ಯಕ್ಕೆ ಪ್ರಾಣ ಸಂಕಟ ಶುರುವಾಗಿದೆ. ಆದರೆ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡು ತಮಗೆ ವಾರ್ಷಿಕವಾಗಿ ಬರಬೇಕಾದ ತಮ್ಮ ಪಾಲಿನ ನೀರನ್ನು ಬಿಡುವಂತೆ ಪ್ರತಿನಿತ್ಯ 12,500 ಕ್ಯೂಸೆಕ್ಸ್ ನೀರು ಬಿಡುವಂತೆ ಪಟ್ಟು ಹಿಡಿದಿದೆ.
ನವದೆಹಲಿಯಲ್ಲಿ ಮಂಗಳವಾರ 11.30ರಿಂದ ನಡೆಯುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ( Cauvery Water Regulation Committee- CWRC) ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಖುದ್ದಾಗಿ ಭಾಗಿಯಾಗಿದ್ದಾರೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಖುದ್ದು ಭಾಗಿಯಾಗಿದ್ದಾರೆ. ಜೊತೆಗೆ, ತಮಿಳುನಾಡು ಅಧಿಕಾರಿಗಳು ಈ ಬಾರಿಯೂ ಖುದ್ದು ಭಾಗಿಯಾಗಿದ್ದಾರೆ. ಈತನಕ 42.214 ಟಿಎಂ ಸಿ ನೀರು ತಮಿಳುನಾಡಿಗೆ ಹರಿದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿಯಿಂದ ನೀಡಲಾದ ಮೂರು ಬಾರಿಯ ಆದೇಶವನ್ನೂ ಕರ್ನಾಟಕ ಸರ್ಕಾರ ಪಾಲಿಸಲಾಗಿದೆ. ಪ್ರಸ್ತುತ 49.467 ಟಿಎಂಸಿ ನೀರು ಜಲಾಶಯಗಳಲ್ಲಿ ಇದೆ. ಈ ನೀರನ್ನೂ ಬಿಟ್ಟರೆ ಕರ್ನಾಟಕ ಜನರಿಗೆ ಕುಡಿಯಲು ನೀರು ಸಿಗುವುದಿಲ್ಲ.
ಕಾವೇರಿ ಹೋರಾಟಕ್ಕೆ ಟ್ವೀಟ್‌ನಲ್ಲೇ ಬೆಂಬಲಿಸಿದ ಕಿಚ್ಚ ಸುದೀಪ್: ಬೀದಿಗಿಳಿದು ಹೋರಾಡುವಂತೆ ನೆಟ್ಟಿಗರ ತಾಕೀತು!
ಇನ್ನು ಕರ್ನಾಟಕದಲ್ಲಿ ಕಾವೇರಿ ನೀರು ಲಭ್ಯವಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಸಾಕಷ್ಟು ನೀರು ಲಭ್ಯವಿದ್ದರೂ ರೈತರ ನೀರಾವರಿಗೆ ಹೆಚ್ಚುವರಿ ನೀರು ಬೇಕೆಂದು ವಾದವನ್ನು ಮಂಡಿಸುತ್ತಿದೆ. ಸಾಮಾನ್ಯ ವರ್ಷಗಳಂತೆ ವಾರ್ಷಿಕವಾಗಿ ಬಿಡುಗಡೆ ಮಾಡಬೇಕಾದ ತಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ವಾದವನ್ನು ಮಂಡಿಸಿದೆ. ಪ್ರತಿನಿತ್ಯ 12,500 ಕ್ಯುಸೆಕ್ ನೀರಿಗೆ ಬೇಡಿಕೆಯಿಟ್ಟಿದೆ. ಮುಂದಿನ 15 ದಿನ 12,500 ಕ್ಯುಸೆಕ್ ನೀರು ತಮಗೆ ಬಿಡಬೇಕೆಂದು ತಮಿಳುನಾಡು ಅಧಿಕಾರಿಗಳು ವಾದವನ್ನು ಮಂಡಿಸಿದ್ದಾರೆ.
ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ ಕರ್ನಾಟಕ ಹರಿಸಬೇಕಿರುವ ನೀರಿನ ಪ್ರಮಾಣದ ಮಾದರಿಯಲ್ಲಿಯೇ ನೀರನ್ನು ಬಿಡುವಂತೆ ತಮಿಳುನಾಡು ಅಧಿಕಾರಿಗಳು ವಾದವನ್ನು ಮಂಡಿಸಿದ್ದಾರೆ. ಅದರಂತೆ ನಾಲ್ಕು ಜೂನ್‌ನಿಂದ ಸೆಪ್ಟಂಬರ್‌ವರೆಗೆ ಒಟ್ಟು 123 ಟಿಎಂಸಿ ನೀರನ್ನು ಬಿಡಬೇಕು. ಆದರೆ, ಕರ್ನಾಟಕ ಈವರೆಗೆ ಕೇವಲ 40 ಟಿಎಂಸಿ ನೀರನ್ನು ಮಾತ್ರ ಹರಿಸಿದೆ. ಆದರೆ, ಉಳಿದ 80 ಟಿಎಂಸಿಗೂ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ವಾದವನ್ನು ಮಂಡಿಸಿದ್ದಾರೆ.
ಕಾವೇರಿ, ಕೃಷ್ಣ, ಮಹದಾಯಿ ನ್ಯಾಯಾಧೀಕರಣ ವಕೀಲರಿಗೆ 122.75 ಕೋಟಿ ಶುಲ್ಕ ಪಾವತಿ
ತಮಿಳುನಾಡಿಗೆ ಹರಿಸಿದ ನೀರಿನ ಪ್ರಮಾಣ:
(ಜೂನ್‌ನಿಂದ ಸೆಪ್ಟೆಂಬರ್ ತನಕ)
ಜೂನ್ - 9.19 ಟಿಎಂಸಿ
ಜುಲೈ - 31.24 ಟಿಎಂಸಿ
ಆಗಸ್ಟ್ - 45.59 ಟಿಎಂಸಿ
ಸೆಪ್ಟೆಂಬರ್ - 36.76 ಟಿಎಂಸಿ